ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಫೆ.13ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು, ಸೈಬರ್ ಎಕ್ಸ್‌ಪರ್ಟ್ ಸಂತೋಷ್ ಬಂಧಿತರು. ಬಿಟ್ ಕಾಯಿನ್ ಪ್ರಕರಣ ಸಂಬಂಧ ಇಬ್ಬರನ್ನು ಎಸ್‌ಐಟಿ ಬಂಧನ ಮಾಡಿತ್ತು. ಎಸ್‌ಐಟಿ ಆರು ದಿನಗಳ ಕಾಲ ಆರೋಪಿಗಳನ್ನು ವಶಕ್ಕೆ ಪಡೆದಿತ್ತು. ಇದೀಗ, ಆರೋಪಿಗಳ ಕಸ್ಟಡಿ ಅವಧಿ ಅಂತ್ಯವಾಗಿದೆ. ಈ ಹಿನ್ನೆಲೆ, ಎಸಿಎಂಎಂ 1ನೇ ಕೋರ್ಟ್ಗೆ ಆರೋಪಿಗಳನ್ನು ಹಾಜರು ಪಡಿಸಲಾಗಿತ್ತು.
6 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಮತ್ತು ಟೆಕ್ನಿಕಲ್ ಎಕ್ಸ್‌ಪರ್ಟ್ ಸಂತೋಷ್ 14 ದಿನ ನ್ಯಾಯಾಂಗ ಬಂಧನಕ್ಕೆ ಹೋಗಿದ್ದಾರೆ.
ಪ್ರಕರಣದಲ್ಲಿ ಇನ್ನಷ್ಟು ವಿಚಾರಣೆ ಬಾಕಿ ಇದೆ. ಹಾಗಾಗಿ, ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಎಸ್‌ಐಟಿ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಆರೋಪಿ ಸಂತೋಷ್ ಪರ ವಕೀಲ ಸುಧನ್ವ ಆಕ್ಷೇಪಣೆ ವ್ಯಕ್ತಪಡಿಸಿದರು. 6 ದಿನಗಳ ಕಸ್ಟಡಿಯಲ್ಲಿ ತನಿಖೆಗೆ ಪೂರಕ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿಲ್ಲ ಎಂದು ವಾದ ಮಂಡಿಸಿದರು.
ಈ ಸುದ್ದಿ ಓದಿದ್ದೀರಾ? ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ. ರವೀಂದ್ರನಾಥ್ ನೇಮಕ
ವಾದ–ಪ್ರತಿವಾದ ಆಲಿಸಿದ 1ನೇ ಎಸಿಎಂಎಂ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಆದೇಶ ನೀಡಿದೆ.