ಬೆಂಗಳೂರಿನ ನೀರಿನ ಅಗತ್ಯತೆಗಳನ್ನು ಪೂರೈಸಲು ಶರವತಿ ನದಿ ನೀರನ್ನು ಬೆಂಗಳೂರಿಗೆ ತಿರುಗಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಜಲವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ವಾಪಸ್ ನದಿಗೆ ಹರಿಸಲಾಗುತ್ತಿಲ್ಲ. ಈ ಬಗ್ಗೆ ಮಾತನಾಡಿರುವ ಅವರು, “ಜಲವಿದ್ಯುತ್‌ಗೆ ಬಳಸಿದ ನೀರನ್ನು ಮರುಬಳಕೆಗಾಗಿ ಪಂಪ್ ಸ್ಟೋರೇಜ್ ಮಾಡಲಾಗುತ್ತಿದೆ. ಇದರಿಂದ 24 ಗಂಟೆಯೂ ವಿದ್ಯುತ್ ಉತ್ಪಾದನೆ ಮಾಡಬಹುದು” ಎಂದು ಹೇಳಿದರು.
“ಲಿಂಗನಮಕ್ಕಿ ಮಾತ್ರವಲ್ಲದೆ, ವರಾಹಿಯಲ್ಲೂ ಪಂಪ್ ಸ್ಟೋರೇಜ್ ನಿರ್ಮಿಸಲಾಗುತ್ತಿದೆ. ಅಲ್ಲಿಯೂ, ಹೆಚ್ಚು ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದಾಗಿ, ವಿದ್ಯುತ್ ಅಭಾವವನ್ನು ನೀರಿಸಲು ಸಹಾಯವಾಗುತ್ತದೆ” ಎಂದು ಹೇಳಿದ್ದಾರೆ.
“ಶರಾವತಿ ನದಿ ನೀರನ್ನು ಬೆಂಗಳೂರಿಗೆ ತಿರುಗಿಸುವ ಯಾವುದೇ ವಿಚಾರವಾಗಲೀ, ಪ್ರಸ್ತಾಪವಾಗಲೀ ಸರ್ಕಾರದ ಮುಂದೆ ಇಲ್ಲ” ಎಂದು ಹೇಳಿದ್ದಾರೆ.