ಈ ದಿನ ಸಂಪಾದಕೀಯ | ಸಂಸತ್‌ ದಾಳಿ ಆರೋಪಿಗಳಿಗೆ ಸುಳ್ಳು ಹೇಳಲು ಒತ್ತಡ; ವಿಪಕ್ಷಗಳನ್ನು ದೇಶದ್ರೋಹಿಗಳೆಂದು ಬಿಂಬಿಸುವ ವಿಫಲ ಯತ್ನ

Date:

ಮೋದಿ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ಮತ್ತು ಅದಕ್ಕಾಗಿ ವಿರೋಧ ಪಕ್ಷಗಳನ್ನು ನಾಶ ಮಾಡಲು ಯಾವ ಮಟ್ಟಿನ ಅಕ್ರಮ ಹಾದಿ ಹಿಡಿಯುತ್ತಿದೆ ಎಂಬುದಕ್ಕೆ ಇದು ಒಂದು ಉದಾಹರಣೆಯಷ್ಟೇ

 

ಕಳೆದ ಡಿಸೆಂಬರ್‌ನಲ್ಲಿ ಸಂಸತ್‌ ಅಧಿವೇಶನ ನಡೆಯುವ ವೇಳೆ ಕೆಲ ಯುವಕರು ವೀಕ್ಷಕರ ಗ್ಯಾಲರಿಯಿಂದ ಲೋಕಸಭೆ ಸದನಕ್ಕೆ ಧುಮುಕಿ, ಬಣ್ಣದ ಹೊಗೆ ಹಬ್ಬಿಸಿದ್ದ ಘಟನೆ ಜನತಂತ್ರ ಮಂದಿರದ ಭದ್ರತೆ ಬಗ್ಗೆ ಅನುಮಾನ ಮೂಡುವಂತೆ ಮಾಡಿತ್ತು. ನೂತನ ಸಂಸತ್‌ ಭವನಕ್ಕೆ ಪಾಸು ಪಡೆದವರು ಏನು ಬೇಕಿದ್ರೂ ಜೊತೆಗೆ ಕೊಂಡೊಯ್ಯಬಹುದೇ? ತಪಾಸಣೆ ಮಾಡುತ್ತಿಲ್ಲವೇ ಎಂಬೆಲ್ಲ ಪ್ರಶ್ನೆ ಎದ್ದಿತ್ತು. ಹಾಗೆ ನುಗ್ಗಿದ ಯುವಕರು ಉಗ್ರರಲ್ಲ, ನಿರುದ್ಯೋಗ ಸಮಸ್ಯೆಯಿಂದ ಹತಾಶರಾದವರು ಎಂದು ಗೊತ್ತಾಗಲು ಒಂದು ತಾಸು ಕೂಡ ಹಿಡಿಯಲಿಲ್ಲ. ಸಂಸತ್ತಿನ ಹೊರಗೆ ಪ್ರತಿಭಟಿಸಿದ್ದ ಯುವತಿ, ಪೊಲೀಸರು ಎಳೆದೊಯ್ಯುವಾಗ ನೀಡಿದ ಹೇಳಿಕೆಗಳನ್ನು ದೇಶವೇ ಗಮನಿಸಿದೆ.

ದೇಶವೇ ಬೆಚ್ಚಿ ಬಿದ್ದು ಗಮನಿಸಿದ್ದ ಸುದ್ದಿಯಿದು. ಇಂದು ಅದಕ್ಕಿಂತ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಆರೋಪಿಗಳಿಗೆ ವಿರೋಧ ಪಕ್ಷಗಳ ನಂಟಿದೆ ಎಂದು ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಬಂಧಿತ ಆರು ಮಂದಿ ಆರೋಪಿಗಳಲ್ಲಿ ಐವರು ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಹರ್ದೀಪ್‌ ಕೌರ್‌ ಮುಂದೆ ಹೇಳಿಕೆ ನೀಡಿರುವುದಾಗಿ ಪಿ.ಟಿ.ಐ. ವರದಿ ಮಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಘಟನೆ ನಡೆ ತಕ್ಷಣವೇ ಪ್ರಮುಖ ಆರೋಪಿ ಮನೋರಂಜನ್‌ಗೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರ ಕಚೇರಿಯಿಂದ ಸಂಸತ್‌ ಅಧಿವೇಶನ ವೀಕ್ಷಣೆಗೆ ಪಾಸ್‌ ನೀಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿತ್ತು. ಆರೋಪಿಗಳಲ್ಲಿ ಒಬ್ಬರಾದ ನೀಲಂ ಆಜಾದ್‌ ಈ ಹಿಂದೆ ಸಿಎಎ ವಿರೋಧದ ಹೋರಾಟ ಸೇರಿದಂತೆ ಹಲವು ಜನಪರ ಚಳವಳಿಗಳಲ್ಲಿ ಭಾಗಿಯಾಗಿದ್ದರು. ಆ ಫೋಟೋಗಳನ್ನು ಇಟ್ಟುಕೊಂಡು ಸಂಸತ್‌ ದಾಳಿಯನ್ನು ವಿರೋಧ ಪಕ್ಷಗಳ ಅದರಲ್ಲೂ ಕಾಂಗ್ರೆಸ್‌ ಪಕ್ಷದ ತಲೆಗೆ ಕಟ್ಟುವ ಪ್ರಯತ್ನವನ್ನು ಬಿಜೆಪಿ ನಾಯಕರು, ಕಾರ್ಯಕರ್ತರು ಮಾಡಿದ್ದರು. ಮನೋರಂಜನ್‌ ಎಸ್‌ಎಫ್‌ಐ ಸಂಘಟನೆಯ ಸದಸ್ಯ ಎಂದು ಬೇರೊಬ್ಬರ ಫೋಟೋವನ್ನು ವೈರಲ್‌ ಮಾಡಲಾಗಿತ್ತು. ಈಗ ಪೊಲೀಸ್‌ ಕಸ್ಟಡಿಯಲ್ಲೂ ಬೇರೆ ಪಕ್ಷಗಳ ಜೊತೆ ಸಂಪರ್ಕ ಇದೆ ಎಂದು ಸುಳ್ಳು ಹೇಳಿಕೆ ಪಡೆಯುವ ಷಡ್ಯಂತ್ರ ನಡೆಯುತ್ತಿದೆ ಎಂಬುದು ಜಗಜ್ಜಾಹೀರಾಗಿದೆ.

“ಪೊಲೀಸ್‌ ಕಸ್ಟಡಿಯಲ್ಲಿ ವಿಚಾರಣೆಯ ವೇಳೆ ವಿದ್ಯುತ್‌ ಶಾಕ್‌ ನೀಡಿ ಚಿತ್ರಹಿಂಸೆ ಕೊಡಲಾಗಿದೆ. ಸುಮಾರು 70 ಖಾಲಿ ಹಾಳೆಗಳ ಮೇಲೆ ಸಹಿ ಮಾಡುವಂತೆ, ರಾಷ್ಟ್ರೀಯ ಪಕ್ಷಗಳು ಮತ್ತು ಅದರ ಮುಖಂಡರ ಜೊತೆ ಒಡನಾಟ ಇರುವುದಾಗಿ ಬರೆದುಕೊಡುವಂತೆ ಇಬ್ಬರು ಆರೋಪಿಗಳ ಮೇಲೆ ಒತ್ತಡ ಹೇರಲಾಗಿದೆ” ಎಂದು ಆರೋಪಿಗಳಾದ ಡಿ ಮನೋರಂಜನ್‌, ಸಾಗರ್‌ ಶರ್ಮಾ, ಅಮೋಲ್‌ ಶಿಂದೆ, ಮಹೇಶ್‌ ಕುಮಾವತ್‌ ನ್ಯಾಯಾಲಯಕ್ಕೆ ಸಲ್ಲಿಸಿದ ಸಂಯುಕ್ತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರಂತೆ. ಖಾಲಿ ಹಾಳೆಯ ಮೇಲೆ ಸಹಿ ಹಾಕುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ನೀಲಂ ಈ ಹಿಂದೆಯೂ ಆರೋಪ ಮಾಡಿದ್ದರು. ಈ ಸಂಯುಕ್ತ ಹೇಳಿಕೆ ಕುರಿತ ವಿಚಾರಣೆಗೆ ಇದೇ 17ರಂದು ಹಾಜರಾಗುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.

ಮೋದಿ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ಮತ್ತು ವಿರೋಧ ಪಕ್ಷಗಳನ್ನು ನಾಶ ಮಾಡಲು ಯಾವ ಮಟ್ಟಿನ ಅಕ್ರಮ ಹಾದಿ ಹಿಡಿಯುತ್ತಿದೆ ಎಂಬುದಕ್ಕೆ ಇದೂ ಒಂದು ಉದಾಹರಣೆಯಷ್ಟೇ. ಸಂಸತ್‌ನ ಭದ್ರತೆ ಸರ್ಕಾರದ ಕೆಲಸ. ಜನತಂತ್ರದ ದೇಗುಲವೆಂದು ಪ್ರಧಾನಿಯವರೂ ಅದರ ಸೋಪನಗಳಿಗೆ ಹಣೆ ತಾಗಿಸಿರುವುದುಂಟು. ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷಗಳಷ್ಟೇ ಅಲ್ಲದೆ, ಆಳುವ ಪಕ್ಷದ ಸದಸ್ಯರು ಮತ್ತು ಪ್ರಧಾನಿಯವರು ಮತ್ತು ಅವರ ಮಂತ್ರಿ ಮಂಡಲವೇ ಅಲ್ಲಿರುತ್ತದೆ. ಪ್ರಧಾನಿ ಮೋದಿ ಅವರು ಸಂಸತ್ತಿಗೆ ಬರುವುದು ಅಪರೂಪ. ಇಡೀ ದಿನ ಚರ್ಚೆಯನ್ನು ಆಲಿಸುವ ಅಭ್ಯಾಸ ಅವರಿಗೆ ಇಲ್ಲ. ಆದರೆ ಮಿಕ್ಕ ಸಚಿವರು ಅಧಿಕಾರಿಗಳ ಭದ್ರತೆಯೂ ಮುಖ್ಯ ಅಲ್ಲವೇ? ಆದ ಭದ್ರತಾ ಲೋಪವನ್ನು ಒಪ್ಪಿಕೊಂಡು, ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ದೇಶದ ಜನತೆಗೆ ಭದ್ರತೆಯ ಗ್ಯಾರಂಟಿ ಕೊಡಬೇಕಾದ ಸರ್ಕಾರ ಇಷ್ಟು ಕೀಳು ಮಟ್ಟದ ಕೆಲಸಕ್ಕೆ ಕೈ ಹಾಕಿರುವುದು ನಾಚಿಕೆಗೇಡಿನ ಸಂಗತಿ.

ವಿರೋಧಪಕ್ಷಗಳು ಪ್ರಜಾಪ್ರಭುತ್ವದ ಪ್ರಮುಖ ಅಂಗ. ಅವುಗಳಿಲ್ಲದ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲ ಎಂದು ಸಂವಿಧಾನವೇ ವಿಧಿಸಿದೆ. ಆಡಳಿತ ಪಕ್ಷ ಅಥವಾ ಸರ್ಕಾರಕ್ಕೆ ವಿರೋಧ ಪಕ್ಷಗಳ ಜೊತೆ ಆರೋಗ್ಯಕರ ಗುದ್ದಾಟ ಇರಬೇಕೇ ಹೊರತು ಜನತಂತ್ರ ವ್ಯವಸ್ಥೆಯನ್ನು ವಿರೋಧಪಕ್ಷಗಳಿಂದ ಮುಕ್ತ ಮಾಡುತ್ತೇವೆ ಎನ್ನುವುದು, ಅವುಗಳನ್ನು ದೇಶದ್ರೋಹಿಗಳೆಂದು ಬಿಂಬಿಸಲು ಆಡಳಿತ ಯಂತ್ರವನ್ನು ದುರುಪಯೋಗ ಮಾಡುವುದು ಸರಿಯಲ್ಲ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡವಳಿಕೆ.

ದೇಶದ್ರೋಹ/ ದೇಶದ್ರೋಹಿ ಎಂಬುದು ಬಹಳ ಗಂಭೀರ ಪದಪ್ರಯೋಗ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಯಾರು ಯಾರನ್ನು ಬೇಕಾದರೂ ದೇಶದ್ರೋಹಿ ಎಂದು ಕರೆಯಬಹುದು! ಸರ್ಕಾರದ ವಿರುದ್ಧ ಮಾತನಾಡಿದರೆ, ಬರೆದರೆ, ಪ್ರತಿಭಟಿಸಿದರೆ ಸುಲಭವಾಗಿ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತಿದೆ. ಈ ಪದದ ಅಸಲಿ ಅರ್ಥವನ್ನು ತಿರುಚಲಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ಸಂಸತ್‌ ದಾಳಿ ಆರೋಪಿಗಳ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಅಂತಹ ಕೃತ್ಯಕ್ಕೆ ಮುಂದಾದ ಪೊಲೀಸರು ಮತ್ತು ಅವರ ಮೇಲೆ ಒತ್ತಡ ಹೇರಿದವರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗೆ ವಿರೋಧಪಕ್ಷಗಳು ಮುಂದಾಗಬೇಕಿದೆ. ದೇಶ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿದೆ. ವಿರೋಧ ಪಕ್ಷಗಳು ಈ ವಿಚಾರವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರೈತರ ವಿರುದ್ಧ ʼರಾಷ್ಟ್ರೀಯ ಭದ್ರತಾ ಕಾಯ್ದೆʼ ಅಸ್ತ್ರ ಪ್ರಯೋಗ; ಪ್ರಜಾಪ್ರಭುತ್ವದ ಅಣಕ

ಈಗಾಗಲೇ ಮೋದಿಯವರ ಮಾತು ನಂಬಿ ಅದಾನಿ ಕಂಪನಿ ದೇಶದೆಲ್ಲೆಡೆ ಗೋದಾಮುಗಳನ್ನು ನಿರ್ಮಾಣ...

ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ...

ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ

ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್- ಯಾವ ಪಕ್ಷವಾದರೂ, ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ...

ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಬೇರೂರಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸರಕಾರ...