ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಚೇರಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ರೆಕಾರ್ಡ್ ರೂಂನಲ್ಲಿದ್ದ ಪತ್ರಗಳನ್ನು ಈಗ ಡಿಜಿಟಲೀಕರಣ ಮಾಡಲಾಗುತ್ತಿದೆ. ಮೂರು ತಿಂಗಳೊಳಗೆ ಪ್ರತಿಯೊಂದು ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡಿ ಸರ್ಕಾರದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.
ಮಾಗಡಿ ತಾಲೂಕು ಕಚೇರಿಯಲ್ಲಿ ಶನಿವಾರ ದಾಖಲಾತಿಗಳ ಸ್ಕ್ಯಾನಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಇಂದಿನಿಂದ ಮೂರು ತಿಂಗಳ ಕಾಲ ಸತತವಾಗಿ ರೆಕಾರ್ಡ್ ರೂಂನಲ್ಲಿರುವ ಎಲ್ಲ ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡಿ ಸರ್ಕಾರದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಕೆಲಸವನ್ನು ಮಾಡಲು ಈಗ ಐದು ಸ್ಕ್ಯಾನರ್‌ಗಳನ್ನು ತರಿಸಲಾಗಿದೆ. ಸೋಮವಾರದ ಬಳಿಕ ಮತ್ತೆ ಐದು ಸ್ಕ್ಯಾನರ್‌ಗಳು ಬರಲಿದ್ದು, 10 ಸ್ಕ್ಯಾನರ್‌ಗಳ ಮೂಲಕ ತರಬೇತಿ ಪಡೆದಿರುವ ಕಂಪ್ಯೂಟರ್ ಆಪರೇಟರ್‌ಗಳ ಮೂಲಕ ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡುವ ಕೆಲಸ ಮಾಡಲಾಗುತ್ತಿದೆ. ಪ್ರತಿದಿನ ಅವರಿಗೆ 5,000 ಪ್ರತಿಗಳ ಸ್ಕ್ಯಾನಿಂಗ್ ಮಾಡುವ ಗುರಿಯನ್ನು ಕೊಡಲಾಗಿದ್ದು, ಸಾರ್ವಜನಿಕರು ಈ ಸಮಯದಲ್ಲಿ ಅಧಿಕಾರಿಗಳ ಜೊತೆ ಸ್ಪಂದಿಸುವ ಕೆಲಸ ಮಾಡಬೇಕು. ಈ ದಾಖಲಾತಿಗಳು ಸ್ಕ್ಯಾನಿಂಗ್ ಬಳಿಕ ಯಾವುದೇ ತೊಂದರೆಗಳಿಲ್ಲದೆ ಕಂಪ್ಯೂಟರ್ ಮೂಲಕ ತಮ್ಮ ದಾಖಲಾತಿಗಳನ್ನು ಪಡೆಯಬಹುದು. ಈ ಸಮಯದಲ್ಲಿ ಸಾರ್ವಜನಿಕರು ಅಧಿಕಾರಿಗಳ ಜೊತೆ ಸೌಮ್ಯವಾಗಿ ವರ್ತಿಸಬೇಕು” ಎಂದು ಮನವಿ ಮಾಡಿದರು.
ಹಳೆಯ ದಾಖಲಾತಿಗಳು ಸಿಗಲಿವೆ: ರಾಮನಗರ ಜಿಲ್ಲೆಯಲ್ಲಿ ಹಾರೋಹಳ್ಳಿ ತಾಲೂಕಿನಲ್ಲಿ ರೆಕಾರ್ಡ್‌ಗಳನ್ನು ಸಂಪೂರ್ಣ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಮಾಗಡಿಯಲ್ಲಿ ಕೂಡ ರೆಕಾರ್ಡ್ ರೂಂಗಳ ದಾಖಲಾತಿ ಸ್ಕ್ಯಾನಿಂಗ್ ಮಾಡುವ ಕಾರ್ಯಕ್ಕೆ ಚಾಲನೆ ದೊರೆತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಸತಿನಿಲಯದ ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
“ಸಾರ್ವಜನಿಕರು ತಮಗೆ ಬೇಕಾಗಿರುವ ಪತ್ರಗಳನ್ನು ಪಡೆಯುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿದೆ, ಕೆಲವು ದಾಖಲಾತಿಗಳು ಸಿಗುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಮಾಗಡಿ ತಾಲೂಕಿನಲ್ಲಿ 2.5 ಲಕ್ಷ ದಾಖಲಾತಿಗಳ ಪೈಕಿ ಪ್ರತಿಯೊಂದು ದಾಖಲಾತಿಗಳನ್ನು ಸ್ಕ್ಯಾನಿಂಗ್ ಮಾಡುವ ಸಮಯದಲ್ಲಿ ಹಳೆಯ ದಾಖಲಾತಿಗಳು ಸಿಗುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರಿಗೆ ಅಗತ್ಯವಾದ ದಾಖಲಾತಿಗಳನ್ನು ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ” ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಇದೇ ವೇಳೆ ತಹಶೀಲ್ದಾರ್ ಸುರೇಂದ್ರ ಮೂರ್ತಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.