ಹವಾಮಾನ ವೈಪರೀತ್ಯದಿಂದ ಪ್ರಮುಖ ಹಿಂಗಾರು ಬೆಳೆ ಕಡಲೆ ಬೆಳೆಯ ಇಳುವರಿ ತೀವ್ರ ಕುಸಿತ ಕಂಡಿದೆ. ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ವ್ಯಾಪ್ತಿಯಲ್ಲಿ ಕಡಲೆ ಕೊಯ್ಲು ನಡೆದಿದ್ದು, ಇಳುವರಿಯಲ್ಲಿ ಭಾರಿ ಕುಸಿತವಾಗಿದ್ದು ಬರದಿಂದ ಹೈರಾಣಾಗಿದ್ದ ರೈತರನ್ನು ಮತ್ತೇ ಸಂಕಷ್ಟಕ್ಕೆ ದೂಡಿದೆ.
ಅಕ್ಟೋಬರ್ ಅಂತ್ಯದಲ್ಲಿ ರೈತರು ಕಡಲೆ ಬೀಜ ಬಿತ್ತನೆ ಮಾಡಿದ್ದರು. ಡಿಸೆಂಬರ್ ನಲ್ಲಿ ಹೂವು ಬಿಡುವ ಕಾಲದಲ್ಲಿ ಮಂಜು ಬೀಳಲಿಲ್ಲ. ಚಳಿ ಪ್ರಮಾಣ ಕಡಿಮೆ ಇತ್ತು. ಕಾರಣ, ನಿರೀಕ್ಷಿಸಿತ ಪ್ರಮಾಣದಲ್ಲಿ ಕಾಯಿಕಟ್ಟಲಿಲ್ಲ. ಬಿತ್ತನೆ ಮೊದಲು ನೆಲ ಹಸಿಯಾಗುವಷ್ಟು ಒಂದು ಮಳೆಯಾಗಿತ್ತು. ಬಿತ್ತಿದ ನಂತರ ಒಂದು ಮಳೆಯಾಗಿ, ಇಬ್ಬನಿ ಬಿದ್ದಿದ್ದರೆ ಕಡಲೆ ಸಮೃದ್ಧವಾಗಿ ಬೆಳೆಯುತ್ತಿತ್ತು. ಆದರೆ, ಮಳೆಯೂ ಬರಲಿಲ್ಲ ಇಬ್ಬನಿಯೂ ಬೀಳದೆ ಗಿಡಗಳು ಚನ್ನಾಗಿ ಬೆಳೆಯಲಿಲ್ಲ ಎನ್ನುತ್ತಾರೆ ಈಭಾಗದ ರೈತರು.
ಬಿತ್ತನೆಗೆ ಪ್ರತಿ ಎಕರೆಗೆ 4,000 ರೂ.ದಿಂದ 5,000 ರೂ. ಖರ್ಚು ತಗುಲಿದೆ. ಕೊಯ್ಲು, ಯಾಂತ್ರಿಕ ಒಕ್ಕಣೆಗೆ ಪ್ರತಿ ಎಕರೆಗೆ 4,000 ರೂ. ಖರ್ಚಾಗುತ್ತದೆ. ಕಳೆ, ಔಷಧ ಸಿಂಪಡಣೆಗೆ 4,000ರೂ. ಖರ್ಚು ಆಗಿದೆ. ಪ್ರತಿ ಎಕರೆಗೆ ಕಡಲೆ ಬೆಳೆಯಲು 12, 000 ರೂ. ಖರ್ಚಾಗುತ್ತದೆ. ಬಹುತೇಕ ಹೊಲಗಳಲ್ಲಿ 2 ಕ್ವಿಂಟಲ್‌ಗಿಂತ ಹೆಚ್ಚು ಇಳುವರಿ ಬಂದಿಲ್ಲ ಎನ್ನುತ್ತಿದ್ದಾರೆ ರೈತರು.
ಮಳೆಯಾಧಾರಿತ ಕೃಷಿ ಭೂಮಿಯಲ್ಲಿ ಈ ಬಾರಿ ಪ್ರತಿ ಎಕರೆಗೆ ಗರಿಷ್ಠ ಮೂರು ಕ್ವಿಂಟಲ್ ಕಡಲೆ ಇಳುವರಿ ಬಂದರೆ ಹೆಚ್ಚು. ಕಡಲೆ ಬೆಳೆಗೆ ನೀರು ಹಾಯಿಸಿರುವ ರೈತರ ಹೊಲಗಳಲ್ಲಿ 6ರಿಂದ 7 ಕ್ವಿಂಟಲ್ ಇಳುವರಿ ಬರಲಿದೆ ಎನ್ನುವುದು ರೈತರ ಅಭಿಪ್ರಾಯ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 5000ರೂ. ಇದೆ. ಇಳುವರಿ ಕುಸಿತದಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ಜಿಲ್ಲೆಯ ಈ ಭಾಗದಲ್ಲಿ ಕಡಲೆಯನ್ನು ವ್ಯಾಪಕವಾಗಿ ಬೆಳೆಯುತ್ತಾರೆ. ಈ ಬಾರಿ 650 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದೆ. ಮಳೆ ಕೊರತೆ ಹವಾಮಾನ ವೈಪರೀತ್ಯದಿಂದ ಇಳುವರಿ ತೀವ್ರ ಕುಸಿದಿದೆ. ಕಳೆದ ಬಾರಿ ಪ್ರತಿ ಎಕರೆಗೆ 8 ಕ್ವಿಂಟಲ್ ವರೆಗೆ ಇಳುವರಿ ಬಂದಿತ್ತು ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.