2024ರ ಲೋಕಸಭಾ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕಾರ್ಯಗಳು ತೀವ್ರಗತಿಯಲ್ಲಿ ಜರಗುತ್ತಿವೆ. ಹೀಗಾಗಿ, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ತಂಡಗಳನ್ನು ರಚಿಸಿ ಕಾರ್ಯವೈಖರಿಯನ್ನು ಹಂಚಿಕೆ ಮಾಡಲಾಗಿದೆ. ಈ ಎಲ್ಲ ಅಧಿಕಾರಿ, ಸಿಬ್ಬಂದಿಗಳ ದೀರ್ಘಾವಧಿ ರಜೆ ತೆಗೆದುಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿಯಿಂದ ಮಂಜೂರಾತಿ ಪಡೆಯುವುದು ಕಡ್ಡಾಯ ಎಂದು ಧಾರವಾಡ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ನಿರ್ದೇಶಿಸಿದ್ದಾರೆ.
ಚುನಾವಣಾ ಕೆಲಸಗಳ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಅವರು ಆದೇಶ ಹೊರಡಿಸಿದ್ದಾರೆ. “ಚುನಾವಣಾ ಕೆಲಸಕ್ಕೆ ನೇಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಚುನಾವಣೆ ಮುಕ್ತಾಯಗೊಳ್ಳುವವರೆಗೂ ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕಾಗಿರುತ್ತದೆ” ಎಂದು ಹೇಳಿದ್ದಾರೆ.
“ಧಾರವಾಡ ಜಿಲ್ಲೆಯಲ್ಲಿನ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಚುನಾವಣೆ ಮುಕ್ತಾಯಗೊಳ್ಳುವವರೆಗೆ ಹಂಚಿಕೆ ಮಾಡಿರುವ ಕರ್ತವ್ಯಗಳನ್ನು ಯಾವುದೇ ಲೋಪವಾಗದಂತೆ ನಿರ್ವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ದೀರ್ಘಾವಧಿ ರಜೆ ಮಂಜೂರು ಮಾಡುವಂತಿಲ್ಲ” ಎಂದು ನಿರ್ದೇಶನ ನೀಡಿದ್ದಾರೆ.