ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳ್ಳಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಶೀಘ್ರ ಕಾಯಕಲ್ಪಕ್ಕಾಗಿ ಕಾಯುತ್ತಿದೆ.
ಬೆಳ್ಳಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿಗಳು ಕುದುರೆಲಾಯಕ್ಕಿಂತಲೂ ಅದ್ವಾನವಾಗಿದ್ದು, ಹಾಲಿ ಶಾಸಕರಾಗಲಿ ಹಿಂದಿನ ಶಾಸಕರಾಗಲೀ ಇತ್ತ ಮುಖ ಮಾಡಿಯೂ ನೋಡದೇ ಇರುವುದರಿಂದ ವಿದ್ಯಾರ್ಥಿಗಳು ಇಲ್ಲದ ಮೂಲ ಸೌಕರ್ಯಗಳ ನಡುವೆಯೇ ಪಾಠ ಕೇಳುತ್ತಿದ್ದಾರೆ.
ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿದ್ದ ಪದವಿ ಕಾಲೇಜನ್ನು ಬೆಳ್ಳಾವಿಗೆ 2019ರಲ್ಲಿ ವರ್ಗಾವಣೆ ಮಾಡಲಾಗಿದೆ. ಆಗಿನಿಂದ ಈವರೆಗೂ ಖಾಸಗಿ ಕಟ್ಟಡದಲ್ಲೇ ಕಾಲೇಜು ನಡೆಯುತ್ತಿದೆ. ಪ್ರತಿ ತಿಂಗಳು ₹32,000 ಬಾಡಿಗೆ ಕಟ್ಟುತ್ತಿದ್ದರೂ ಕೊಠಡಿಗಳಿಗೆ ಸರಿಯಾದ ತಾರಸಿಯಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲದೇ ಜೋಪಡಿಯಲ್ಲೇ ತರಗತಿಗಳನ್ನು ನಡೆಸಲಾಗುತ್ತಿದೆ. ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದೇ ಇರುವ ಕಾರಣ ಉಪನ್ಯಾಸಕರೇ ಹಣ ಹಾಕಿ ತಗಡು ಶೀಟಿನ ಶೆಡ್ ನಿರ್ಮಿಸಿ ಅದರಲ್ಲಿ ಪಾಠ ಪ್ರವಚನಗಳನ್ನು ಮಾಡುತ್ತಿದ್ದಾರೆ. ಈ ರೀತಿಯ ಉತ್ತರ ಪ್ರದೇಶದ ಮಾದರಿ ಕಾಲೇಜು ಜಿಲ್ಲೆಯಲ್ಲಿ ಇದೇ ಮೊದಲು ಎನ್ನಬಹುದು.
ಯೋಗ್ಯವಿಲ್ಲದ ಶೌಚಾಲಯ ಬಳಸಲಾಗದೆ ವಿದ್ಯಾರ್ಥಿಗಳು ಗಿಡ ಗಂಟಿಗಳ ಮರೆಯನ್ನು ಅವಲಂಬಿಸಬೇಕಿದೆ. ಹೆಣ್ಣು ಮಕ್ಕಳು ಟಾಯ್ಲೆಟ್ ಬಳಸಲಾಗದೆ ಹೊರಗಡೆಯೂ ಹೋಗಲಾಗದೆ ನರಕ ಅನುಭವಿಸುತ್ತಿದ್ದಾರೆ. ಇದರಿಂದ ಕಿಡ್ನಿ ಸ್ಟೋನ್, ಮೂತ್ರ ಸೋಂಕು ಬರುವ ಸಾಧ್ಯತೆ ಇದೆ. 106 ಮಂದಿ ವಿದ್ಯಾರ್ಥಿಗಳಿಗೆ ಹೆಣ್ಣು ಮತ್ತು ಗಂಡು ಮಕ್ಕಳ ಶೌಚಾಲಯ ಒಂದೊಂದು ಮಾತ್ರ ಇದೆ. ಆ ಶೌಚಾಲಯಗಳು ಬಳಸಲು ಯೋಗ್ಯವಾಗಿಲ್ಲ. ಮಳೆ ಬಂದಾಗ ಬೋಧಾನ ಕೊಠಡಿಗಳ ಗೋಡೆಗಳು ತನುವಾಗಿ ನೀರು ಸೋರುತ್ತಿರುತ್ತದೆ. ಇವೆಲ್ಲವನ್ನು ಸಹಿಸಕೊಂಡು ಓದಲೇ ಬೇಕಾದ ಅನಿವಾರ್ಯ ವಿದ್ಯಾರ್ಥಿಗಳಿಗಿದೆ.
ಕಾರ್ಯಕ್ರಮ ಆಯೋಜನೆಗೆ ಸಭಾಂಗಣದ ಅಗತ್ಯವಿದೆ. ಗ್ರಂಥಾಲಯ ಗೋಡೌನ್ ಆಗಿ ಪರಿವರ್ತನೆಯಾಗಿದ್ದು, ಎಲ್ಲಾ ತರಗತಿಗಳ ಕೊಠಡಿಗಳಲ್ಲಿ ನಿರುಪಯುಕ್ತ ವಸ್ತುಗಳನ್ನು ತುಂಬಲಾಗಿದೆ. ಧೂಳು ತುಂಬಿದ ಕೊಠಡಿಗಳಲ್ಲೇ ವಿದ್ಯಾರ್ಥಿಗಳು ಪಾಠ ಪ್ರವಚನಗಳನ್ನು ಕೇಳುತ್ತಿದ್ದಾರೆ. ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಡಿಜಿಟಲ್ ಲೈಬ್ರೆರಿಯೂ ಇಲ್ಲ. ಯುಜಿಸಿ ನಿಯಮಾನುಸಾರ ಯಾವುದೇ ಸೌಲಭ್ಯ ಈ ಪದವಿ ಕಾಲೇಜಿಗೆ ಇಲ್ಲ. ಶೇ.85ರಷ್ಟು ಫಲಿತಾಂಶವಿರುವ ಈ ಕಾಲೇಜಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು, ಅವರು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದಿದ್ದಾರೆ.
ಈ ಎಲ್ಲ ಕೊರಕತೆಗಳ ನಡುವೆಯೂ ಮಕ್ಕಳು ಕಾಲೇಜಿಗೆ ಬರುತ್ತಿದ್ದಾರೆ. ಕುಟುಂಬದ ಇತಿಹಾಸದಲ್ಲೇ ಮೊದಲ ಬಾರಿಗೆ ಪದವಿ ಮೆಟ್ಟಿಲು ಹತ್ತಿರುವ ಹಾಗೂ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳ ಕನಸಿಗೆ ಅಕ್ಷರಶಃ ಸುಡುವ ಗಂಜಿ ಎರಚಿದಂತಾಗಿದೆ.
ಆರು ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿದ್ದು, ಸಿಬ್ಬಂದಿಗಳಿಗಾಗಿ 2 ಸ್ಟಾಫ್ ಕೊಠಡಿಗಳಿವೆ. ದೊಡ್ಡೇರಿ, ಚೇಳೂರು, ನಂದಿಹಳ್ಳಿ, ದೊಡ್ಡವೀರನಹಳ್ಳಿ, ಚನ್ನೇನಹಳ್ಳಿ, ಹರಳೇಕಟ್ಟೆ, ಸೋರೇಕುಂಟೆ, ಬುಗುಡನ ಹಳ್ಳಿ, ಭೀಮಸಂದ್ರ, ಮಂಚಲದೊರೆ ಸೇರಿದಂತೆ ಬೆಳ್ಳಾವಿ ಹೋಬಳಿಯ ಹಳ್ಳಿಗಳಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣಕ್ಕಾಗಿ ಸೈಕಲ್ ತುಳಿದುಕೊಂಡೇ ಕಾಲೇಜಿಗೆ ಬರುತ್ತಿದ್ದಾರೆ. ಇಲ್ಲಿ ಹತ್ತು ಮಂದಿ ಅತಿಥಿ ಉಪನ್ಯಾಸಕರಿದ್ದು, ಐದು ಮಂದಿ ಖಾಯಂ ಸಿಬ್ಬಂದಿಗಳಿದ್ದಾರೆ. ಬೋಧಕೇತರ ಸಿಬ್ಬಂದಿ ಮೂರು ಮಂದಿ ಮಾತ್ರ ಇದ್ದಾರೆ. ಪ್ರಥಮ ಮತ್ತು, ದ್ವಿತೀಯ ಬಿಎ, ಬಿಕಾಂ ವಿದ್ಯಾರ್ಥಿಗಳು ಒಟ್ಟು 106 ಮಂದಿ ಇದ್ದಾರೆ. ಇಷ್ಟು ಮಂದಿಗೆ ಕೇವಲ 6 ಕೊಠಡಿಗಳಿವೆ.
ಕಾಲೇಜಿನ ಪ್ರಾಂಶುಪಾಲ ಡಾ ಕೆ ಎಸ್ ವಿಶ್ವನಾಥ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತುಮಕೂರು ತಾಲೂಕಿನ ತಿಮ್ಮಲಪುರದ ಬಳಿ ಕಾಲೇಜಿಗೆ ಭೂಮಿ ಗುರುತಿಸಲಾಗಿದೆ. ಭೂಮಿ ಮಂಜೂರು ಆಗಿ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣವಾದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಕಟ್ಟಡದ ಮಾಲೀಕರು ಸುಣ್ಣಬಣ್ಣ ಹೊಡೆಸಿಕೊಟ್ಟಿದ್ದಾರೆ. ಆದರೂ ಇರುವ ವ್ಯವಸ್ಥೆಯಲ್ಲಿಯೇ ನಿರ್ವಹಣೆ ಮಾಡುತ್ತಿದ್ದೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | 8 ಇಂದಿರಾ ಕ್ಯಾಂಟೀನ್‌ಗಳು ಬಂದ್
“ಸರ್ಕಾರ ಮತ್ತು ಸ್ಥಳೀಯ ಶಾಸಕರು ಗಮನ ಹರಿಸಿ ಹಳ್ಳಿಯ ಬಡ ಕುಟುಂಬದಿಂದ ಬರುವ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯ ಒಳಗೊಂಡ ಗುಣಮಟ್ಟದ ಶಿಕ್ಷಣ ದೊರಯುವಂತೆ ಮಾಡಬೇಕಾಗಿದೆ. ಕಾಲೇಜಿಗೆ ಭೂಮಿ ಮಂಜೂರು ಮಾಡಿ, ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು” ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಈ ಕುರಿತು ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಅವರನ್ನು ಹಲವು ಬಾರಿ ಫೋನ್ ಮೂಲಕ ಸಂಪರ್ಕಿಸಿದರೂ ಅವರು ಲಭ್ಯವಾಗಲಿಲ್ಲ.