ಜೂನ್ 9ಕ್ಕೆ ತೆರೆಗೆ ಬರಲಿದೆ ʼಬ್ಲಡಿ ಡ್ಯಾಡಿʼ ಸಿನಿಮಾ
ನಿರೀಕ್ಷೆ ಹೆಚ್ಚಿಸಿದ ಆ್ಯಕ್ಷನ್ ಪ್ಯಾಕ್ ಟೀಸರ್
ಬಾಲಿವುಡ್‌ನ ಖ್ಯಾತ ನಟ ಶಾಹಿದ್ ಕಪೂರ್ ಅಭಿನಯದ ʼಬ್ಲಡಿ ಡ್ಯಾಡಿʼ ಸಿನಿಮಾದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದೆ. ಇತ್ತೀಚೆಗೆ ʼಫರ್ಜಿʼ ವೆಬ್ ಸರಣಿಯಲ್ಲಿ ನಕಲಿ ನೋಟು ಚಾಪಿಸುವ ವ್ಯಕ್ತಿಯ ಪಾತ್ರದಲ್ಲಿ ಗಮನ ಸೆಳೆದಿದ್ದ ಶಾಹಿದ್ ಕಪೂರ್, ʼಬ್ಲಡಿ ಡ್ಯಾಡಿʼ ಚಿತ್ರದಲ್ಲಿ ʼಆ್ಯಕ್ಷನ್ ಲುಕ್ʼನಲ್ಲಿ ಮಿಂಚಿದ್ದಾರೆ.
ʼಡ್ರಗ್ ಮಾಫಿಯಾʼದ ಎಳೆಯನ್ನು ಹೊಂದಿರುವ ʼಬ್ಲಡಿ ಡ್ಯಾಡಿʼ ಚಿತ್ರದಲ್ಲಿ ಶಾಹಿದ್ ಕಪೂರ್ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ನಿಮಿಷ 15 ಸೆಕೆಂಡುಗಳ ಟೀಸರ್‌ನಲ್ಲಿ ಆ್ಯಕ್ಷನ್ ದೃಶ್ಯಗಳನ್ನೇ ಹೆಚ್ಚಾಗಿ ತೋರಿಸಲಾಗಿದೆ. ತನ್ನ ಮಗನನ್ನು ಅಪಹರಿಸುವ ಶತ್ರುಗಳ ವಿರುದ್ಧ ಸೆಣೆಸಾಡುವ ತಂದೆಯ ಪಾತ್ರದಲ್ಲಿ ಶಾಹಿದ್ ಗಮನ ಸೆಳೆಯುತ್ತಾರೆ.
ʼಸುಲ್ತಾನ್ʼ, ʼಟೈಗರ್ ಜಿಂದಾ ಹೈʼ, ʼಭಾರತ್ʼ, ʼಜೋಗಿʼ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ʼಬ್ಲಡಿ ಡ್ಯಾಡಿʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟೀಸರ್ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಕೂಡ ಘೋಷಿಸಲಾಗಿದ್ದು, ಜೂನ್ 9ರಂದು ʼಬ್ಲಡಿ ಡ್ಯಾಡಿʼ ತೆರೆಗೆ ಬರಲಿದೆ.
ಶಾಹಿದ್ ಕಪೂರ್ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಡಯಾನ ಪೆಂಟಿ, ಸಂಜಯ್ ಕಪೂರ್, ರೋನಿತ್ ರಾಯ್, ರಾಜೀವ್ ಖಂಡೇಲ್‌ವಾರ್, ವಿವಾನ್ ಬಥೇನಾ, ಅಂಕುರ್ ಭಾಟಿಯಾ, ಮುಕೇಶ್ ಭಟ್, ಸರ್ತಾಜ್ ಕಕ್ಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.