- ಚಿಂಚನಸೂರ್ ಅವರ ತಲೆ, ಮುಖ ಹಾಗೂ ಕೈ-ಕಾಲುಗಳಿಗೆ ಗಾಯ
- ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ಅಪಘಾತ ಸಂಭವಿಸಿದೆ
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರ ಕಾರು ಅಪಘಾತವಾಗಿದ್ದು, ಕಾರಿನಲ್ಲಿದ್ದ ಚಿಂಚನಸೂರ್ ಅವರ ತಲೆ, ಮುಖ ಹಾಗೂ ಕಾಲುಗಳಿಗೆ ಗಾಯಗಳಾಗಿವೆ.
ಶುಕ್ರವಾರ ತಡರಾತ್ರಿ 12:30ರ ಸುಮಾರಿಗೆ ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ಘಟನೆ ನಡೆದಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಅವರನ್ನು ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದಲ್ಲಿ ಚಿಂಚನಸೂರ್ ಅವರ ತಲೆ, ಮುಖ ಹಾಗೂ ಕೈ-ಕಾಲುಗಳಿಗೆ ಗಾಯಗಳಾಗಿವೆ. ಚಾಲಕ ಮತ್ತು ಗನ್‌ಮ್ಯಾನ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಚುನಾವಣೆ ಹಿನ್ನಲೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದಲ್ಲಿ ಪ್ರಚಾರ ಮುಗಿಸಿಕೊಂಡು ಕಲಬುರಗಿಯ ಶಾಂತಿನಗರದಲ್ಲಿರುವ ಮನೆಗೆ ವಾಪಸ್ ಬರುವಾಗ ನಿದ್ದೆಯ ಮಂಪರಿನಲ್ಲಿದ್ದ ವಾಹನ ಚಾಲಕನಿಗೆ ಆಕಾಶವಾಣಿ ಕೇಂದ್ರದ ಬಳಿ ರಸ್ತೆಯ ಮಧ್ಯೆ ಇರುವ ಗುಂಡಿ ಕಾಣದೆ, ಕಾರು ಗುಂಡಿಯಲ್ಲಿ ಸಿಲುಕಿ ಸ್ಕಿಡ್ ಆಗಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಎಲುಬು ಹಾಗೂ ನರಗಳಿಗೆ ಪೆಟ್ಟು ಬಿದ್ದಿದೆ. ಆಸ್ಪತ್ರೆಯ ತಜ್ಞ ವೈದ್ಯರು ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್-ಬಿಜೆಪಿ-ಕಾಂಗ್ರೆಸ್ ಚಿಂಚನಸೂರ್
ಹೈದರಾಬಾದ್ ಕರ್ನಾಟಕದ ಪ್ರಭಾವಿ ನಾಯಕರಾದ ಬಾಬೂರಾವ್ ಚಿಂಚನಸೂರು ಅವರು 2008, 2013ರ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದಿಂದ ಗೆದ್ದಿದ್ದರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಬಳಿಕ 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪ ಮಾಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಈಗ ಮತ್ತೆ ಬಿಜೆಪಿ ಎಂಎಲ್‌ಸಿ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಗುರುಮಿಠಕಲ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ; ಪೀಡೆ ತೊಲಗಿತು ಎಂದ ರಮೇಶ್ ಜಾರಕಿಹೊಳಿ
ನಾಮಪತ್ರ ಸಲ್ಲಿಕೆ ಮೂಂದೂಡಿಕೆ
ಬಾಬುರಾವ್ ಚಿಂಚನಸೂರ್ ಅವರು ನಾಮಪತ್ರ ಸಲ್ಲಿಕೆಯ ತಯಾರಿಯಲ್ಲಿದ್ದರು. ಆದರೆ, ರಸ್ತೆ ಅಪಘಾತದಲ್ಲಿ ಗಾಯವಾದ ಹಿನ್ನಲೆ ನಾಮಪತ್ರ ಸಲ್ಲಿಕೆ ಸದ್ಯಕ್ಕೆ ಮುಂದೂಡಿಕೆಯಾಗಿದೆ ಎಂದು ತಿಳಿದುಬಂದಿದೆ.