ಸಮ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಚಿಂತನೆಗಳು ಪ್ರಸ್ತುತ

Date:

Advertisements
ಭಾರತದಂತಹ ದೇಶದಲ್ಲಿ ಸಾಮರಸ್ಯ ಭಾವನೆ ಮೂಡಿಸಲು ತಾಯ್ತನದ ಅಂಬೇಡ್ಕರ್ ನಿಲುವುಗಳು ನಿತ್ಯ ಅವಶ್ಯಕ. ಭೇದ-ಭಾವ ತೊಲಗಿಸಿ ಸಮ ಸಮಾಜ ಕಟ್ಟಲು ಅವರ ಚಿಂತನೆಗಳು ಹೆಚ್ಚು ಪ್ರಸ್ತುತ, ಸಾರ್ವಕಾಲಿಕ ಮತ್ತು ಅನಿವಾರ್ಯ.

ಅಂಬೇಡ್ಕರ್ ಎಂಬ ದಾರ್ಶನಿಕ 1891ರಲ್ಲಿ ಜನಿಸಿ ಮಾನವೀಯತೆಯ ಪಾಠ ಮಾಡದಿದ್ದರೆ ನಾವು ಊಹಿಸಿಕೊಳ್ಳದ ಭಾರತದಲ್ಲಿ ನಾವುಗಳಿಂದು ಇರಬೇಕಾಗಿತ್ತು. ಬಡತನ ಮತ್ತು ಶೋಷಣೆಯಲ್ಲಿ ಬೆಳೆದ ಅಂಬೇಡ್ಕರ್ ದೇಶ-ವಿದೇಶಗಳಲ್ಲಿ ಉನ್ನತ ಪಾಂಡಿತ್ಯ ಗಳಿಸಿ, ತನ್ನ ಜನರನ್ನು ಶೋಷಣೆಯ ಕಗ್ಗತ್ತಲಿನಿಂದ ಹೊರ ತರಲು ಶ್ರಮಿಸಿದರು.

ಅಸ್ಪೃಶ್ಯತೆಯ ವಿರುದ್ಧ ಬಹುದೊಡ್ಡ ಚಳವಳಿಯನ್ನು ಕಟ್ಟುತ್ತ ದಲಿತರಿಗೆ ಮೂಲಭೂತ ಹಕ್ಕುಗಳನ್ನು ನೀಡಿದರು. ಮಹಿಳೆಯರು ಮುಖ್ಯವಾಹಿನಿಗೆ ಬರಲು ಕಾನೂನುಗಳ ಬಲ ನೀಡಿದರು. ಕಾರ್ಮಿಕರು ಮತ್ತು ರೈತರ ಹಿತ ಕಾಪಾಡಿದರು. ಜಾತೀಯತೆ, ಶೋಷಣೆ, ಅಸಮಾನತೆಯಿಂದ ಬೇಯುತಿದ್ದ ಸಮಾಜಕ್ಕೆ ಅಂಬೇಡ್ಕರ್ ಎಂಬ ಚಿಕಿತ್ಸಕ ಕಂಡಿತಾ ಬೇಕಾಗಿತ್ತು.

ಭಾರತಕ್ಕೆ ಮೊದಲು ಸಾಮಾಜಿಕ ಸ್ವಾತಂತ್ಯ್ರ ಸಿಗಬೇಕು ಮತ್ತು ಅದು ಸ್ವಾತಂತ್ಯ್ರ, ಸಮಾನತೆ ಮತ್ತು ಸೋದರತೆ ತಳಹದಿಯ ಮೇಲೆ ನವ ಭಾರತ ನಿರ್ಮಾಣವಾಗಬೇಕು. ಹಿಂದೂ ಸಮಾಜವು ನೈತಿಕತೆ ಮತ್ತು ತಾತ್ವಿಕತೆ ನೆಲೆಗಳಲ್ಲಿ ಮರುಹುಟ್ಟು ಅನಿವಾರ್ಯ ಎಂದು ಪ್ರತಿಪಾದಿಸಿದ್ದರು ಅಂಬೇಡ್ಕರ್.

Advertisements

ಅಂಬೇಡ್ಕರ್ ಚಿಂತನೆಗಳು ಎಷ್ಟು ಪ್ರಸ್ತುತ ಎಂದರೆ ಅವರು ನಮ್ಮನ್ನು ಬಿಟ್ಟು ಹೋಗಿ ಆರು ದಶಕಗಳು ಕಳೆದರೂ, ಸಮಾಜದ ಎಲ್ಲ ವಲಯದ ಬಿಕ್ಕಟ್ಟುಗಳಿಗೆ ಅವರ ಚಿಂತನೆಗಳು ಪರಿಹಾರ ಒದಗಿಸಬಲ್ಲವು. ಅಂಬೇಡ್ಕರ್ ಮತ್ತೆ ಮತ್ತೆ ಪ್ರಸ್ತುತವಾಗಬೇಕಾದ ಅನಿವಾರ್ಯತೆ ಇಂದು ಉಂಟಾಗಿದೆ.

ಬೆಂಗಳೂರು ಎಂಬಂತ ಮಹಾ ನಗರಗಳಲ್ಲಿ ಈಗಲೂ ಮನೆ ಬಾಡಿಗೆಗೆ ಇದೆ. ಆದರೆ ಸಸ್ಯಹಾರಿಗಳಿಗೆ ಮಾತ್ರ ಎಂಬ ಫಲಕಗಳು ನಿಜವಾಗಿಯೂ ದಲಿತರನ್ನು ನಿಷೇಧಿಸಲು ಬಳಸಲಾಗುತ್ತಿದೆ. ಅದೇ ಮನೆಗಳಿಗೆ ಇತರೆ ಮಾಂಸಹಾರಿ ಜನಾಂಗದ ಪ್ರವೇಶಕ್ಕೆ ಅಪ್ಪಣ್ಣೆ ಕೊಟ್ಟು ದಲಿತರನ್ನು ಹೊರಗಿಡಲಾಗುತ್ತಿದೆ.

ಪ್ರತಿ ದಿನವೂ ದೇಶದ ಯಾವುದಾದರೂ ಮೂಲೆಯಲ್ಲಿ ದಲಿತರ ಮೇಲೆ ದೌರ್ಜನ್ಯಗಳು ವರದಿಯಾಗುತ್ತಿವೆ. ಹಳ್ಳಿಯೊಂದರಲ್ಲಿ ದಲಿತ ಮಹಿಳೆಯೊಬ್ಬರು ನೀರು ಸ್ಪರ್ಶಿಸಿದ್ದಕ್ಕಾಗಿ ಇಡೀ ನೀರಿನ ಟ್ಯಾಂಕ್‌ ಶುದ್ಧೀಕರಿಸಿದರು ಸವರ್ಣೀಯರು. ದೇವರ ಗುಡಿಗೆ ಮಗುವೊಂದು ಪ್ರವೇಶಿಸಿದ ಕಾರಣಕ್ಕೆ ಅಲ್ಲಿನ ಸ್ಥಳೀಯರು ಮಗುವಿನ ಪೋಷಕರಿಗೆ ದಂಡ ವಿಧಿಸಿದರು.

ಪ್ರೇಮಿಸಿ ಅಂತರ್ಜಾತಿಯ ಮದುವೆಯಾಗುವ ಜೋಡಿಗಳಿಗೆ ‘ಮರ್ಯಾದಾ ಹತ್ಯೆ’ಯ ಹೆಸರಿನಲ್ಲಿ ಕೊಲೆಗಳಾಗುತ್ತಿವೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳ ಹತ್ಯೆ ವರದಿಗಳು ಇನ್ನೂ ನಿಂತಿಲ್ಲ.

ಇಂತಹ ಹತ್ತಾರು ಪ್ರಕರಣಗಳು ಸಮಾಜದಲ್ಲಿ ತಲ್ಲಣ ಸೃಷ್ಟಿಸುತ್ತಿದ್ದು ಅಂಬೇಡ್ಕರ್ ಮಹೋದಯರು ಕಟ್ಟಿದ ಚಳವಳಿ ಮಾತ್ರ ನೊಂದವರಿಗೆ ನ್ಯಾಯ ನೀಡಬಲ್ಲ ಏಕಮಾತ್ರ ಸಾಧನವಾಗಿದೆ. ಸಮಾಜದಲ್ಲಾಗುತ್ತಿರುವ ತಲ್ಲಣಗಳಿಗೆ ಮುಖಾಮುಖಿಯಾಗಿ ಅಂಬೇಡ್ಕರ್ ಆದರ್ಶಗಳು ಮಾತ್ರ ನಿಲ್ಲಲು ಸಶಕ್ತ. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಧ್ವನಿಗಳ ಶಕ್ತಿಯ ರೂಪಕವಾಗಿ ಅಂಬೇಡ್ಕರ್ ನೊಂದವರ ಜೊತೆಗೆ ಬೇಕಾಗಿದ್ದಾರೆ ಪ್ರತಿ ನಿತ್ಯವೂ.

ಅಂಬೇಡ್ಕರ್ ಅವರ ಕೃಷಿ ಚಿಂತನೆಗಳು, ಕಾರ್ಮಿಕ ಮತ್ತು ಮಹಿಳಾ ಪರ ನಿಲುವುಗಳು ಅಸಾಧಾರಣವಾದದ್ದು. ಭಾರತದ ಕೃಷಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ಸಂಖ್ಯೆ ಜಾಸ್ತಿಯಿದ್ದು, ಬಂಡವಾಳ ಮತ್ತು ನವ ತಂತ್ರಜ್ಞಾನ ಹೂಡಿಕೆ ಕೊರತೆಯಿಂದ ಒಟ್ಟು ಉತ್ಪಾದಕತೆ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿಶ್ಲೇಷಿಸಿದ್ದರು.

ಕೃಷಿಗೆ ಕೈಗಾರಿಕಾ ಕ್ಷೇತ್ರದಂತೆ ಸೌಲಭ್ಯಗಳ ವಿಸ್ತರಣೆ, ಬಂಡವಾಳ ಹೂಡಿಕೆ, ಸಹಕಾರ ಕೃಷಿ ಮೂಲಕ ಕೃಷಿ ಮೇಲಾಗುತ್ತಿರುವ ಒತ್ತಡ ತಪ್ಪಿಸಿ ಉತ್ಪಾದಕತೆಯನ್ನು ಹೆಚ್ಚಿಸಬಹುದು ಎಂಬ ಅಂಬೇಡ್ಕರ್ ಸಲಹೆಗಳು ಇಂದಿನ ಕೃಷಿ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ.

ಅಂಬೇಡ್ಕರ್ ಮಹಿಳೆಯರಿಗೆ ಸಂಬಂಧಿಸಿದ ಚಿಂತನೆಗಳು ಇವತ್ತು ಹೆಚ್ಚು ಪ್ರಸ್ತುತವಾಗಿದೆ. ಈ ಸಮಾಜದಲ್ಲಿ ಅಸ್ಪೃಶ್ಯರ ನಂತರ ಅತಿ ಹೆಚ್ಚು ಸಾಮಾಜಿಕವಾಗಿ ನೋವುಂಡವರು ಮಹಿಳೆಯರು. ಅವರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ಕಾಣುತಿದ್ದರು. ಮಹಿಳಾ ಹಕ್ಕುಗಳಿಗಾಗಿ ಈ ದೇಶದಲ್ಲಿ ಯಾರಾದರೂ ತನ್ನ ಮಂತ್ರಿ ಪದವಿಯನ್ನು ತ್ಯಜಿಸಿದ್ದರೆ ಅದು ಅಂಬೇಡ್ಕರ್ ಮಾತ್ರ.

ಮಹಿಳಾ ವಿಮೋಚನಾ ಕಾರ್ಯಗಳಲ್ಲಿ ಅಂಬೇಡ್ಕರ್ ಮಂಡಿಸಿದ್ದ ‘ಹಿಂದೂ ಕೋಡ್ ಬಿಲ್’ ಮಹಿಳೆಯರಿಗೆ ಶಿಕ್ಷಣದ ಹಕ್ಕು, ಆಸ್ತಿ ಹಕ್ಕು, ಪುನರ್ ವಿವಾಹದ ಹಕ್ಕು, ಸಮಾನತೆಯ ಹಕ್ಕುಗಳನ್ನು ಜಾರಿಗೊಳಿಸಿ ಪುರುಷರಿಗೆ ಸಮನಾಗಿ ಮಹಿಳೆ ನಿಲ್ಲಲು ಆಸರೆಯಾದ ಮಹಾ ಪುರುಷ.

ಕಾರ್ಮಿಕರ ರಕ್ಷಣೆಗಾಗಿ ದುಡಿಮೆಯ ಅವಧಿಯನ್ನು ಮತ್ತು ವಿಶೇಷ ಭತ್ಯೆಗಳು ಹಾಗೂ ಸುಧಾರಣಾ ಕ್ರಮಗಳನ್ನು ಜಾರಿ ತಂದ ಅಂಬೇಡ್ಕರ್ ಮತ್ತು ಅವರ ಚಿಂತನೆಗಳು ಪ್ರಸ್ತುತ ಕಾರ್ಮಿಕರ ಹಿತ ಕಾಯಲು ಹೆಚ್ಚು ಅಪ್ಯಾಯಮಾನ.

ಅಸ್ಪೃಶ್ಯರ ಪರ್ಯಾಯ ರಾಜಕೀಯ ಶಕ್ತಿಯಾಗಿ ಸಂಘಟಿಸಲು ಬಹುತೇಕರು ವಿಫಲರಾಗಿದ್ದಾರೆ. ಒಂದೆರೆಡು ರಾಜ್ಯಗಳಲ್ಲಿ ಇದರ ಯಶಸ್ವಿ ಪ್ರಯೋಗಗಳಾದರೂ ಬೇರೆ ಕಡೆ ವಿಸ್ತಾರಗೊಳ್ಳದಿರಲು ದಲಿತರಲ್ಲಿನ ಒಗ್ಗಟ್ಟು ಮತ್ತು ರಾಜಕೀಯದ ಪ್ರಜ್ಞೆಯ ಕೊರತೆ ಎನ್ನಬಹುದು. ಇದರ ಬಗ್ಗೆ ದಲಿತ ನಾಯಕರು ಮತ್ತು ಸಂಘಟನೆಗಳು ಚಿಂತನ ಮಂಥನ ನಡೆಸಬೇಕಾಗಿದೆ.

ಅಂಬೇಡ್ಕರ್ ಚಿಂತನೆಯಲ್ಲಿ ಅಸ್ಪೃಶ್ಯತೆ ಈ ದೇಶಕ್ಕೆ ಅಂಟಿದ ರೋಗವಾಗಿದ್ದು, ಇದರ ನಿವಾರಣೆಗೆ ಅಸ್ಪೃಶ್ಯರು ಆಳುವ ವರ್ಗವಾದಾಗ ಮಾತ್ರ ಅವರ ಸಾಮಾಜಿಕ ಸ್ಥಿತಿಗತಿಯಲ್ಲಿ ಬದಲಾವಣೆ ಸಾಧ್ಯ. ಭಾರತದ ಸಂವಿಧಾನದ ಮುಖ್ಯ ಆಶಯಗಳಲ್ಲಿ ಸಾಮಾಜಿಕ ನ್ಯಾಯವನ್ನು ಅಂಬೇಡ್ಕರ್ ಕಟ್ಟಿಕೊಟ್ಟಿರುವ ಉದ್ದೇಶವೂ ದೇಶದ ಎಲ್ಲರನ್ನು ಒಳಗೊಂಡಂತಹ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ಯ್ರವನ್ನು ವಿಸ್ತಾರಗೊಳಿಸುವುದಾಗಿದೆ.

ಮೀಸಲಾತಿ, ಒಳ ಮೀಸಲಾತಿ, ಬಡ್ತಿ ಮೀಸಲಾತಿ ಬೇಗುದಿಯಲ್ಲಿ ಬೇಯುತ್ತಿರುವ ಸಮಾಜಕ್ಕೆ ಅಂಬೇಡ್ಕರ್ ವಿಚಾರಗಳಿಂದ ಪರಿಹಾರವೂ ಲಭ್ಯ. ತನ್ನ ಜಾತಿ ಜನಾಂಗದ ಜನಸಂಖ್ಯೆಗನುಗುಣವಾಗಿ ರಾಜಕೀಯ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರಾತಿನಿಧ್ಯ ನೀಡಬೇಕಾದದ್ದು ಸರ್ಕಾರಗಳ ಕರ್ತವ್ಯ.

ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಸ್ಪೃಶ್ಯರನ್ನು ಮೇಲೆತ್ತುವ ಕಾಯಕದಲ್ಲಿ ಪ್ರಭುತ್ವ ಕೆಲಸ ಮಾಡಬೇಕು ಎಂದಿದ್ದರು. ಸ್ಥಾವರಕ್ಕಳಿವಂಟು ಜಂಗಮಕ್ಕಲ್ಲ ಎಂಬ ಶರಣರ ಮಾತುಗಳನ್ನು ಧಿಕ್ಕರಿಸಿ ಅಂಬೇಡ್ಕರ್ ಮುಂತಾದ ಸಮಾಜ ಸುಧಾರಕರ ಪ್ರತಿಮೆಗಳ ಅನಾವರಣದಲ್ಲಿ ಕಾಲಹರಣ ಮಾಡುವ ಬದಲಿಗೆ ಅವರ ತತ್ವಾದರ್ಶಗಳನ್ನು ಜನರು ತಮ್ಮ ಮಾತು- ಕೃತಿಗೆ ಇಳಿಸಿಕೊಳ್ಳಬೇಕು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗವಾಕ್ಷಿಯಲ್ಲಿ ಮರಳಿ ಬರಲಿದೆಯೇ ‘ಪೆಗಸಸ್’ ದೆವ್ವ?

ಅಧಿಕಾರ, ಸಂಪತ್ತು, ಶಿಕ್ಷಣ ಕೇವಲ ಒಂದು ವರ್ಗದ ಪಾಲಾಗುವುದಕ್ಕೆ ಅಂಬೇಡ್ಕರ್ ವಿರೋಧವಿತ್ತು. ಪ್ರಸ್ತುತ ದೇಶದಲ್ಲಿ ಬಡವ ಶ್ರೀಮಂತರ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 107ನೇ ಸ್ಥಾನದಲ್ಲಿದ್ದು ಬಡತನದ ಜಾಲ ಆವರಿಸುತ್ತಿದೆ.

ಅಂಬೇಡ್ಕರ್ ಆರ್ಥಿಕ ಸಮಾನತೆ ಸಾಧಿಸುವ ಉದ್ದೇಶದಿಂದ ಅವರು ಭೂಮಿಯನ್ನು ರಾಷ್ಟ್ರೀಕರಣ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು. ಸಂಪತ್ತು ಸಮರ್ಪಕವಾಗಿ ವಿಂಗಡಿಸಿ ಸರ್ವರಿಗೂ ದೊರಕಿದಾಗ ಬಡತನ ಮತ್ತು ಹಸಿವು ಮುಕ್ತ ಸಮಾಜ ನಿರ್ಮಾಣವಾಗುವುದು.

ಮೂಢನಂಬಿಕೆಗಳಿಂದ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಹೆಚ್ಚು ಸುಲಿಗೆ ಮಾಡಿ ಆರ್ಥಿಕವಾಗಿ ತುಳಿಯಲಾಗುತ್ತಿದೆ. ಮೌಢ್ಯತೆಯ ಅಂಧಾನುಕರಣೆಯಿಂದ ಪ್ರಗತಿಪರ ಚಿಂತನೆಗಳಿಗೆ ಮಾರಕ. ಶಿಕ್ಷಣದಿಂದ ಮೌಢ್ಯತೆಯನ್ನು ದೂರ ಮಾಡಬಹುದು. ವೈಜ್ಞಾನಿಕತೆಯನ್ನು ಮೈಗೂಡಿಸಿಕೊಂಡ ನಾಗರಿಕರು ದೇಶದ ಪ್ರಗತಿಯಲ್ಲಿ ಪಾಲುದಾರರು ಎಂದು ಅಂಬೇಡ್ಕರ್ ಬಲವಾಗಿ ನಂಬಿದ್ದರು. ಮೂಢ ನಂಬಿಕೆಗಳನ್ನು ತೊರೆದು ವೈಜ್ಞಾನಿಕತೆಯನ್ನು ಪ್ರಚಾರ ಪಡಿಸಬೇಕಾದದ್ದು ಸಂವಿಧಾನದ ಆಶಯವೂ ಹೌದು. ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿ ಶಿಕ್ಷಿತರನ್ನು ರೂಪಿಸಬೇಕಾದದ್ದು ಪ್ರಜಾಸತ್ತತೆ ಕರ್ತವ್ಯ.

ಅಸಹಿಷ್ಣುತ ಭಾರತಕ್ಕೆ ಸಮಾನತೆ-ಶಾಂತಿ-ಬೋದಿ ತತ್ವಗಳನ್ನು ಪಠಿಸಿದ ಅಂಬೇಡ್ಕರ್ ಮತ್ತೊಮ್ಮೆ ಬುದ್ಧನನ್ನು ಜಗಕ್ಕೆ ಪರಿಚಯಿಸಿದ ಬೋದಿ ಸತ್ವ. ಕ್ರೌರ್ಯ, ಅಶಾಂತಿ, ವಂಚನೆಗಳು ಬೆಳೆಯುತ್ತಿರುವ ವಿಶ್ವಕ್ಕೆ ಪರಿಹಾರ ರೂಪದಲ್ಲಿ ಅಂಬೇಡ್ಕರ್ ಬೋಧಿಸಿದ ಬುದ್ಧನ ಕರುಣೆ, ಶೀಲ, ದಯೆ, ಮೈತ್ರಿ ಹೆಚ್ಚು ಪ್ರಸ್ತುತ. ಅವರು ಪ್ರಾರಂಭಿಸಿದ ನವಯಾನ ಅಸ್ಪೃಶ್ಯರ ಬದುಕಿನಲ್ಲಿ ನವ ಚೈತನ್ಯದೊಂದಿಗೆ ಸ್ವಾಭಿಮಾನವನ್ನು ತಿಳಿಸುತ್ತಾ ಲಕ್ಷಾಂತರ ಜನರನ್ನು ಮರಳಿ ಗೂಡಿಗೆ ಸೇರಿಸಿತು.

ಅಂಬೇಡ್ಕರ್ ಚಿಂತನೆಗಳಲ್ಲಿ ಮಾನವೀಯತೆಯೇ ಜೀವಾಳ. ಜೀವ ಪರತೆಯ ವಿಚಾರಧಾರೆಗಳು ಆರೋಗ್ಯಕರ ಸಮಾಜಕ್ಕೆ ಪೂರಕ. ಭಾರತದಂತಹ ಸಂಪ್ರದಾಯ ದೇಶದಲ್ಲಿ ಸಾಮರಸ್ಯ ಭಾವನೆ ಮೂಡಿಸಲು ತಾಯ್ತನದ ಅಂಬೇಡ್ಕರ್ ನಿಲುವುಗಳು ನಿತ್ಯ ಅವಶ್ಯಕ. ಭೇದ-ಭಾವ ತೊಲಗಿಸಿ ಸಮ ಸಮಾಜ ಕಟ್ಟಲು ಅಂಬೇಡ್ಕರ್ ಚಿಂತನೆಗಳು ಹೆಚ್ಚು ಪ್ರಸ್ತುತ, ಸಾರ್ವಕಾಲಿಕ ಮತ್ತು ಅನಿವಾರ್ಯ.

kt vijaykumar
ಡಾ. ಕೆ ಟಿ ವಿಜಯಕುಮಾರ್‌
+ posts

ಬರಹಗಾರರು, ಸಹಾಯಕ ಪ್ರಾಧ್ಯಾಪಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ ಟಿ ವಿಜಯಕುಮಾರ್‌
ಡಾ. ಕೆ ಟಿ ವಿಜಯಕುಮಾರ್‌
ಬರಹಗಾರರು, ಸಹಾಯಕ ಪ್ರಾಧ್ಯಾಪಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X