ʼವರಾಹ ರೂಪಂʼ ಹಾಡಿನ ಪ್ರಸಾರಕ್ಕೆ ತಡೆ ನೀಡಿದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ
ʼನವಸರಂʼ ಹಾಡಿನ ಟ್ಯೂನ್ ಕದ್ದ ಆರೋಪ ಎದುರಿಸುತ್ತಿರುವ ʼಕಾಂತಾರʼ ಚಿತ್ರತಂಡ
‘ಕಾಂತಾರ’ ಚಿತ್ರದ ʼವರಾಹ ರೂಪಂʼ ಹಾಡಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮಲಯಾಳಂನ ಜನಪ್ರಿಯ ʼನವರಸಂʼ ಹಾಡಿನ ಟ್ಯೂನ್ ಕದ್ದು ‘ವರಾಹ ರೂಪಂ’ ಹಾಡನ್ನು ಸೃಷ್ಟಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ವಿವಾದಕ್ಕೆ ಸಂಬಂಧಿಸಿ ಪ್ರಕರಣದ ವಿಚಾರಣೆ ನಡೆಸಿರುವ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಹಾಡಿನ ಪ್ರಸಾರಕ್ಕೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಗುರುವಾರ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶ ಕೆ.ಇ ಸಾಹಿಲ್, ” ʼನವರಸಂʼ ಹಾಡಿನ ಸ್ಫೂರ್ತಿಯಿಂದಲೇ ʼವರಾಹ ರೂಪಂʼ ಹಾಡನ್ನು ಸೃಷ್ಟಿಸಿರುವುದಾಗಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಹಾಡಿನ ಮೂಲ ಹಕ್ಕನ್ನು ಹೊಂದಿರುವ ʼಮಾತೃಭೂಮಿ ಪಬ್ಲಿಕೇಶನ್ʼ ಮತ್ತು ಹಾಡಿನ ಸೃಷ್ಟಿಕರ್ತರಾದ ʼಥೈಕ್ಕುಡಂ ಬ್ರಿಡ್ಜ್ʼ ತಂಡಕ್ಕೆ ಕೃಪೆಯನ್ನು ನೀಡಬೇಕು. ವಿವಾದ ಇತ್ಯರ್ಥವಾಗುವ ವರೆಗೆ ಚಿತ್ರಮಂದಿರ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ವಿವಾದಿತ ಹಾಡನ್ನು ಪ್ರಸಾರ ಮಾಡಬಾರದು” ಎಂದು ಮಧ್ಯಂತರ ಆದೇಶ ನೀಡಿದ್ದಾರೆ.
ʼಕಾಂತಾರʼ ಸಿನಿಮಾ ಬಿಡುಗಡೆಯಾದ ಕೆಲವೇ ದಿನಕ್ಕೆ ʼವರಾಹ ರೂಪಂʼ ಹಾಡು ʼನವರಸಂʼ ಆಲ್ಬಂನಂತಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ʼಥೈಕ್ಕುಡಂ ಬ್ರಿಡ್ಜ್ʼ ತಂಡ ಮತ್ತು ʼಮಾತೃಭೂಮಿ ಪಬ್ಲಿಕೇಶನ್ʼ, ʼಕಾಂತಾರʼ ಚಿತ್ರದ ನಿರ್ದೇಶಕ, ನಾಯಕ ನಟ ರಿಷಬ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಅವರುಗಳ ವಿರುದ್ಧ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಪೊಲೀಸ್ ಠಾಣೆಗಳಲ್ಲಿ ಕೃತಿ ಚೌರ್ಯ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್ ಕೂಡ ವಿವಾದಿತ ʼವರಾಹ ರೂಪಂʼ ಹಾಡು ʼನವರಸಂʼ ಆಲ್ಬಂನ ನಕಲು ಎಂದು ಅಭಿಪ್ರಾಯ ಪಟ್ಟಿತ್ತು.
ಈ ಸುದ್ದಿ ಓದಿದ್ದೀರಾ? ಬಾಲಿವುಡ್ ಮಂದಿಗಿಂತ ದಕ್ಷಿಣದ ಕಲಾವಿದರಿಗೇ ವೃತ್ತಿಪರತೆ ಹೆಚ್ಚೆಂದ ಅಮೋಲ್ ಪಾಲೇಕರ್
ಆದರೆ, ಅಜನೀಶ್ ಲೋಕನಾಥ್, ರಿಷಬ್ ಶೆಟ್ಟಿ ಮತ್ತು ಚಿತ್ರತಂಡ ತಾವು ʼನವಸರಂʼ ಹಾಡಿನ ಟ್ಯೂನ್ ಕದ್ದಿಲ್ಲ. ಆ ಹಾಡಿನಿಂದ ಸ್ಫೂರ್ತಿ ಪಡೆದು ʼವರಾಹ ರೂಪಂʼ ಹಾಡನ್ನು ರಚಿಸಿದ್ದೇವೆ. ಯಾವುದೇ ಕಾರಣಕ್ಕೂ ಥೈಕ್ಕುಡಂ ಬ್ರಿಡ್ಜ್ ತಂಡಕ್ಕೆ ಕೃಪೆ ನೀಡುವುದಿಲ್ಲ ಎಂದಿತ್ತು. ಕೆಲ ದಿನಗಳ ಹಿಂದೆ ಪ್ರಕರಣದ ವಿಚಾರವಾಗಿ ಈದಿನ.ಕಾಮ್ ಜೊತೆಗೆ ಮಾತನಾಡಿದ್ದ ʼಥೈಕ್ಕುಡಂ ಬ್ರಿಡ್ಜ್ʼ ತಂಡದ ವ್ಯವಸ್ಥಾಪಕ ಸುಜಿತ್, ನ್ಯಾಯ ಸಿಗುವ ವರೆಗೆ ಕಾನೂನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದರು.