ಕೇರಳದಲ್ಲಿ ಭಾರೀ ಸುದ್ದಿಯಾಗಿದ್ದ ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ 15 ಮಂದಿ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದ ಸೆಷನ್ಸ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ನಾಲ್ವರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಡಿಸೆಂಬರ್ 19, 2021ರಂದು ಬಿಜೆಪಿ ನಾಯಕ ಹಾಗೂ ವಕೀಲ ರಂಜಿತ್ ಶ್ರೀನಿವಾಸ್ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ವಿ.ಜಿ.ಶ್ರೀದೇವಿ ಎಲ್ಲ 15 ದೋಷಿಗಳಿಗೆ ಜ.30ರಂದು ಗಲ್ಲು ಶಿಕ್ಷೆಯನ್ನು ಪ್ರಕಟಿಸಿದ್ದರು.
ಹತ್ಯೆಗೈದಿದ್ದ ಪ್ರಕರಣದಲ್ಲಿ ದೋಷಿಗಳಾಗಿದ್ದ ನಿಜಾಮ್, ಅಝ್ಮಲ್, ಅನೂಪ್, ಮಹಮ್ಮದ್ ಅಸ್ಸಾಂ, ಸಲಾಂ ಪೊನ್ನಾದ್, ಅಬ್ದುಲ್ ಕಲಾಂ, ಸಫರುದ್ದೀನ್, ಮುನ್ಮಾದ್, ಜಸೀಬ್ ರಝಾ. ನವಾಜ್, ಶಮೀರ್, ನಜೀರ್, ಝಾಕಿರ್ ಹುಸೈನ್, ಶಾಜಿ ಪೂವತಿಂಕಲ್, ಶೆರ್ನಾಝ್ ಅಶ್ರಫ್ ಎಲ್ಲ ಆರೋಪಿಗಳನ್ನೂ ದೋಷಿಗಳೆಂದು ನ್ಯಾಯಾಲಯವು ಘೋಷಿಸಿದ ಬಳಿಕ, ಮರಣ ದಂಡನೆ ವಿಧಿಸಿತ್ತು. ಇದು ಕೇರಳದ ಇತಿಹಾಸದಲ್ಲೇ ಇಷ್ಟು ಮಂದಿ ಆರೋಪಿಗಳಿಗೆ ಮರಣ ದಂಡನೆ ವಿಧಿಸಲ್ಪಟ್ಟ ಮೊದಲ ಪ್ರಕರಣವಾಗಿದೆ.

ಈ ತೀರ್ಪು ಕೇರಳದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ.ದೋಷಿಗಳೆಲ್ಲರೂ ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಹಾಗೂ ಅದರ ರಾಜಕೀಯ ಘಟಕ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ)ಗೆ ಸೇರಿದವರಾಗಿದ್ದರು.
ಆಲಪ್ಪುಝ ನಗರವನ್ನು ಬೆಚ್ಚಿಬೀಳಿಸಿದ ಸರಣಿ ಹತ್ಯೆ ಪ್ರಕರಣವು 2021ರ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು. ಡಿಸೆಂಬರ್ 18ರಂದು ರಾತ್ರಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಎಂಬುವವರು ಹತ್ಯೆಯಾಗಿದ್ದರು. ಈ ಹತ್ಯೆಯಾದ ಮರುದಿನ ಬೆಳಗ್ಗೆಯೇ ರಂಜಿತ್ ಶ್ರೀನಿವಾಸನ್ ಅವರ ಮನೆಗೆ ನುಗ್ಗಿ, ಮನೆಯವರ ಎದುರಲ್ಲೇ ಹತ್ಯೆಗೈಯ್ಯಲಾಗಿತ್ತು. ಶ್ರೀನಿವಾಸನ್ ಪ್ರಕರಣದ ತೀರ್ಪು ಪ್ರಕಟವಾಗಿದ್ದರೂ ಕೂಡ ಕೆ.ಎಸ್.ಶಾನ್ ಹತ್ಯೆ ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಇದು ಹಲವರ ಅಸಮಾಧಾನಕ್ಕೂ ಕಾರಣವಾಗಿದೆ.
ಈ ನಡುವೆ ಕೊಲೆ ಪ್ರಕರಣದ ತೀರ್ಪು ನೀಡಿರುವ ನ್ಯಾಯಾಧೀಶರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ನ್ಯಾಯಾಧೀಶರಿಗೆ ಬೆದರಿಕೆ ಒಡ್ಡಿರುವುದಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ಆಲಪ್ಪುಝ ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ | ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸ್ ಕೊಲೆ ಪ್ರಕರಣ: 15 ಮಂದಿ ದೋಷಿಗಳಿಗೆ ಮರಣದಂಡನೆ
‘ಆಲಪ್ಪುಝ ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾಲ್ಕು ಮತ್ತು ಪುನ್ನಾಪ್ರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆದರಿಕೆ ಸಂಬಂಧಿಸಿ ಮನ್ನಾಂಚೇರಿ ನಿವಾಸಿ ನಾಸೀರ್ (47), ಮಂಗಳಪುರಂ ನಿವಾಸಿ ರಫಿ (38), ಆಲಪ್ಪುಝದ ನವಾಸ್ ನೈನಾ (42) ಮತ್ತು ಅಂಬಾಲಪ್ಪುಝದ ಷಾಜಹಾನ್ (36) ಬಂಧಿತರು ಎಂದು ವರದಿಯಾಗಿದೆ.