ಏಕರೂಪದ ನಾಗರಿಕ ಸಂಹಿತೆ ಮುಸ್ಲಿಂ ಖಾಸಗಿ ಕಾನೂನಿಗೆ ಅನ್ವಯವಾಗುವ ಟ್ರಿಪಲ್ ತಲಾಖ್, ಇದ್ದತ್ ಹಾಗೂ ಹಲಾಲ ಮೊದಲಾದುವುಗಳನ್ನು ಶಿಕ್ಷಾರ್ಹ ಅಪರಾಧಗಳಾಗಿ ಪರಿವರ್ತಿಸುವ ಸಾಧ್ಯತೆಯಿದೆ.
ಉತ್ತರಾಖಂಡದಲ್ಲಿ ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಫೆಬ್ರವರಿ 5ರಂದು ವಿಶೇಷ ಅಧಿವೇಶನ ಕರೆಯಲಾಗಿದೆ. ಕರಡು ಸಂಹಿತೆಯನ್ನು ಸಿದ್ಧಪಡಿಸಲು ರಚಿಸಲಾಗಿದ್ದ ಐವರು ಸದಸ್ಯರ ಸಮಿತಿ ವರದಿಯನ್ನು ಶುಕ್ರವಾರ (ಫೆಬ್ರವರಿ 2) ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸಲ್ಲಿಸಿದೆ.
ಮುಸ್ಲಿಂ ಸಮುದಾಯಕ್ಕೆ ಅನ್ವಯ, ಬುಡಕಟ್ಟು ಜನರಿಗೆ ಅನ್ವಯಿಸದು
ಏಕರೂಪದ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಿದ್ದ ಬುಡಕಟ್ಟು ಜನರನ್ನು ಹೊರಗಿಟ್ಟು ಕಾನೂನು ಜಾರಿಗೆ ತರುವ ಸಾಧ್ಯತೆಯಿದೆ. ಜಾನ್ಸಾರಿ, ಭೋಟಿಯಾಸ್, ಥಾರುಸ್, ರಾಜಿಸ್ ಹಾಗೂ ಬುಕಾಸ್ ಮೊದಲಾಗಿ ಉತ್ತರಾಖಂಡದಲ್ಲಿ ಶೇ 2.9ರಷ್ಟು ಬುಡಕಟ್ಟು ಸಮುದಾಯದವರಿದ್ದಾರೆ.
उत्तराखण्ड की देवतुल्य जनता के समक्ष रखे गए संकल्प के अनुरूप समान नागरिक संहिता लागू करने की दिशा में आगे बढ़ते हुए आज देहरादून में UCC ड्राफ्ट तैयार करने के उद्देश्य से गठित कमेटी से मसौदा प्राप्त हुआ।
आगामी विधानसभा सत्र में समान नागरिक संहिता का विधेयक पेश किया जाएगा और… pic.twitter.com/XaEdf5ynqB
— Pushkar Singh Dhami (@pushkardhami) February 2, 2024
ಮುಖ್ಯವಾಗಿ ಮುಸ್ಲಿಂ ಖಾಸಗಿ ಕಾನೂನಿಗೆ ಅನ್ವಯವಾಗುವ ವಿವಾಹ ಮತ್ತು ವಿಚ್ಛೇದನೆಗೆ ಸಂಬಂಧಿಸಿದ ಟ್ರಿಪಲ್ ತಲಾಖ್, ಇದ್ದತ್ ಹಾಗೂ ಹಲಾಲ ಮೊದಲಾದುವುಗಳನ್ನು ಶಿಕ್ಷಾರ್ಹ ಅಪರಾಧಗಳಾಗಿ ಪರಿವರ್ತಿಸುವ ಸಾಧ್ಯತೆಯಿದೆ. ಬಹುಪತ್ನಿತ್ವವನ್ನೂ ನಿಷೇಧಿಸಲು ಶಿಫಾರಸು ಮಾಡಲಾಗಿದೆ.
ವಿವಾಹೇತರ ಸಹಜೀವನದ ನೋಂದಣಿ!
ವಿವಾಹೇತರ ಸಹಜೀವನದ ಸಂಬಂಧವನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಸಮಿತಿ ಸಲಹೆ ನೀಡಿದೆ. ಕರಡು ಪ್ರತಿಯಲ್ಲಿ ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಸಲಹೆಯೂ ಇದೆ ಎನ್ನಲಾಗಿದೆ. ದತ್ತು ಹಕ್ಕುಗಳನ್ನು ಎಲ್ಲರಿಗೂ ಏಕರೂಪದ ಕಾನೂನಿನಡಿ ತರಲಾಗುತ್ತಿದೆ. ಎಲ್ಲ ಸಮುದಾಯದವರೂ ಈಗಿರುವ ಬಾಲ ನ್ಯಾಯ ಕಾಯ್ದೆಯೇ ಅನ್ವಯಿಸಲಿದೆ.
ಜನಸಂಖ್ಯೆ ಬೆಳವಣಿಗೆ ಮತ್ತು ಜನಸಂಖ್ಯಾಶಾಸ್ತ್ರದ ಬದಲಾವಣೆಗಳ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರ ಉನ್ನತ ಅಧಿಕಾರದ ಸಮಿತಿ ರಚನೆಗೆ ಯೋಜಿಸುತ್ತಿರುವುದನ್ನು ಫೆಬ್ರವರಿಯ 1ರಂದು ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದೆ. ಆ ವಿಚಾರವೂ ಯುಸಿಸಿಯಲ್ಲಿ ಸೇರ್ಪಡೆಯಾಗಬಹುದು. ಆದರೆ ವರದಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಶಿಫಾರಸುಗಳನ್ನು ಮಾಡಿಲ್ಲ.
ಇದನ್ನೂ ಓದಿ :ಈ ದಿನ ಸಂಪಾದಕೀಯ | ಸಂಸತ್ ದಾಳಿ ಆರೋಪಿಗಳಿಗೆ ಸುಳ್ಳು ಹೇಳಲು ಒತ್ತಡ; ವಿಪಕ್ಷಗಳನ್ನು ದೇಶದ್ರೋಹಿಗಳೆಂದು ಬಿಂಬಿಸುವ ವಿಫಲ ಯತ್ನ
ಕರಡು ಗಮನಿಸಿ ಪ್ರತಿಕ್ರಿಯೆ
ಉತ್ತರಖಂಡ ಸರ್ಕಾರ ಯುಸಿಸಿ ಕರಡು ರಚಿಸಿದ್ದರೂ ಜಾರಿಗೆ ತರುವುದು ಸುಲಭವಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಹೇಳಿದೆ. “ಕರಡು ಮಂಡಿಸಿದಲ್ಲಿ ಬಿಜೆಪಿ ಸರ್ಕಾರ ಯಾವ ವಿಚಾರಗಳಲ್ಲಿ ಏಕರೂಪತೆ ಮತ್ತು ಸಮಾನತೆ ಬಯಸುತ್ತದೆ ಎನ್ನುವುದನ್ನು ತಿಳಿದುಕೊಳ್ಳುತ್ತೇವೆ. ಯುಸಿಸಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಕಾನೂನು ತರಬೇಕು. ಆದರೆ ಕೇಂದ್ರ ಕಾನೂನು ಜಾರಿ ಮಾಡಿದಾಗಲೆಲ್ಲ ಅದೇ ಪ್ರಭಾವದಲ್ಲಿ ರಾಜ್ಯಗಳು ಅಳವಡಿಸಿಕೊಳ್ಳುತ್ತವೆ” ಎಂದು ಕಾಂಗ್ರೆಸ್ ಹೇಳಿದೆ.
ಮುಸ್ಲಿಂ ಸೇವಾ ಸಂಘಟನೆ ಅಧ್ಯಕ್ಷ ನಯೀಮ್ ಕುರೇಶಿ ಈ ಬಗ್ಗೆ ಮಾತನಾಡಿದ್ದು, “ಕರಡು ಮಸೂದೆಯ ವಿವರ ತಿಳಿಯದಿದ್ದರೂ, ಸಮುದಾಯದ ವೈಯಕ್ತಿಕ ಮತ್ತು ಧಾರ್ಮಿಕ ಹಕ್ಕುಗಳಿಗೆ ಧಕ್ಕೆಯಾದಲ್ಲಿ ಪ್ರತಿಭಟಿಸುತ್ತೇವೆ. ದೇಶಾದ್ಯಂತ ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳು ಎಲ್ಲ ಸಮುದಾಯಗಳಿಗೂ ಸಮನಾಗೇ ಇವೆ. ಆದರೆ ರಾಜಕೀಯ ದುರುದ್ದೇಶದಿಂದ ಸಮುದಾಯವನ್ನು ಗುರಿ ಮಾಡಿದಲ್ಲಿ ವಿರೋಧಿಸುವ ಹಕ್ಕು ನಮಗಿದೆ” ಎಂದು ಹೇಳಿಕೆ ನೀಡಿದ್ದಾರೆ.