2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವಂತೆ ಸಾರಿಗೆ ಇಲಾಖೆ ನೀಡಿದ್ದ ಗಡುವು ಫೆ.17ಕ್ಕೆ ಅಂತ್ಯವಾಗಲಿದೆ. ನಂಬರ್ ಪ್ಲೇಟ್ ಬದಲಾವಣೆಗೆ ವಾಹನ ಮಾಲೀಕರು ಆಸಕ್ತಿ ತೋರದ ಹಿನ್ನೆಲೆ, ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿರುವ ಸಾರಿಗೆ ಇಲಾಖೆ ಫೆ.17 ರಿಂದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನ ಮಾಲೀಕರಿಗೆ ದಂಡ ವಿಧಿಸಲು ಮುಂದಾಗಿದೆ.
2019ರ ಏಪ್ರಿಲ್‌ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ವಾಹನ ಮಾಲೀಕರು ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಾಯಿಸಿ ಆನ್‌ಲೈನ್ ಮೂಲಕವೇ ಹೆಚ್‌ಎಸ್‌ಆರ್‌ಪಿ ಶುಲ್ಕವನ್ನು ಪಾವತಿಸಿ ನಂತರ ವಾಹನ ಡೀಲರ್ ಬಳಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ತಿಳಿಸಿತ್ತು.
ಎಚ್‌ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಲಾಗಿದ್ದು, ಇದರಲ್ಲಿ ಲೇಸರ್ ಕೋಡ್ ಇದ್ದು ಸ್ಕ್ಯಾನ್ ಮಾಡಿದಾಗ ವಾಹನದ ಸಂಪೂರ್ಣ ಮಾಹಿತಿ ದೊರೆಯಲಿದೆ. ಜತೆಗೆ, ಅಶೋಕಚಕ್ರದ ಚಿತ್ರವನ್ನು ಒಳಗೊಂಡಿದೆ. ನಕಲಿ ನಂಬರ್ ಪ್ಲೇಟ್ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಈಗಾಗಲೇ, ರಾಜ್ಯ ಸಾರಿಗೆ ಇಲಾಖೆ ಎಚ್‌ಎಸ್‌ಆರ್‌ಪಿ ಬೋರ್ಡ್ ಹಾಕಿಸಿಕೊಳ್ಳಲು ವಾಹನ ಸವಾರರಿಗೆ ಕೊನೆಯ ದಿನಾಂಕ ನಿಗದಿ ಮಾಡಿದೆ. ಎಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ 2023ರ ನ.17ರ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ನಿರಾಸಕ್ತಿ ತೋರಿದ ಹಿನ್ನೆಲೆ 2024ರ ಫೆ.17ರವರೆಗೆ ವಿಸ್ತರಣೆ ಮಾಡಲಾಗಿತ್ತು. ಈಗಾಗಲೇ ಎರಡು ಬಾರಿ ಅವಧಿ ವಿಸ್ತರಣೆ ಮಾಡಿರುವ ಇಲಾಖೆ ಇದೀಗ ಫೆ.17 ಕೊನೆಯ ದಿನಾಂಕವಾಗಿದೆ.
ಜನರು ಯಾರು ಕೂಡ ಹೊಸ ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ. ಈ ಹಿನ್ನೆಲೆ, ಸಾರಿಗೆ ಇಲಾಖೆ ದಂಡ ಪ್ರಯೋಗಕ್ಕೆ ಮುಂದಾಗಿದ್ದು, ಫೆ.17 ರಿಂದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನ ಮಾಲೀಕರಿಗೆ ದಂಡ ವಿಧಿಸಲಿದೆ. ಮೊದಲ ಬಾರಿಗೆ ಸಿಕ್ಕಿಬಿದ್ದರೆ ₹1 ಸಾವಿರ, ಎರಡನೇ ಬಾರಿ ಸಿಕ್ಕಿಬಿದ್ದರೆ ₹2 ಸಾವಿರ ದಂಡ ವಿಧಿಸುತ್ತದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಶವಾಗಾರ ಕಟ್ಟಡ ನಿರ್ಮಾಣಕ್ಕಾಗಿ 70 ಮರ ಕಡಿಯಲು ಮುಂದಾದ ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು
ಫೆ.17 ಎಚ್‌ಎಸ್‌ಆರ್‌ಪಿ ಹಾಕಿಸಲು ಕೊನೆಯ ದಿನಾಂಕವಾಗಿದ್ದು, ಇನ್ನು ಗಡುವು ಅಂತ್ಯವಾಗಲು 16 ದಿನಗಳು ಬಾಕಿ ಉಳಿದಿವೆ. ಆರ್‌ಟಿಓ ನೋಂದಣಿ ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೆಯ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ. ಆದರೆ, ಇಲ್ಲಿಯವರೆಗೂ ₹10 ಲಕ್ಷ ವಾಹನಗಳಷ್ಟೇ ಎಚ್‌ಎಸ್‌ಆರ್‌ಪಿ ಹಾಕಿಸಿಕೊಂಡಿವೆ ಎಂದು ಸಾರಿಗೆ ಇಲಾಖೆಯ ಅಡಿಷನಲ್ ಕಮೀಷನರ್ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಗಡುವು ಮುಗಿಯುವಷ್ಟರಲ್ಲಿ ಎಚ್‌ಎಸ್‌ಆರ್‌ಪಿ ಹಾಕಿಸಿಕೊಳ್ಳದಿದ್ದರೆ ಅಂತಹವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಹಾಗೂ ಆರ್‌ಟಿಓ ಅಧಿಕಾರಿಗಳು ಜಂಟಿಯಾಗಿ ದಂಡಾಸ್ತ್ರ ಪ್ರಯೋಗ ಆರಂಭ ಮಾಡಲಿದ್ದಾರೆ.