ತನ್ನ ನಿಧನದ ಸುದ್ದಿ ವ್ಯಾಪಕವಾಗಿ ಚರ್ಚೆಗೊಳಗಾಗುತ್ತಿದ್ದಂತೆಯೇ ಶನಿವಾರ ಮಧ್ಯಾಹ್ನ ನಟಿ, ಮಾಡೆಲ್ ಪೂನಂ ಪಾಂಡೆ ಪ್ರತ್ಯಕ್ಷಗೊಂಡಿದ್ದಾರೆ.
“ನಾನು ಇನ್ನೂ ಜೀವಂತವಾಗಿದ್ದೇನೆ., ಗರ್ಭಕಂಠದ ಕ್ಯಾನ್ಸರ್ ಬಗ್ಗೆ ‘ಜಾಗೃತಿ’ ಮೂಡಿಸಲು ಈ ರೀತಿ ಮಾಡಿದ್ದೇನೆ” ಎಂದು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಮಾಡೆಲ್ ಹಾಗೂ ಬಾಲಿವುಡ್ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ನಿಂದ ನಿಧನರಾಗಿದ್ದಾರೆ ಎಂದು ಆಕೆಯ ಸೋಷಿಯಲ್ ಮೀಡಿಯಾ ತಂಡ ಶುಕ್ರವಾರ ಬೆಳಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದ ಪೋಸ್ಟ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅಲ್ಲದೇ, ಸಾವಿನ ಬಗ್ಗೆ ಹತ್ತಾರು ಗೊಂದಲಗಳು ಸೃಷ್ಟಿಯಾಗಿತ್ತು.
Actress Poonam Pandey is alive, issues video on Instagram claiming ‘awareness’ for Cervical Cancer pic.twitter.com/ImopsEx0H1
— ANI (@ANI) February 3, 2024
ಪೂನಂ ಪಾಂಡೆ ಅವರ ಇನ್ಸ್ಟಾಗ್ರಾಮ್ನಲ್ಲಿ ಅವರ ಪೋಸ್ಟ್ ಒಂದನ್ನು ಪ್ರಕಟಿಸಿದ್ದ ಅವರ ತಂಡ, “ಇಂದು ಮುಂಜಾನೆ ಸಾಕಷ್ಟು ಕಷ್ಟಕರವಾಗಿತ್ತು. ಸರ್ವಿಕಲ್ ಕ್ಯಾನ್ಸರ್(ಗರ್ಭಕಂಠದ ಕ್ಯಾನ್ಸರ್)ನಿಂದ ನಮ್ಮ ಪ್ರೀತಿಯ ಪೂನಂ ಅವರನ್ನು ಕಳೆದುಕೊಂಡಿದ್ದೇವೆ. ಈ ದುಃಖದ ಸಂದರ್ಭದಲ್ಲಿ ನಮ್ಮ ಖಾಸಗಿತನಕ್ಕೆ ಬೆಲೆ ನೀಡಿ” ಎಂದು ಬರೆಯಲಾಗಿತ್ತು.
ಯಾಕೆಂದರೆ, ನಿಧನದ ಸುದ್ದಿ ಮಾತ್ರ ಬಂದಿದೆಯಾದರೂ ಮೃತದೇಹ ಎಲ್ಲಿದೆ? ಅಂತ್ಯಸಂಸ್ಕಾರ ಆಗಿದೆಯಾ? ಕುಟುಂಬದ ಸದಸ್ಯರು ಎಲ್ಲಿ? ಬಾಲಿವುಡ್ನ ಮಂದಿ ಆಕೆಯ ಅಂತಿಮ ದರ್ಶನ ನಡೆಸಿದ್ದಾರಾ? ನಡೆಸಿದ್ದರೆ ಫೋಟೋ ಎಲ್ಲಿ? ಎಂಬ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.
View this post on Instagram
ಪೂನಂ ಗರ್ಭಕಂಠದ ಕ್ಯಾನ್ಸರ್ ಅನಾರೋಗ್ಯದ ಬಗ್ಗೆ ಹಿಂದೆಂದೂ ಹೇಳಿರಲಿಲ್ಲವಾದ್ದರಿಂದ ನಿಧನ ಸುದ್ದಿ ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಇದಲ್ಲದೆ, ಅವರು ಕೇವಲ ಮೂರು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಆರೋಗ್ಯವಾಗಿರುವುದು ಕಂಡು ಬಂದಿದೆ.
“ನಿಧನದ ಖಚಿತತೆ ಹಾಗೂ ಅಂತ್ಯಸಂಸ್ಕಾರದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಪ್ರತಿನಿಧಿಗಳು ಸಂಪರ್ಕ ಮಾಡಲು ಯತ್ನಿಸಿದ್ದರು. ಆದರೆ ಪೂನಂ ಪಾಂಡೆ ಸಾವಿನ ಸುದ್ದಿ ಹೊರಬಂದಾಗಿನಿಂದ ಅವರ ಕುಟುಂಬ ಸದಸ್ಯರು ನಾಪತ್ತೆಯಾಗಿದ್ದಾರೆ. ಆಕೆಯ ಸಹೋದರಿಯ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ” ಎಂದು ‘ಇಂಡಿಯಾ ಟುಡೆ’ ವರದಿ ಮಾಡಿತ್ತು.
ಇನ್ನೊಂದೆಡೆ ಪೂನಂ ಪಾಂಡೆ ಸಾವಿನ ಬಗ್ಗೆ ಫ್ಯಾಷನ್ ಮತ್ತು ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಟ್ವೀಟ್ ಮಾಡಿದ್ದು, “ಪೂನಂ ಬದುಕಿದ್ದಾಳೆ ಮತ್ತು ಆಕೆಯ ಸಾವಿನ ಸುದ್ದಿಯನ್ನು ಆಕೆಯೇ ಆನಂದಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಪೂನಂ ಪಾಂಡೆ ಅವರ ಸೋದರ ಸಂಬಂಧಿ ಜೊತೆ ನಾನು ಮಾತನಾಡಿದ್ದೇನೆ. ಇದು ಪೂನಂ ಅವರ ಪಬ್ಲಿಸಿಟಿ ಸ್ಟಂಟ್. ಆಕೆ ಸತ್ತಿಲ್ಲ” ಹೇಳಿಕೊಂಡಿದ್ದರು.
ಇತ್ತೀಚಿಗೆ ನೀಡಿದ್ದ ಸಂದರ್ಶನವೊಂದರ ವಿಡಿಯೋ ಈಗ ವೈರಲಾಗುತ್ತಿದೆ. ಅದರಲ್ಲಿ ಪೂನಂ ಪಾಂಡೆ, ‘ಶೀಘ್ರದಲ್ಲೇ ದೊಡ್ಡ ಸರ್ಪ್ರೈಸ್ ನೀಡಲಿದ್ದೇನೆ’ ಎಂದಿದ್ದರು.
“ಒಂದು ದೊಡ್ಡ ಸುದ್ದಿ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ. ನಾನು ಜನರನ್ನು ಅಚ್ಚರಿಗೊಳಿಸಲು ಇಷ್ಟಪಡುತ್ತೇನೆ. ಜನರು ನಾನು ಬದಲಾಗಿದ್ದೇನೆ ಎಂದು ಭಾವಿಸಿದಾಗ, ನಾನು ಅವರನ್ನು ಇನ್ನಷ್ಟು ಆಶ್ಚರ್ಯಗೊಳಿಸುತ್ತೇನೆ. ಹಾಗಾಗಿ, ನಿಜವಾಗಿಯೂ ದೊಡ್ಡದು ಸುದ್ದಿ ನಿಮ್ಮ ಬಳಿಗೆ ಬರಲಿದೆ” ಎಂದು ಇತ್ತೀಚೆಗೆ ಇನ್ಸ್ಟಂಟ್ ಬಾಲಿವುಡ್ ಎಂಬ ಸೋಷಿಯಲ್ ಮೀಡಿಯಾದ ಪೇಜ್ನ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗ ವೈರಲಾದ ನಂತರ, ಪೂನಂ ಪಾಂಡೆ ಇನ್ನೂ ನಿಧನರಾಗಿಲ್ಲ. ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂಬ ಅನುಮಾನ ದಟ್ಟವಾಗಿತ್ತು.
ಮತ್ತೆ ಪ್ರತ್ಯಕ್ಷವಾದ ಪೂನಂ ಪಾಂಡೆ!
View this post on Instagram
“ನಿಮ್ಮೆಲ್ಲರೊಂದಿಗೆ ಮಹತ್ವದ ವಿಷಯವನ್ನು ಹಂಚಿಕೊಳ್ಳಲು ನಾನು ಒತ್ತಾಯಿಸುತ್ತಿದ್ದೇನೆ. ನಾನು ಜೀವಂತವಾಗಿದ್ದೇನೆ. ನಾನು ಗರ್ಭಕಂಠದ ಕ್ಯಾನ್ಸರ್ಗೆ ತುತ್ತಾಗಿಲ್ಲ. ಆದರೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲ. ಅದಕ್ಕಾಗಿ ಈ ರೀತಿ ನಡೆದುಕೊಂಡಿದ್ದೇನೆ. ಈ ರೋಗವು ಸಾವಿರಾರು ಮಹಿಳೆಯರ ಜೀವವನ್ನು ಬಲಿತೆಗೆದುಕೊಂಡಿದೆ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. ಅದರ ಜಾಗೃತಿಗಾಗಿ ಈ ರೀತಿಯ ನನ್ನ ನಿಧನದ ಸುದ್ದಿ ಹಬ್ಬಿಸಿದ್ದೆ” ಎಂದು ಪೂನಂ ಪಾಂಡೆ ತಿಳಿಸಿದ್ದಾರೆ.