ವೈದ್ಯರ ನಿರ್ಲಕ್ಷ್ಯದ ಕಾರಣದಿಂದ ಅವಳಿ ಕಂದಮ್ಮಗಳ ಸಹಿತ ಬಾಣಂತಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಖಾಸಗಿ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.
ಗಜೇಂದ್ರಗಡ ಪಟ್ಟಣದ ಕಾರೊಡಗಿಮಠ ಆಸ್ಪತ್ರೆಯಲ್ಲಿ ಫೆಬ್ರವರಿ 2 ರಂದು ವಿರೂಪಾಪೂರ ಗ್ರಾಮದ 28 ವರ್ಷದ ನಂದಿನಿ ಎಂಬುವವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಗಂಡು, ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಿಝೇರಿಯನ್ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದರು. ಹೆರಿಗೆ ನಂತರ ಅವಳಿ ಮಕ್ಕಳು ಸಾವನ್ನಪ್ಪಿದ್ದವು. ನಂತರ ತೀವ್ರ ರಕ್ತಸ್ರಾವದಿಂದ ಬಾಣಂತಿಗೆ ಲೋ ಬಿಪಿ ಆಗಿತ್ತು.
ತಕ್ಷಣ ಮಹಿಳೆಯನ್ನು ಬಾಗಲಕೋಟೆ ಜಿಲ್ಲೆ ಬದಾಮಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರೂ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸಿಝೇರಿಯನ್ ಹೆರಿಗೆ ವೇಳೆ ರಕ್ತದ ವ್ಯವಸ್ಥೆ ಮಾಡದೇ ಹೆರಿಗೆ ಮಾಡಿಸಿದ್ದಾರೆಂದು ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಗಜೇಂದ್ರಗಢ ಪಟ್ಟಣ ಮೃತ ಬಾಣಂತಿ ನಂದಿನಿ ತವರೂರಾಗಿದ್ದರಿಂದ ವಿಷಯ ತಿಳಿದ ಕುಟುಂಬಸ ಸದಸ್ಯರು ಆಸ್ಪತ್ರೆಗೆ ಆಗಮಿಸಿ ಪ್ರತಿಭಟಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ಗಜೇಂದ್ರಗಢ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಬಗ್ಗೆ ಪ್ರಕರಣ ಕೂಡ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಉದ್ರೇಕಕಾರಿ ಭಾಷಣ ಆರೋಪ: ಖ್ಯಾತ ಮುಸ್ಲಿಂ ವಾಗ್ಮಿ ಮುಫ್ತಿ ಸಲ್ಮಾನ್ ಅಝ್ಹರಿ ಬಂಧನ
ತಮ್ಮ ಮೇಲಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, ನಮ್ಮದೇನೂ ತಪ್ಪಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ಬಳಿಕವಷ್ಟೇ ಬಾಣಂತಿ, ಅವಳಿ ಮಕ್ಕಳ ಸಾವಿನ ವಿವರ ತಿಳಿದು ಬರಲಿದೆ.