ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಜ್ಞಾನವಾಪಿ ಮಸೀದಿ ಆವರಣದ ವ್ಯಾಸ್ ತೆಹ್‌ಖಾನದಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ (ಫೆಬ್ರವರಿ 2) ನಿರಾಕರಿಸಿದೆ.
ಮಸೀದಿ ವ್ಯವಹಾರಗಳ ನೇತೃತ್ವ ವಹಿಸಿರುವ ಅಂಜುಮನ್ ಇನ್‌ತೆಜಾಮಿಯ ಮಸ್ಜಿದ್ ಸಮಿತಿಗೆ (ಎಐಎಂಸಿ) ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರವಾಲ್ ಪೀಠ ತಡೆಯಾಜ್ಞೆ ನಿರಾಕರಿಸಿದೆ.
ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ಪೂಜೆಗೆ ಅವಕಾಶ ನೀಡಿರುವ ಜನವರಿ 31ರ ವಾರಣಾಸಿ ನ್ಯಾಯಾಲಯದ ಆದೇಶಕ್ಕೆ ಮೂಲ ಕಾರಣವಾಗಿರುವ ಜನವರಿ 17ರ ಆದೇಶಕ್ಕೆ ತಡೆಯಾಜ್ಞೆ ಮನವಿಯನ್ನು ಸೇರಿಸಲು ಮುಸ್ಲಿಂ ಪರವಾಗಿ ಅರ್ಜಿ ಸಲ್ಲಿಸಿರುವ ಎಐಎಂಸಿಗೆ ಫೆಬ್ರವರಿ 6ರವರೆಗೆ ಅಲಹಾಬಾದ್ ಹೈಕೋರ್ಟ್ ಕಾಲಾವಕಾಶ ನೀಡಿದೆ.
ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡುವ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸುವಂತೆ ತಿಳಿಸಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಸಮಿತಿ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿತ್ತು.
ಬುಧವಾರ ವಾರಣಾಸಿ ನ್ಯಾಯಾಲಯ ಜ್ಞಾನವಾಪಿ ಮಸೀದಿಯ ದಕ್ಷಿಣ ಮೂಲೆಯಲ್ಲಿರುವ ಕೊಠಡಿಯಲ್ಲಿರುವ ಪ್ರತಿಮೆಗೆ ಪುರೋಹಿತರು ಪೂಜೆ ಸಲ್ಲಿಸಬಹುದು ಎಂದು ಆದೇಶ ನೀಡಿತ್ತು.
ಜಿಲ್ಲಾ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರದ ನಮಾಜ್‌ಗೆ ಮೊದಲು ವಾರಣಾಸಿ ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದ ಪ್ರಭಾವವಿರುವ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಪೊಲೀಸರು ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾ ನಿಗಾ ಇಟ್ಟಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ಶುಕ್ರವಾರದಂದು ವಾರಣಾಸಿ ಪಟ್ಟಣದಲ್ಲಿ ಅಂಜುಮಾನ್ ಸಮಿತಿ ಬಂದ್‌ಗೆ ಕರೆ ನೀಡಿತ್ತು. ದಾಲ್‌ಮಂಡಿ, ನೈ ಸಡಕ್, ನಾದೇಸರ್ ಹಾಗೂ ಅರ್ದ್ ಬಾಜಾರ್ ಪ್ರದೇಶಗಳಲ್ಲಿ ಅಂಗಡಿಗಳು ಮುಚ್ಚಿದ್ದವು.
ಆದರೆ ಸಮತಿ ಶಾಂತಿಯುತವಾಗಿ ನಮಾಝ್ ಮುಗಿಸುವಂತೆ ಸಮುದಾಯದ ಸದಸ್ಯರನ್ನು ಮನವಿ ಮಾಡಿಕೊಂಡಿತ್ತು. ಜೊತೆಗೆ ಸಮುದಾಯದ ಮಹಿಳೆಯರನ್ನು ಮನೆಯೊಳಗೇ ಇರುವಂತೆ ಸಲಹೆ ನೀಡಿತ್ತು.