ರಾಷ್ಟ್ರೀಯ ಆದರ್ಶಗಳನ್ನು ಅಳವಡಿಸುವ ಉದ್ದೇಶದಿಂದ 1920ರಲ್ಲಿ ಆರಂಭವಾದ ಬೆಂಗಳೂರಿನ ನ್ಯಾಷನಲ್ ಎಜುಕೇಷನ್ ಸೊಸೈಟಿಯಲ್ಲಿ ದಲಿತ ವಿರೋಧಿ ಧೋರಣೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುತ್ತಿರುವ ಬಸವನಗುಡಿಯ ನ್ಯಾಷನಲ್ ಕಾಲೇಜ್‌ನಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಆದರೆ, ಕಳೆದ ಹಲವು ವರ್ಷಗಳಿಂದ ದಲಿತರ ವಿರೋಧಿಯಾಗಿ ಈ ಸಂಸ್ಥೆಯಲ್ಲಿ ಕಾರ್ಯಚಟುವಟಿಗಳು ನಡೆಯುತ್ತಿವೆ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಹೌದು, ಕಳೆದ 13 ವರ್ಷದಿಂದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ರವಿಕುಮಾರ್ ಭಾಗಿ ಅವರನ್ನು ಡಿಗ್ರಿ ಕಾಲೇಜಿನಿಂದ ಪಿಯು ಕಾಲೇಜಿಗೆ ಹಿಂಬಡ್ತಿ ನೀಡಲಾಗಿದೆ. ಅಲ್ಲದೇ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಮಾರ್ಗದರ್ಶಕರಾಗಲು ಸೇವಾ ಧೃಢೀಕರಣ ಪತ್ರವನ್ನು ಕಾಲೇಜಿನ ಪ್ರಾಂಶುಪಾಲರು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಇನ್ನು, ಸಾವಿರಾರು ಬಡ ಮಕ್ಕಳು ಗ್ರಾಮೀಣ ಪ್ರದೇಶದಿಂದ ನ್ಯಾಷನಲ್ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಆದರೆ, ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಶುಲ್ಕ ಕೂಡ ಜಾಸ್ತಿ ಮಾಡಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಸದ್ಯ ಈ ವಿಚಾರವಾಗಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಸೇರಿದಂತೆ 50ಕ್ಕೂ ಹೆಚ್ಚು ಜನ ಬಸವನಗುಡಿ ನ್ಯಾಷನಲ್ ಕಾಲೇಜಿನ ಕಾರ್ಯದರ್ಶಿ ವೆಂಕಟಶಿವರೆಡ್ಡಿ ಜತೆಗೆ ಫೆಬ್ರುವರಿ 2ರಂದು ಚರ್ಚಿಸಿದರು.
ಚರ್ಚೆಯಲ್ಲಿ ಮಾತನಾಡಿದ ಪ್ರಾಧ್ಯಾಪಕ ಡಾ.ರವಿಕುಮಾರ್ ಭಾಗಿ, “ಕಳೆದ 13 ವರ್ಷದಿಂದ ಬಸವನಗುಡಿಯ ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪದವಿ, ಸ್ನಾತಕೋತ್ತರ ಪದವಿಗಳಿಗೆ ಬೋಧಿಸಿದ್ದೇನೆ. ಪಿಎಚ್‌ಡಿ ಪದವಿಯನ್ನು ಹೊಂದಿದ್ದೇನೆ. ಸ್ನಾತಕೋತ್ತರ ಕೇಂದ್ರದ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಯಾವ ಸೂಚನೆಯನ್ನು ನೀಡದೆ ಏಕಾಏಕಿ ದುರುದ್ದೇಶದಿಂದ ಜಯನಗರ ನ್ಯಾಷನಲ್ ಪಿಯುಸಿ ಕಾಲೇಜಿಗೆ ಹಿಂಬಡ್ತಿ ನೀಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಪ್ರಾಂಶುಪಾಲರಾದ ವೈ.ಸಿ.ಕಮಲಾ ಅವರು ಅಧ್ಯಾಪಕರು ಮತ್ತು ವಿಧ್ಯಾರ್ಥಿಗಳಲ್ಲಿ ನೇರವಾಗಿಯೇ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ನಾನು ಪರಿಶಿಷ್ಟ ಜಾತಿಗೆ ಸೇರಿದವನು. ಡಾ. ಶಿವಣ್ಣ ಇವರು ಪ್ರವರ್ಗ-1ರ ಬೆಸ್ತರ್ ಜಾತಿಗೆ ಸೇರಿದ್ದಾರೆ. ನಾವಿಬ್ಬರು ಸಂಶೋಧನಾ ಮಾರ್ಗದರ್ಶಕರಾದರೇ, ಸಂಸ್ಥೆಗೆ ಒಂದು ಹೆಮ್ಮೆ ಎಂದು ಲೆಕ್ಕಿಸದೇ ಕೆಳಜಾತಿಯವರು ಸಂಶೋಧನಾ ಮಾರ್ಗದರ್ಶಕರಾಗಬಾರದು ಎಂಬ ಜಾತಿವಾದಿ ಮನಸ್ಥಿತಿಯಿಂದ ಇಬ್ಬರೂ ಸಂಶೋಧನಾ ಮಾರ್ಗದರ್ಶಕರಾಗುವುದನ್ನು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ವ್ಯವಸ್ಥಿತವಾಗಿ ತಡೆಹಿಡಿದು ಇಬ್ಬರಿಗೂ ಅನ್ಯಾಯ ಎಸಗುತ್ತಿದ್ದಾರೆ. ಕಾಲೇಜಿನಲ್ಲಿ ನಡೆಯುತ್ತಿರುವ ಜಾತಿ ಕಿರುಕುಳದ ಬಗ್ಗೆ ಇದು ಒಂದು ಉದಾಹರಣೆ ಅಷ್ಟೆ. ಈ ಸಂಸ್ಥೆಯ ಆಧೀನದಲ್ಲಿರುವ ಎಲ್ಲ ಶಾಲಾ ಕಾಲೇಜುಗಳಲ್ಲಿ ದಲಿತ, ಹಿಂದುಳಿದ ನೌಕರರು ಕಿರುಕುಳದ ಜತೆಗೆ ಈ ತಾರತಮ್ಯಗಳನ್ನು ಎದುರಿಸುತ್ತ ಅಸಹಾಯಕ ಸ್ಥಿತಿಯ ಭಯದಲ್ಲಿ ಕಾರ್ಯನಿರ್ವಹಿಸುತ್ತ ಜೀವಿಸುತ್ತಿದ್ದಾರೆ” ಎಂದು ಹೇಳಿದರು.
ಸಭೆಯಲ್ಲಿ ಪ್ರತಿಕ್ರಿಯಿಸಿದ ಕಾಲೇಜಿನ ಕಾರ್ಯದರ್ಶಿ ವೆಂಕಟಶಿವರೆಡ್ಡಿ, “ಕಾಲೇಜು ನಡೆಸಬೇಕೆಂದರೆ, ಶುಲ್ಕ ತೆಗೆದುಕೊಳ್ಳಲೇಬೇಕು. ಇಲ್ಲ ಮುಚ್ಚಬೇಕಾಗುತ್ತದೆ. ಶುಲ್ಕ ತೆಗೆದುಕೊಳ್ಳಲಿಲ್ಲ ಎಂದರೆ, ಸಂಬಳ ಎಲ್ಲಿಂದ ಕೊಡಬೇಕು. ಸರ್ಕಾರ 20,000 ತೆಗೆದುಕೊಳ್ಳುತ್ತದೆ. ನಾನು ಎಲ್ಲಿಂದ ಕಟ್ಟಬೇಕು” ಎಂದು ಬೇಜಾವಬ್ದಾರಿ ಉತ್ತರ ನೀಡಿದರು.
ಪ್ರಾಧ್ಯಾಪಕ ರವಿಕುಮಾರ ಭಾಗಿ ಅವರ ಹಿಂಬಡ್ತಿ ಬಗ್ಗೆ ಮಾತನಾಡಿದ ಅವರು, “ಡಿಗ್ರಿಯಿಂದ ಪಿಯು ಕಾಲೇಜಿಗೆ ಹಾಕಿರುವುದು ಹಿಂಬಡ್ತಿ ಇಲ್ಲ. ಇಲ್ಲಿ ಪಿಜಿ ಕೋರ್ಸ್ ಇಲ್ಲ. ಶನಿವಾರ ಅಥವಾ ಸೋಮವಾರ ಆಡಳಿತ ಮಂಡಳಿ ಜತೆಗೆ ಮಿಟೀಂಗ್ ಮಾಡಿ ರವಿಕುಮಾರ್ ಭಾಗಿ ಅವರ ಹಿಂಬಡ್ತಿ ಹಾಗೂ ಪಿಎಚ್‌ಡಿ ಸಂಶೋಧನಾ ಸೇವಾ ಧೃಢೀಕರಣ ಪತ್ರ ನೀಡುವ ಬಗ್ಗೆ ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತೇವೆ. ವಾರ್ಷಿಕ ಕಾರ್ಯಚಟುವಟಿಕೆಗಳ ಪಟ್ಟಿಯಲ್ಲಿ ಅಂಬೇಡ್ಕರ್ ಜಯಂತಿ ಇಲ್ಲ ಎಂದರೆ ನಾನೇನು ಮಾಡಲಿ” ಎಂದು ಅಸಡ್ಡೆಯಾಗಿ ಉತ್ತರಿಸಿದರು.
ಕಾಲೇಜಿನ ದಲಿತ ವಿರೋಧಿ ಧೋರಣೆಗಳ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಾಧ್ಯಾಪಕ
ಕಾಲೇಜಿನಲ್ಲಿ ನಡೆಯುತ್ತಿರುವ ದಲಿತ ವಿರೋಧಿ ಧೋರಣೆಗಳ ಬಗ್ಗೆ ಪ್ರಾಧ್ಯಪಕ ರವಿಕುಮಾರ್ ವಿವರಿಸಿದ್ದು, “2023ರ ಜನವರಿ 1ರಂದು ಡಾ. ಎಂ.ಸತೀಶ್ ಕಾರಂತ್ ಅವರು ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು. ಈ ಸಂದರ್ಭದಲ್ಲಿ ಯುಜಿಸಿ ನಿಯಮದ ಪ್ರಕಾರ ಪಿಎಚ್‌ಡಿ ಪದವಿ ಪಡೆದ ಅಧ್ಯಾಪಕರು ಇಲ್ಲದಿದ್ದ ಪಕ್ಷದಲ್ಲಿ ಸೇವಾ ಹಿರಿತನವನ್ನು ಪರಿಗಣಿಸಿ ತಾತ್ಕಾಲಿಕವಾಗಿ ಹಿರಿಯ ಪ್ರಾಧ್ಯಾಪಕರನ್ನು ಪ್ರಾಂಶುಪಾಲರಾಗಿ ನೇಮಿಸಬೇಕು. ಅದರಂತೆ, ಗಣಿತ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿ.ಸುಂದರನ್ನು ಅವರು ಪರಿಶಿಷ್ಟ ಜಾತಿಯ ಮಹಿಳೆಯಾಗಿದ್ದೂ ಸೇವಾ ಹಿರಿತನದ ಆಧಾರದಲ್ಲಿ ಪ್ರಾಂಶುಪಾಲರ ಸ್ಥಾನಕ್ಕೆ ಅರ್ಹರಾಗಿರುತ್ತಾರೆ. ಹಾಗಾಗಿ, ಅವರು ಈ ಸಂದರ್ಭದಲ್ಲಿ ತಮ್ಮ ಸೇವಾ ಹಿರಿತನವನ್ನು ಪರಿಗಣಿಸಿ ನನ್ನನ್ನು ಪ್ರಾಂಶುಪಾಲರಾಗಿ ಪರಿಗಣಿಸಿ ಎಂದು ಮನವಿ ಪತ್ರ ಸಲ್ಲಿಸಿದಾಗ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿ ಅವರನ್ನು ಅವಮಾನಿಸಿ ಕಳುಹಿಸಿದರು. ಇದು ಮಹಿಳೆಗೆ ಮಾಡಿದ ಅನ್ಯಾಯ ಮತ್ತು ದೌರ್ಜನ್ಯವಲ್ಲದೆ ಮಹಿಳೆಯ ಸಂವಿಧಾನಿಕ ಹಕ್ಕನ್ನು ಕಸಿದುಕೊಂಡಂತಾಗಿದೆ. ಇದು ದಲಿತ ದೌರ್ಜನ್ಯವೆಂದರೂ ತಪ್ಪಾಗಲಾರದು. ಆದರೆ, ಅದೇ ಸಂದರ್ಭದಲ್ಲಿ ಪಿಎಚ್‌ಡಿ ಪದವಿ ಪಡೆಯದ ಮೇಲ್ಜಾತಿಯ ಪ್ರಾಣಿಶಾಸ್ತ್ರ ವಿಭಾಗದ ಪಿ.ಎಲ್ ರಮೇಶ್ ಅವರನ್ನು 2023 ಜನವರಿ 31. ರಿಂದ 2023 ಮಾರ್ಚ್ 29ರವರೆಗೆ ಪ್ರಾಂಶುಪಾಲರಾಗಿ ನೇಮಕ ಮಾಡಿದ್ದರು. ಇದು ಇವರ ದುರಾಡಳಿತ ಮತ್ತು ತಾರತಮ್ಯ ನೀತಿಗೆ ಸಾಕ್ಷಿಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶ್ರೀರಾಮನ ಕಟೌಟ್ ಬಿದ್ದು ಪಾದಚಾರಿಗಳಿಗೆ ಗಾಯ: ಶಾಸಕ ರಘು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು
“2023ರ ಜನವರಿ-ಮಾರ್ಚ್ ಅವಧಿಯಲ್ಲಿ ಪಿ.ಎಲ್.ರಮೇಶ್ ಅವರು ಪಿಎಚ್‌ಡಿ ಪದವಿ ಪಡೆದಿರಲಿಲ್ಲ. ಆದರೂ, ಅವರನ್ನು ಪ್ರಾಂಶುಪಾಲರನ್ನಾಗಿ ನೇಮಿಸಿದ್ದಲ್ಲದೆ, ಪ್ರಾಂಶುಪಾಲರುಗಳ ಸೇವಾ ಫಲಕದಲ್ಲಿ ಡಾ.ಪಿ.ಎಲ್.ರಮೇಶ್ ಎಂದು ನಮೂದು ಮಾಡಿದ್ದಾರೆ. ಇದು ಅವರ ವಂಚಕ ಹಾಗೂ ಜಾತಿಪೀಡಿತ ಮನಸ್ಥಿತಿಯ ಸರ್ವಾಧಿಕಾರದ ಧೋರಣೆಯಾಗಿದೆ” ಎಂದು ಹೇಳಿದರು.
“ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಕನ್ನಡ ಸಂಶೋಧನಾ ಕೇಂದ್ರವು ಮಂಜೂರಾಗಿದ್ದು, 2020-21ನೇಯ ಸಾಲಿನಲ್ಲಿ ಸಂಶೋಧನಾ ಕೇಂದ್ರವನ್ನು ನವೀಕರಣ ಕೂಡ ಮಾಡಲಾಗಿದೆ. ನಂತರ ಬೆಂಗಳೂರು ನಗರ ವಿಶ್ವವಿದ್ಯಾಲಯವು ಸಂಶೋಧನಾ ಕೇಂದ್ರ ಇರುವ ಕಾಲೇಜುಗಳಲ್ಲಿ ಅರ್ಹರಿರುವ ಅಧ್ಯಾಪಕರನ್ನು ಸಂಶೋಧನಾ ಮಾರ್ಗದರ್ಶಕರನ್ನಾಗಿ ನೇಮಿಸಲು ಅರ್ಜಿ ಆಹ್ವಾನಿಸಿದ್ದರು. ಅದರಂತೆ, ಬಸವನಗುಡಿಯ ಕನ್ನಡ ವಿಭಾಗದ ಪದವಿ ಕಾಲೇಜಿನ ಡಾ.ರವಿಕುಮಾರ್ ಬಿ.ಜಿ ಹಾಗೂ ಡಾ.ಶಿವಣ್ಣ ಇವರಿಬ್ಬರೂ ಸಂಶೋಧನಾ ಮಾರ್ಗದರ್ಶಕರಾಗಲು ವಿಶ್ವವಿದ್ಯಾಲಯಕ್ಕೆ ಅರ್ಹ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಈ ಇಬ್ಬರ ಅರ್ಜಿಯನ್ನು ಪರಿಶೀಲಿಸಿದ ವಿಶ್ವವಿದ್ಯಾಲಯವು ಕುಲಪತಿ, ರಿಜಿಸ್ಟ್ರಾರ್, ಡೀನ್ ಹಾಗೂ ವಿಷಯ ತಜ್ಞರೊಂದಿಗೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ 5 ಜನರನ್ನೊಳಗೊಂಡ ವಿಷಯ ತಜ್ಞರು ಮೌಖಿಕ ಪರೀಕ್ಷೆಯನ್ನು ನಡೆಸಿದರು. ಅದರಲ್ಲಿಯೂ ಈ ಇಬ್ಬರೂ ಅಧ್ಯಾಪಕರು ಅರ್ಹತೆ ಹೊಂದಿದರು. ಅಂತಿಮವಾಗಿ ವಿಶ್ವವಿದ್ಯಾಲಯವು ಈ ಇಬ್ಬರಿಗೂ ಇವರ ಕಾಲೇಜಿನ ಪ್ರಾಂಶುಪಾಲರಿಂದ ಸೇವಾ ದೃಢೀಕರಣ ಪತ್ರವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವಂತೆ ಕಾಲೇಜಿಗೆ 2023ರ ಏಪ್ರಿಲ್‌ನಲ್ಲಿಯೇ ಪತ್ರವನ್ನು ಕಳುಹಿಸಿದ್ದರು. ಆದರೆ, ಈ ವರೆಗೂ ಕಾಲೇಜಿನ ಪ್ರಾಂಶುಪಾಲರಾಗಲಿ, ಆಡಳಿತ ಮಂಡಳಿಯವರಾಗಲಿ ಸದರಿ ಪ್ರಾಧ್ಯಾಪಕರಿಗೆ ಸೇವಾ ದೃಢಿಕರಣ ಪತ್ರವನ್ನು ನೀಡಲು ನಿರಾಕರಿಸಿದ್ದಾರೆ” ಎಂದು ತಿಳಿಸಿದರು.
“ಪ್ರಾಧ್ಯಾಪಕರಿಗೆ ಓಓಡಿ ನೀಡುವಲ್ಲಿಯೂ ಕೂಡ ಜಾತಿ ತಾರತಮ್ಯ ವ್ಯವಸ್ಥೆ ಮುಂದೆ ತರುತ್ತಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯು ರಾಷ್ಟ್ರೀಯ ಹಬ್ಬವಾಗಿದೆ. ಇಡೀ ದೇಶವೇ ಆಚರಣೆ ಮಾಡಬೇಕೆನ್ನುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸ್ಪಷ್ಟ ಆದೇಶವಾಗಿದೆ. ಆದರೆ, ಬಸವನಗುಡಿ ಪದವಿ ಕಾಲೇಜಿನ 2023-2024ನೇಯ ಸಾಲಿನ ವಾರ್ಷಿಕ ಕಾರ್ಯಚಟುವಟಿಕೆಗಳ ಪಟ್ಟಿಯಲ್ಲಿ (ಕ್ಯಾಲೆಂಡರ್ ಆಫ್ ಈವೆಂಟ್) ಅಂಬೇಡ್ಕರ್ ಜಯಂತಿಯನ್ನೇ ತೋರಿಸಿಲ್ಲ. ಇದು ಕೂಡ ಇವರ ದಲಿತ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ” ಎಂದರು.
“ಪರಿಶಿಷ್ಟ ಜಾತಿಗೆ ಸೇರಿದ ‘ದೈಹಿಕ ಶಿಕ್ಷಣ’ ವಿಭಾಗದ ಪ್ರಾಧ್ಯಾಪಕ ರವೀಂದ್ರ ಎನ್ನುವವರಿಗೆ ಮಾನಸಿಕ ಕಿರುಕುಳ ಕೊಟ್ಟು ಕೆಲಸ ಬಿಟ್ಟು ಹೋಗುವಂತೆ ಮಾಡಿ ಜನವರಿ ಮತ್ತು ಫೆಬ್ರವರಿ ತಿಂಗಳಿನ ವೇತನವನ್ನು ಕೊಟ್ಟಿಲ್ಲ. ಅಲ್ಲದೇ, ಇಂಗ್ಲೀಷ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿತೇಶ್ ಎಂಬುವವರನ್ನು ಯಾವುದೇ ಕಾರಣ ನೀಡದೆ ಏಕಾಏಕಿ ತೆಗೆದುಹಾಕಿದ್ದಾರೆ. ಗಣಿತಶಾಸ್ತ್ರ ವಿಭಾಗದ ಕೆ.ಕೇಶವನ್ ಅವರನ್ನು ಪ್ರಾಂಶುಪಾಲರು ಮಾನಸಿಕ ಕಿರುಕುಳ ನೀಡಿ ಬಿಟ್ಟುಹೋಗುವಂತೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.