ಸಂವಿಧಾನ ಕುರಿತು ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ಜೊತೆಗೆ ಸರ್ವರಿಗೂ ಸಂವಿಧಾನ ಪೀಠಿಕೆ ತಿಳಿಸುವ ʼಸಂವಿಧಾನ ಜಾಗೃತಿ ಜಾಥಾʼ ಇದೇ ತಿಂಗಳ (ಫೆ.) 8ರಂದು ಗುಬ್ಬಿ ತಾಲೂಕಿಗೆ ಬರಲಿದೆ. ಈ ಬಗ್ಗೆ ವಿವಿಧ ಸಂಘಟನೆಯ ಮುಖಂಡರು ಪೂರ್ವಭಾವಿ ಸಭೆ ನಡೆಸಿದರು.
ಗುಬ್ಬಿ ಪಟ್ಟಣದಲ್ಲಿ ಭವ್ಯ ಸ್ವಾಗತ ಪಡೆಯಲಿರುವ ಈ ಜಾಥ ತಾಲೂಕಿನ 34 ಗ್ರಾಮ ಪಂಚಾಯಿತಿಗೆ ಪ್ರವಾಸ ಮಾಡಲಿದೆ. ಎಲ್ಲಡೆ ಕಾರ್ಯಕ್ರಮ ಆಯೋಜನೆ ಕುರಿತು ಮುಖಂಡರು, ಜನಪ್ರತಿನಿಧಿಗಳು ಹಾಗೂ ದಲಿತ ಸಂಘಟನೆಗಳ ಅಭಿಪ್ರಾಯ ಸಂಗ್ರಹಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಐದು ದಿನದ ಪ್ರವಾಸದ ಸಂಪೂರ್ಣ ಯಶಸ್ವಿಗೆ ಎಲ್ಲಾ ಸ್ಥಳೀಯ ಮುಖಂಡರು ಹಾಗೂ ಸಂಘಟನೆಗಳ ಸಹಕಾರ ಬಗ್ಗೆ ತಹಸೀಲ್ದಾರ್ ಬಿ.ಆರತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಎಲ್ಲರ ಸಲಹೆ ಸೂಚನೆ ಸಂಗ್ರಹಿಸಿದರು.
ಈ ತಿಂಗಳ 8ರಂದು ಕುಣಿಗಲ್ ತಾಲೂಕಿನ ಮೂಲಕ ಗುಬ್ಬಿ ಪಟ್ಟಣಕ್ಕೆ ಆಗಮಿಸುವ ಸಂವಿಧಾನ ಜಾಗೃತಿ ಜಾಥಾಕ್ಕೆ ಭವ್ಯ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಲಾಗಿದೆ. ಎಲ್ಲಾ ಮುಖಂಡರು ಈ ಕಾರ್ಯಕ್ರಮವನ್ನು ಸೇರಿ ನಡೆಸಲು ನಿರ್ಧರಿಸಿದ್ದಾರೆ. ಶಾಸಕ ಎಸ್.ಆರ್.ಶ್ರೀನಿವಾಸ್ ಜಾಥಾಕ್ಕೆ ಚಾಲನೆ ನೀಡಲಿದ್ದು ಎಲ್ಲಾ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿರುತ್ತಾರೆ ಎಂದು ತಾ.ಪಂ ಇಒ ಪರಮೇಶ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಫೆ.8 ರಂದು ಗುಬ್ಬಿ ಪಟ್ಟಣದಲ್ಲಿ ಸ್ವಾಗತ ಕಾರ್ಯಕ್ರಮ ನಂತರದಲ್ಲಿ ಜಿ.ಹೊಸಹಳ್ಳಿ, ಕುನ್ನಾಲ, ಎಸ್.ಕೊಡಗೀಹಳ್ಳಿ, ಚಂಗಾವಿ, ಮಾವಿನಹಳ್ಳಿ ಹಾಗೂ ಇಡಗೂರು ತಲುಪಲಿದೆ. ಫೆ.9 ರಂದು ಸಿ.ಎಸ್.ಪುರ, ಹಿಂಡಿಸ್ಕೆರೆ, ಕಲ್ಲೂರು, ಪೆದ್ದನಹಳ್ಳಿ, ಕಡಬ, ಬ್ಯಾಡಿಗೆರೆ, ಕೊಪ್ಪ ಹಾಗೂ ಅಡಗೂರು ಗ್ರಾಪಂ ತಲುಪಲಿದೆ. ಫೆ.10ರಂದು ಎಂ.ಎಚ್.ಪಟ್ಟಣ, ಇರಕಸಂದ್ರ, ಬಿದರೆ, ಅಮ್ಮನಘಟ್ಟ, ಹೇರೂರು, ಬೆಲವತ್ತ ಹಾಗೂ ನಿಟ್ಟೂರು ಮುಟ್ಟಲಿದೆ ಎಂದು ತಿಳಿಸಿದರು.
ಫೆ.11ರಂದು ಮಾರಶೆಟ್ಟಿಹಳ್ಳಿ, ದೊಡ್ಡಗುಣಿ, ಕೊಂಡ್ಲಿ, ತ್ಯಾಗಟೂರು, ಎಂ.ಎನ್.ಕೋಟೆ, ಅಳಿಲುಘಟ್ಟ, ಹೊಸಕೆರೆ ಹಾಗೂ ಶಿವಪುರ ಜಾಥಾ ಉಳಿಯಲಿದೆ.
ಕೊನೇ ದಿನ ಫೆ.12ರಂದು ಹಾಗಲವಾಡಿ, ಮಂಚಲದೊರೆ, ಅಂಕಸಂದ್ರ, ನಲ್ಲೂರು ಚೇಳೂರು ಗ್ರಾಪಂನಲ್ಲಿ ಜಾಥಾ ಸಮರೊಳಗೊಳ್ಳಲಿದೆ ನಂತರ ತುರುವೇಕೆರೆ ತಾಲ್ಲೂಕಿನತ್ತ ಜಾಥಾ ಹೊರಡಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಹಾಗೂ ಎಲ್ಲಾ ದಲಿತ ಮುಖಂಡರು ಹಾಜರಿದ್ಧರು.