ಇಂದಿರಾ ಕ್ಯಾಂಟೀನ್ ನಡೆಸುತ್ತಿರುವ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮಾಡಿಲ್ಲವೆಂಬ ಕಾರಣಕ್ಕೆ ಬಳ್ಳಾರಿ ಜಿಲ್ಲೆಯ 8 ಇಂದಿರಾ ಕ್ಯಾಟೀನ್‌ಗಳು ಸ್ಥಗಿತಗೊಂಡಿವೆ. ಈ ಎಲ್ಲ ಇಂದಿರಾ ಕ್ಯಾಟೀನ್‌ಗಳ ಸುಮಾರು 3.38 ಕೋಟಿ ರೂ. ಬಿಲ್ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆ, ವಿಮ್ಸ್, ಮೋತಿ ವೃತ್ತ, ಎಪಿಎಂಸಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳು ಹಾಗೂ ಸಿರಗುಪ್ಪ, ಕೂಡ್ಲಿಗಿ, ಸಂಡೂರಿನಲ್ಲಿದ್ದ ತಲಾ ಒಂದು ಇಂದಿರಾ ಕ್ಯಾಂಟೀನ್‌ಗಳು ಜನವರಿ 20ರಿಂದ ಮುಚ್ಚಿವೆ. ಇವುಗಳಿಗೆ 2021ರಿಂದಲೂ ಬಿಲ್ ಪಾವತಿ ಮಾಡಿಲ್ಲವೆಂದು ಕ್ಯಾಂಟೀನ್ ನಡೆಸುತ್ತಿರುವ ಏಜೆನ್ಸಿಗಳು ಆರೋಪಿಸಿವೆ.
ಬಿಲ್ ಪಾವತಿಯಾಗದ ಕಾರಣ, ತರಕಾರಿ, ಆಹಾರ ಧಾನ್ಯಗಳು, ಅಡುಗ ಅನಿಲ, ಸಿಬ್ಬಂದಿಗಳ ಸಂಬಳಕ್ಕೆ ಹಣ ಇಲ್ಲದಂತಾಗಿದೆ ಎಂದು ಏಜೆನ್ಸಿಗಳು ಹೇಳಿವೆ. ಇಂದಿರಾ ಕ್ಯಾಂಟಿನ್‌ಗಳು ಮುಚ್ಚಿರುವ ಕಾರಣ, ಕಡಿಮೆ ದರದಲ್ಲಿ ಹಸಿವು ನೀಗಿಸಿಕೊಳ್ಳುತ್ತಿದ್ದ ಬಡವರು, ಕಾರ್ಮಿಕರು ಆಹಾರಕ್ಕಾಗಿ ಹೋಟೆಲ್‌ಗಳಿಗೆ ದುಪ್ಪಟ್ಟು ಹಣ ಕೊಡುವ ಪರಿಸ್ಥಿತಿ ಎದುರಾಗಿದೆ.
ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಕುಡುಕರು, ಜೂಜು ಕೋರರು ತಮ್ಮ ಅಡ್ಡೆ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.