ಪೇಟಿಎಂ ಪೇಮೆಂಟ್ ಬ್ಯಾಂಕ್ ಸೇವೆಗಳನ್ನು ಆರ್‌ಬಿಐ ರದ್ದುಗೊಳಿಸಿದ ನಂತರ ಜಾರಿ ನಿರ್ದೇಶನಾಲಯದ ಮೌನದ ಬಗ್ಗೆ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ, “ ಈ ಹಗರಣದ ಬಗ್ಗೆ ಕೇಂದ್ರದ ನಿಲುವು ಏನು? ಕಳೆದ ಏಳು ವರ್ಷಗಳಿಂದ ತಪ್ಪು ನಡೆಯುತ್ತಿದ್ದರೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಏಕೆ ಕ್ರಮ ಜರುಗಿಸಿಲ್ಲ? ಪೇಟಿಎಂ ಪೇಮೆಂಟ್ ಬ್ಯಾಂಕಿನ ಮುಖ್ಯಸ್ಥ ಪ್ರಧಾನಿ ಮೋದಿ ಭಕ್ತ. ಅವರೊಂದಿಗೆ ಸೆಲ್ಫಿ ಪಡೆದಿದ್ದಾರೆ ಹಾಗೂ ಪ್ರಧಾನಿಯಿಂದ ಅನುಕೂಲ ಪಡೆಯಲು ಜಾಹಿರಾತುಗಳನ್ನು ಪ್ರಕಟಿಸಿದ್ದಾರೆ” ಎಂದು ಆರೋಪಿಸಿದರು.
“ಪ್ರಧಾನಿ ಮೋದಿ ತಮ್ಮ ಚುನಾವಣಾ ರ್‍ಯಾಲಿಗಳಲ್ಲಿ ಪೇಟಿಎಂ ಅನ್ನು ಬೆಂಬಲಿಸಿದ್ದಾರೆ. ಪ್ರಧಾನಿ ಮೋದಿ ನಿಕಟವರ್ತಿಗಳ ವಿರುದ್ಧ ಆರೋಪ ಬಂದರೆ ತನಿಖಾ ಸಂಸ್ಥೆಗಳು ಏಕೆ ಮೌನವಾಗುತ್ತವೆ? ಇ.ಡಿ ಏಕೆ ಮೌನವಾಗಿದೆ?” ಎಂದು ಸುಪ್ರಿಯಾ ಶ್ರೀನಾಥೆ ಪ್ರಶ್ನಿಸಿದ್ದಾರೆ.
ಪೇಟಿಎಂ ಮಾತೃ ಕಂಪನಿ ಒನ್97 ಕಮ್ಯೂನಿಕೇಷನ್ಸ್ ಅಥವಾ ಅದರ ಮುಖ್ಯಸ್ಥ ವಿಜಯ್ ಶಂಕರ್ ಶರ್ಮಾ ಇ.ಡಿ ತನಿಖೆಗೆ ಒಳಪಡಲಿದೆ ಎನ್ನುವುದನ್ನು ಪೇಟಿಎಂ ಸಂಸ್ಥೆ ನಿರಾಕರಿಸಿದೆ.
ಈ ಸುದ್ದಿ ಓದಿದ್ದೀರಾ? ಪೇಟಿಎಂ ಪಾವತಿ ಬ್ಯಾಂಕ್ | ಅಕ್ರಮ ಹಣ ವ್ಯವಹಾರದ ಬಗ್ಗೆ ಇ.ಡಿ ತನಿಖೆಯ ಅಗತ್ಯವೇಕಿದೆ?
“ಪೇಟಿಎಂ ಸಂಸ್ಥೆ, ಮುಖ್ಯಸ್ಥರು ಅಥವಾ ಸಿಇಒ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿಯಿಂದ ಯಾವುದೇ ತನಿಖೆ ಎದುರಿಸುತ್ತಿಲ್ಲ. ಈ ಮೊದಲು ಕೆಲವು ವಹಿವಾಟುದಾರರು/ ಬಳಕೆದಾರರು ಆಯಾ ಸಂದರ್ಭಗಳಲ್ಲಿ ತನಿಖೆಗೊಳಪಟ್ಟಿದ್ದಾರೆ” ಎಂದು ಅವರು ಟೀಕಿಸಿದ್ದಾರೆ.
ನಾವು ಸದಾ ಅಧಿಕಾರಿಗಳೊಂದಿಗೆ ಸಹಕರಿಸುತ್ತೇವೆ ಎಂದು ಪೇಟಿಎಂ ಇತ್ತೀಚಿಗೆ ಪ್ರಕಟಣೆಯಲ್ಲಿ ತಿಳಿಸಿತ್ತು. ನಾವು “ದಾಖಲೆಗಳನ್ನು ನೇರವಾಗಿ ಒದಗಿಸುತ್ತೇವೆ ಹಾಗೂ ಅಕ್ರಮ ಹಣ ವರ್ಗಾವಣೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸುತ್ತೇವೆ. ನಾವು ಭಾರತೀಯ ಕಾನೂನುಗಳನ್ನು ಅನುಸರಿಸುತ್ತಿದ್ದು, ಅದಕ್ಕೆ ಸದಾ ಬದ್ಧವಾಗಿರುತ್ತೇವೆ. ದೇಶದ ನಿಯಂತ್ರಕ ಆದೇಶಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ” ಎಂದು ಪೇಟಿಎಂ ತನ್ನ ಪ್ರಕಟಣೆಯಲ್ಲಿ ಹೇಳಿತ್ತು.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಪೇಟಿಎಂ ಪೇಮೆಂಟ್ ಬ್ಯಾಂಕ್ ಪರವಾನಗಿಯನ್ನು ಮುಂದಿನ ತಿಂಗಳು ರದ್ದುಗೊಳಿಸಲು ಆರ್‌ಬಿಐ ಪರಿಗಣಿಸಲಿದೆ. ಕಂಪನಿಗೆ ಫೆಬ್ರವರಿ 29ಕ್ಕೆ ಗಡುವು ವಿಧಿಸಲಾಗಿದ್ದು, ನಂತರದಲ್ಲಿ ಪೇಟಿಎಂ ಅಂಗಸಂಸ್ಥೆ ನೂತನ ಠೇವಣಿಗಳನ್ನು ಸ್ವೀಕರಿಸುವುದಿಲ್ಲ. ಸಾವಿರಾರು ಪೇಟಿಎಂ ಪೇಮೆಂಟ್ ಬ್ಯಾಂಕ್ ಗ್ರಾಹಕರು ತಮ್ಮ ಕೆವೈಸಿ ದಾಖಲೆಯನ್ನೇ ಸಲ್ಲಿಸಿಲ್ಲ ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಒಂದೇ ಪಾನ್ ಕಾರ್ಡ್ ಬಳಸಿ ಸಾವಿರಾರು ಖಾತೆಗಳ ನೋಂದಣಿಗೆ ಅವಕಾಶ ಕೊಡಲಾಗಿದೆ ಎಂದು ಆರ್‌ಬಿಐ ಉಲ್ಲಂಘನೆ ಆದೇಶದಲ್ಲಿ ತಿಳಿಸಿತ್ತು.