ರಾಯಚೂರು ಮತ್ತು ಸಿಂಧನೂರು ನಗರಸಭೆ ಸೇರಿದಂತೆ ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನೀರಿನ ಸಮಸ್ಯೆ ಪರಿಹರಿಸಲು ಶೀಘ್ರದಲ್ಲಿ ಪೌರಾಡಳಿತ, ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಒಳಗೊಂಡಂತೆ ಎಲ್ಲ ಅಧಿಕಾರಿಗಳ ಸಭೆ ಆಯೋಜನೆ ಮಾಡುತ್ತೇವೆ ಎಂದು ಪೌರಾಡಳಿತ ಸಚಿವ ರಹೀಂಖಾನ್ ಹೇಳಿದ್ದಾರೆ.
ರಾಯಚೂರಿನಲ್ಲಿ ನಗರ ಸ್ಥಳೀಯ ಸಂಸ್ಥೆಗಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. “ಜಿಲ್ಲೆ ಯಾವುದೇ ನಗರ, ಪಟ್ಟಣಗಳಲ್ಲಿ ನಿತ್ಯವೂ ನೀರು ಪೂರೈಕೆ ಮಾಡುತ್ತಿಲ್ಲ. ಲಭ್ಯವಿರುವ ನೀರಿನ ಆಧಾರದ ಮೇಲೆ ಬೇಸಿಗೆ ದಿನಗಳು ಗಂಭೀರವಾಗುವ ಮುನ್ಸೂಚನೆಗಳಿದ್ದು ಎಲ್ಲ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಬೇಕು” ಎಂದು ಸೂಚಿಸಿದರು.
“ಹಟ್ಟಿ ಪಟ್ಟಣ ಪಂಚಾಯ್ತಿಯಿಂದ ಜಲ ಜೀವನ ಮಿಷನ್ ಕಾಮಗಾರಿ ವ್ಯಾಪ್ತಿಗೆ ಒಳಪಟ್ಟಿದ್ದು, ಬಹುಗ್ರಾಮ ಯೋಜನೆಯಡಿ ಯೋಜನೆ ರೂಪಿಸಲಾಗಿದೆ. ಆದರೂ ನೀರು ಪೂರೈಕೆ ಸಾಧ್ಯವಾಗಿಲ್ಲ. ಕೂಡಲೇ ಸಮಸ್ಯೆಯಾತ್ಮಕ ವಾರ್ಡಗಳಿಗೆ ಟ್ಯಾಂಕರ್ ಮೂಲಕ ನೀರುಪೂರೈಸುವಂತೆ ಸೂಚಸಿದರು. ಕವಿತಾಳ ಗ್ರಾಮದಲ್ಲಿ ಎರಡು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ೧೬ ವಾರ್ಡಗಳಿಗೆ ೨ ತಿಂಗಳಿಗೆ ಆಗುವಷ್ಟು ನೀರು ಸಂಗ್ರಹವಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು. ಲಿಂಗಸೂಗೂರು ಪುರಸಭೆಯಲ್ಲ ಎನ್‌ಆರ್‌ಬಿಸಿ ನೀರಿನ ಮೇಲೆ ಅವಲಂಬಿತವಾಗಿದೆ ೨ ತಿಂಗಳಿಗೆ ಆಗುವಷ್ಟು ನೀರು ಸಂಗ್ರಹವಿದ್ದು, ಮೂರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಮಾನವಿ ಪುರಸಭೆಯಿಂದ ೩ ದಿನಕೊಮ್ಮೆ ನೀರು ಸರಬರಾಜುಮಾಡಲಾಗುತ್ತಿದೆ” ಎಂದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಮಾತನಾಡಿ, “ಕಳೆದ ಏಳು ವರ್ಷಗಳಿಂದ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. 85 ಕೋಟಿ ರೂ. ವೆಚ್ಚ ಮಾಡಲಾಗಿದ್ದರೂ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಕಾಮಗಾರಿ ಅಪೂರ್ಣವಾಗಿ ಉಳಿಸಿದೆ” ಎಂದ ಬೇಸರ ವ್ಯಕ್ತಪಡಿಸಿದರು.
“ಕಾಮಗಾರಿ ನಿರ್ಲಕ್ಷ್ಯಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ಪೌರಾಡಳಿತ ಸಚಿವರು ಸೂಚಿಸಿದರು.
“ರಾಯಚೂರು ನಗರಸಭೆಯಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. 340 ಬೊರವೆಲ್‌ಗಳಿದ್ದು ದುರಸ್ತಿಗೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಎಂದು ಪೌರಾಯುಕ್ತ ಗುರುಸಿದ್ದಯ್ಯ ಹೀರೆಮಠ ಹೇಳಿದರು.
“24 ಗಂಟೆ ಕುಡಿಯುವ ನೀರಿನ ಯೋಜನೆ ಅಪೂರ್ಣವಾಗಿ ನಿಂತಿದೆ. ಗುತ್ತಿಗೆದಾರರು ಕೋರ್ಟ್‌ಗೆ ಹೋಗಿದ್ದಾರೆ. ಇನ್ನೂ ಆರು ಟ್ಯಾಂಕ್‌ಗಳಿಗೆ ನೀರು ಸಂಪರ್ಕ ನೀಡಲಾಗಿದೆ” ಎಂದು ಅವರು ತಿಳಿಸಿದರು.
“ಚಿಕ್ಕಸೂಗೂರು ಮತ್ತು ರಾಂಪೂರು ಜಲಾಶಯದಿಂದ ನೀರು ಪೂರೈಕೆ ಸಮಸ್ಯೆಯಾಗದಂತೆ ಮೋಟಾರ್, ಟಿಸಿ ಖರೀದಿಸಲು 5 ಕೋಟಿ ರೂ. ಅನುದಾನವನ್ನು ಕೆಕೆಆರ್‌ಡಿಬಿಯಿಂದ ಅನುದಾನ ಒದಗಿಸಲಾಗಿದೆ” ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
ಸಭೆಯಲ್ಲಿ ಮಾನವಿ ಶಾಸಕ ಹಂಪಯ್ಯನಾಯಕ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹಾಗೂ ಯೋಜನಾಧಿಕಾರಿ ಜಗಧೀಶ ಸೇರಿದಂತೆ ನಗರ ಸ್ಥಳೀಯ ಸಂಸ್ಥೇಗಳ ಮುಖ್ಯಾಧಿಕಾರಿಗಳು, ಸಿಬ್ಬಂದಿಗಳಿದ್ದರು.
ವರದಿ : ಹಫೀಜುಲ್ಲ