ಯುಯುಸಿಎಂಎಸ್ ಪೋರ್ಟಲ್‌ನಿಂದ ಉಂಟಾದ ಸಮಸ್ಯೆಯಿಂದ, ವಿದ್ಯಾರ್ಥಿಗಳಿಗೆ ₹1,500 ಹೆಚ್ಚುವರಿ ಶುಲ್ಕ ಭರಿಸಿಕೊಳ್ಳುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ವಿಜಯಪುರ ಅಪರ ಜಿಲ್ಲಾಧಿಕಾರಿ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಒಳಪಟ್ಟ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎ ಐ ಹಂಜಗಿ ಅವರಿಗೆ ಮನವಿ ಸಲ್ಲಿಸಿದರು.
ಎಐಡಿಎಸ್‌ಒ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿ, “ನವಭಾಗ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ 5ನೇ ಸೆಮಿಸ್ಟರ್‌ನಲ್ಲಿ ಕಲಿಯುತ್ತಿರುವ ಸುಮಾರು 200ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಳ್ಳುವಾಗ ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಓಪನ್ ಎಲೆಕ್ಟೀವ್(ಒಇ) ವಿಷಯಗಳ ಆಯ್ಕೆಯಲ್ಲಿ ಒಂದೇ ವಿಷಯದ ಆಯ್ಕೆ ತೋರಿಸಿದೆ. ಇದರಿಂದ ವಿದ್ಯಾರ್ಥಿಗಳು ಒಂದೇ ವಿಷಯವನ್ನು ಆಯ್ಕೆ ಮಾಡಿದ್ದಾರೆ. ಈಗ ಎರಡು ವಿಷಯ ಆಯ್ಕೆ ಮಾಡದ ವಿದ್ಯಾರ್ಥಿಗಳು ಮೂರು ದಿನದಲ್ಲಿ ₹1,500 ದಂಡ ಪಾವತಿಸಬೇಕೆಂದಿರುವುದು ಅವೈಜ್ನಾನಿಕ” ಎಂದು ಆರೋಪಿಸಿದರು.
“ಬಹುತೇಕ ವಿದ್ಯಾರ್ಥಿಗಳು ಪ್ರತಿದಿನ ಕೆಲಸ ಮಾಡಿ ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಅನಾವಶ್ಯಕವಾಗಿ ದಂಡ ವಿಧಿಸುತ್ತಿರುವುದನ್ನು ಕೈ ಬಿಟ್ಟು, ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಉಂಟಾದ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅರ್ಜಿ ತುಂಬಲು ಅವಕಾಶ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಲೋಕಸಭೆ ಚುನಾವಣೆ: ಕರಪತ್ರ, ಪೋಸ್ಟರ್ ಮುದ್ರಣ ಮಾಹಿತಿ ನೀಡುವುದು ಕಡ್ಡಾಯ: ಜಿಲ್ಲಾಧಿಕಾರಿ
ಮನವಿಯನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಮಾತನಾಡಿ, “ಕಾಲೇಜಿನ ಪ್ರಾಂಶುಪಾಲರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ” ಎಂದು ಭರವಸೆ ನೀಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಸಿದ್ದು ಕನ್ನೂರ, ಸಿದ್ದು ನಾಯ್ಕೋಡಿ, ಸತೀಶ ಆಸಂಗಿ, ಶ್ರೀಶೈಲ ಬಡಿಗೇರ, ಶಿವು ಉಪ್ಪಾರ, ಶಿವಕುಮಾರ್ ಬೇನೂರ ಸೇರಿದಂತೆ ಇತರ ವಿದ್ಯಾರ್ಥಿಗಳು ಇದ್ದರು.