ತಲಸ್ಪರ್ಶಿ ವರದಿಗಾರಿಕೆ ಮತ್ತು ಸುದ್ದಿ ವಿಶ್ಲೇಷಣೆ scroll.in ಜಾಲತಾಣದ ವಿಶೇಷ ಹೂರಣ. ಆರ್ಥಿಕ ಸಂಕಟಗಳನ್ನು ಎದುರಿಸಿಯೂ ಪತ್ರಿಕಾವೃತ್ತಿಯ ಆದರ್ಶಗಳನ್ನು ಪಾಲಿಸಿದೆ. ಅಬ್ಬರದ ಅಲೆಗಳ ಹೊಡೆತಗಳನ್ನು ತಡೆದುಕೊಂಡು ನಿಂತಿದೆ. ಪ್ರವಾಹಕ್ಕೆದುರು ಈಜಾಡಿಯೂ ಹತ್ತು ವರ್ಷಗಳ ಕಾಲ ಉಳಿದುಕೊಂಡಿದೆ.
Scroll ಎಂಬ ಇಂಗ್ಲಿಷ್ ಪದಕ್ಕೆ ಎರಡು ಅರ್ಥಗಳುಂಟು. ಬರವಣಿಗೆಯಿರುವ ಉದ್ದನೆಯ ಕಾಗದದ ಸುರುಳಿ. ಕಂಪ್ಯೂಟರ್ ಪರದೆಯ ಮೇಲೆ ಬರೆದದ್ದು ಅಥವಾ ಚಿತ್ರಿಸಿದ್ದನ್ನು ನೋಡಲು ಎಡ-ಬಲಕ್ಕೆ ಅಥವಾ ಮೇಲೆ-ಕೆಳಗೆ ಚಲಿಸುವ ಕ್ರಿಯೆಯನ್ನೂ ಸ್ಕ್ರೋಲ್ ಎಂದು ಬಣ್ಣಿಸುವುದುಂಟು.
ಡಿಜಿಟಲ್ ಮಾಧ್ಯಮದ ಉದಯವು ಬಂಡವಾಳದ ಸಂಕೋಲೆಯಿಂದ ಸಮೂಹ ಮಾಧ್ಯಮದ ಬಿಡುಗಡೆಯ ಹಾದಿಯನ್ನು ತೆರೆಯಿತು. ಅರ್ಥಪೂರ್ಣ ಮೀಡಿಯಾಗೆ ಅವಕಾಶ ಕಲ್ಪಿಸಿತು. Scroll.in ಎಂಬ ಭಾರತೀಯ ಅಂತರ್ಜಾಲ ಇಂಗ್ಲಿಷ್ ಸುದ್ದಿತಾಣಕ್ಕೆ ಜನವರಿ 26 ಗಣರಾಜ್ಯೋತ್ಸವದಂದು ಹತ್ತು ವರ್ಷಗಳು ತುಂಬಿದವು. ಅರ್ಥಪೂರ್ಣ ಅಸ್ತಿತ್ವದ ಒಂದು ದಶಕವನ್ನು ಪೂರೈಸಿರುವ ಈ ಸುದ್ದಿ ಸಂಸ್ಥೆಗೆ ಹಾರ್ದಿಕ ಅಭಿನಂದನೆಗಳು ಸಲ್ಲಬೇಕಿವೆ. ದೇಶದ ಪರ್ಯಾಯ ಪತ್ರಿಕೋದ್ಯಮದಲ್ಲಿ ಬೆರಳೆಣಿಕೆಯ ಸುದ್ದಿ ಸಂಸ್ಥೆಗಳಲ್ಲಿ ‘ಸ್ಕ್ರೋಲ್’ ಕೂಡ ಒಂದು.
ಜನತಂತ್ರದ ಸ್ವತಂತ್ರ ಮಾಧ್ಯಮವೆಂಬುದು ಮುಕ್ತ ಸಮಾಜಗಳ ಅಡಿಗಲ್ಲು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಂಗ ಸದಾ ರಚನಾತ್ಮಕ ಪ್ರತಿಪಕ್ಷದಂತೆ ಕೆಲಸ ಮಾಡಬೇಕು, ವ್ಯವಸ್ಥೆ ಮತ್ತು ಆಡಳಿತ ವಿರೋಧಿಯಾಗಿರಬೇಕು. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಹದ್ದಿನ ಕಣ್ಣಿಟ್ಟು ಕಾದು ಜನತಂತ್ರವನ್ನು ಪೊರೆಯಬೇಕು. ಮುಖ್ಯಧಾರೆಯ ಬಹುತೇಕ ಮಾಧ್ಯಮಗಳು ಈ ಆದರ್ಶವನ್ನು ಗಾಳಿಗೆ ತೂರಿವೆ. ಸತ್ಯ ಮತ್ತು ವಾಸ್ತವತೆಗೆ ಬೆನ್ನು ತಿರುಗಿಸಿವೆ. ಲಾಭದ ಮೇಲೆ ಕಣ್ಣಿಟ್ಟು ಜನಪರ ನಿಲುವನ್ನು ತ್ಯಾಗ ಮಾಡಿವೆ. ಆಳುವವರ ಅಡಿಯಾಳುಗಳಾಗಿ ಹೋಗಿವೆ. ಓದುಗರು ಮತ್ತು ಜನತಂತ್ರ ಈ ಮಾಧ್ಯಮ ಗುಲಾಮಗಿರಿಯ ಮೊದಲ ಬಲಿ.
ಆದರೆ ‘ಸ್ಕ್ರೋಲ್’ ಈ ಪ್ರವೃತ್ತಿಗೊಂದು ಅಪವಾದ. ತಲಸ್ಪರ್ಶಿ ವರದಿಗಾರಿಕೆ ಮತ್ತು ಸುದ್ದಿ ವಿಶ್ಲೇಷಣೆ ಈ ಜಾಲತಾಣದ ವಿಶೇಷ ಹೂರಣ. ಆರ್ಥಿಕ ಸಂಕಟಗಳನ್ನು ಎದುರಿಸಿಯೂ ಪತ್ರಿಕಾವೃತ್ತಿಯ ಆದರ್ಶಗಳನ್ನು ಪಾಲಿಸಿದೆ. ಅಬ್ಬರದ ಅಲೆಗಳ ಹೊಡೆತಗಳನ್ನು ತಡೆದುಕೊಂಡು ನಿಂತಿದೆ. ಪ್ರವಾಹಕ್ಕೆದುರು ಈಜಾಡಿಯೂ ಹತ್ತು ವರ್ಷಗಳ ಕಾಲ ಉಳಿದುಕೊಂಡಿದೆ. ಶ್ರೇಷ್ಠ ಪತ್ರಿಕೋದ್ಯಮಕ್ಕೆ ನೀಡಲಾಗುವ ರಾಮನಾಥ ಗೋಯೆಂಕಾ ಪ್ರಶಸ್ತಿಗಳು ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚು ರಾಷ್ಟ್ರೀಯ- ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಪ್ರತಿಕೂಲ ವಾತಾವರಣದಲ್ಲಿ ಮಾಡಿದ ಅದ್ವಿತೀಯ ಸಾಧನೆಯಿದು. ಈ ಜಾಲತಾಣದ ಹಿಂದೀ ಆವೃತ್ತಿ ಸತ್ಯಾಗ್ರಹ್.ಕಾಂ ಕದವಿಕ್ಕಬೇಕಾಗಿ ಬಂದದ್ದು ದುರಂತ.
ಪ್ರತಿಷ್ಠಿತ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಿದ ಸಮೀರ್ ಪಾಟೀಲ್ ಎಂಬವರು ಅಮರ ಚಿತ್ರಕಥಾ ಮತ್ತು ಟಿಂಕಲ್ ಪ್ರಕಾಶಕರು. ಈ ಪ್ರಕಾಶನ ಸಂಸ್ಥೆಯನ್ನು ಮಾರಾಟ ಮಾಡಿ ಅಮೆರಿಕೆಯಲ್ಲೇ ಸ್ಕ್ರೋಲ್ ಮೀಡಿಯಾ ಇನ್ಕಾರ್ಪೊರೇಷನ್ ಸ್ಥಾಪಿಸಿದರು. ನರೇಶ್ ಫರ್ನಾಂಡಿಸ್ ಎಂಬ ಹಿರಿಯ ಪತ್ರಕರ್ತರೊಂದಿಗೆ ಕೈ ಜೋಡಿಸಿ 2014ರ ಜನವರಿಯಲ್ಲಿ Scroll.in ಎಂಬ ಭಾರತೀಯ ಸುದ್ದಿಜಾಲ ತಾಣವನ್ನು ಹುಟ್ಟಿ ಹಾಕಿದರು. (ಸ್ವತಂತ್ರ ಮತ್ತು ಸಾರ್ವಜನಿಕ ಆಶಯಗಳ ಮಾಧ್ಯಮ ಪ್ರತಿಷ್ಠಾನ (The Independent and Public Spirited Media Foundation-IPSMF), ಮೀಡಿಯಾ ಅಭಿವೃದ್ಧಿ ಹೂಡಿಕೆ ನಿಧಿ, ಒಮಿಡಿಯಾರ್ ನೆಟ್ವರ್ಕ್ ಹಾಗೂ ಖೇತಾನ್ ಅಂಡ್ ಕೋ ಸಂಸ್ಥೆಗಳು ಈ ಸಾಹಸವನ್ನು ಆರಂಭಿಕ ಹಂತದಲ್ಲಿ ಪೋಷಿಸಿದ್ದವು.
