ಜಾರಿ ನಿರ್ದೇಶನಾಲಯ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಿರುವ ಕ್ರಮದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜೆಎಂಎಂ ಮುಖ್ಯಸ್ಥರನ್ನು ಬೆದರಿಸುತ್ತಿರುವುದು ಹತಾಶೆಯನ್ನು ಮರುಕಳಿಸುವ ವರ್ತನೆ ಎಂದು ಎಂ ಕೆ ಸ್ಟಾಲಿನ್ ಹೇಳಿದರೆ, ಲೋಕಸಭಾ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಎಲ್ಲರನ್ನು ಜೈಲಿಗೆ ಕಳಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೇಮಂತ್ ಸೊರೇನ್ ಅವರನ್ನು ಬಂಧಿಸುವ ಮೂಲಕ ರಾಜಕೀಯ ಪಿತೂರಿಯ ಅಬ್ಬರದ ಪ್ರದರ್ಶನ ನಡೆಸುತ್ತಿದೆ. ತನಿಖಾ ಸಂಸ್ಥೆಗಳ ಮೂಲಕ ಬುಡಕಟ್ಟು ನಾಯಕನಿಗೆ ಕಿರುಕುಳ ನೀಡುತ್ತಿರುವುದು ಅತ್ಯಂತ ಕೆಳಮಟ್ಟದ್ದಾಗಿದೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹತಾಶೆಯನ್ನು ಮರುಕಳಿಸುವ ವರ್ತನೆಯಾಗಿದೆ. ಬಿಜೆಪಿಯ ಕೆಟ್ಟ ತಂತ್ರಗಳು ವಿಪಕ್ಷಗಳ ಧನಿಯನ್ನು ಅಡಗಿಸಲು ಸಾಧ್ಯವಿಲ್ಲ” ಎಂದು ಎಂ ಕೆ ಸ್ಟಾಲಿನ್ ಎಕ್ಸ್‌ನಲ್ಲಿ ಖಂಡಿಸಿದ್ದಾರೆ.
“ಬಿಜೆಪಿಯ ಪಿತೂರಿಯ ರಾಜಕಾರಣದ ಹೊರತಾಗಿಯೂ ಹೇಮಂತ್ ಸೊರೇನ್ ಗಟ್ಟಿಯಾಗಿ ನಿಂತುಕೊಳ್ಳಲಿದ್ದು, ಯಾವುದೇ ಕಾರಣಕ್ಕೂ ತಲೆಬಾಗುವುದಿಲ್ಲ. ಸಂಕಷ್ಟದ ನಡುವೆಯೂ ಅವರ ಸ್ಥೈರ್ಯ ಶ್ಲಾಘನೀಯ. ಬಿಜೆಪಿಯ ಬೆದರಿಕೆ ತಂತ್ರಗಳನ್ನು ಎದುರಿಸುತ್ತಿರುವ ಅವರ ಬದ್ಧತೆ ನಿಜಕ್ಕೂ ಸ್ಪೂರ್ತಿ” ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರವಾಹಕ್ಕೆದುರು ದಶಕ ಕಾಲದ ಈಜು- Scroll.in ಗೆ ಅಭಿನಂದನೆ!
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಹೇಮಂತ್ ಸೊರೇನ್ ಅವರ ಬಂಧನವನ್ನು ಉಗ್ರವಾಗಿ ಟೀಕಿಸಿದ್ದಾರೆ. ಲೋಕಸಭಾ ಚುನಾವಣೆಯನ್ನು ಗೆಲ್ಲುವ ಏಕೈಕ ಉದ್ದೇಶದಿಂದ ಬಿಜೆಪಿ ಎಲ್ಲರನ್ನು ಜೈಲಿಗೆ ಕಳಿಸುತ್ತಿದೆ ಎಂದಿದ್ದಾರೆ.
ಎಎಪಿ ನಾಯಕ ಹಾಗೂ ದೆಹಲಿ ಸಚಿವ ಅತೀಶಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೇಮಂತ್ ಸೊರೇನ್ ಅವರ ಬಂಧಿಸುತ್ತಿರುವ ಕ್ರಮವು ಲೋಕಸಭಾ ಚುನಾವಣೆಗಳಿಗೂ ಮುನ್ನ ವಿಪಕ್ಷಗಳ ಮೇಲೆ ದಾಳಿ ನಡೆಸುವ ಒಂದು ಪ್ರಯತ್ನವಾಗಿದೆ. ಮುಂದಿನ ಒಂದು ತಿಂಗಳೊಳಗೆ ಹಲವು ವಿಪಕ್ಷ ನಾಯಕರು ಬಂಧನಕ್ಕೊಳಗಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇ.ಡಿ ಯಿಂದ ಬಂಧನಕ್ಕೊಳಗಾಗಿರುವ ಸೊರೇನ್ ಅವರನ್ನು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕೋರ್ಟ್ ಆದೇಶಿಸಿದೆ. ಬಂಧನ ಕ್ರಮ ಪ್ರಶ್ನಿಸಿ ಸೊರೇನ್ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ನಾಳೆ ವಿಚಾರಣೆ ನಡೆಯಲಿದೆ.