“ವರ್ಗಾವಣೆ ನಂತರ ಕೆಲಸಕ್ಕೆ ಸೇರುವ ಅಧಿಕಾರಿಗಳು ಕಡ್ಡಾಯವಾಗಿ ಎನ್‌ಒಸಿ (NOC) ಮತ್ತು ಎಲ್‌ಪಿಸಿ (LPC) ಪಡೆಯಬೇಕು. ಇಲ್ಲದಿದ್ದರೇ, ಅಂತಹವರ ಸಂಬಳ ಕಟ್ ಮಾಡಲಾಗುವುದು” ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ನಂತರ ಮನಬಂದಂತೆ ವರ್ತನೆ ತೋರುತ್ತಿದ್ದ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಬಿಸಿ ಮುಟ್ಟಿಸಿದ್ದಾರೆ. ಆಯುಕ್ತರು ನಗರದಲ್ಲಿರುವ ಪ್ರತಿ ಠಾಣೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದಾಗ ಪೊಲೀಸರ ಕಳ್ಳಾಟ ಬಯಲಾಗಿದೆ. ಈ ಹಿನ್ನೆಲೆ, ನಿಯಮಗಳನ್ನು ಪಾಲನೆ ಮಾಡುವಂತೆ ಆಯುಕ್ತರು ಆದೇಶಿಸಿದ್ದಾರೆ.
ಪೊಲೀಸ್ ಅಧಿಕಾರಿ ತಮ್ಮ ವರ್ಗಾವಣೆ ನಂತರ ಕಡ್ಡಾಯವಾಗಿ ಎನ್‌ಓಸಿ (ನೋ ಅಬ್ಜಕ್ಷನ್ ಸರ್ಟಿಫಿಕೇಟ್) ಮತ್ತು ಎಲ್‌ಪಿಸಿ (ಲಾಸ್ಟ್ ಪೇ ಸರ್ಟಿಫಿಕೇಟ್) ಪಡೆಯಬೇಕು. ಪಡೆಯದೆ ಇದ್ದವರಿಗೆ ಸಂಬಳ ಕಟ್ ಮಾಡಲು ಆದೇಶ ಜಾರಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಇನ್ಸ್‌ಪೆಕ್ಟರ್, ಸಬ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿ ಎನ್‌ಒಸಿ ಮತ್ತು ಎಲ್‌ಪಿಸಿ ಕಡ್ಡಾಯಗೊಳಿಸಲಾಗಿದ್ದು, ವರ್ಗಾವಣೆಗೊಳ್ಳುತ್ತಿದ್ದಂತೆ ಆಯಾ ಠಾಣಾಧಿಕಾರಿಗೆ ರಿವಾಲ್ವರ್, ವಾಕಿಟಾಕಿ, ಕೇಸ್ ಫೈಲ್, ಸಿಮ್ ಸೇರಿದಂತೆ ಎಲ್ಲವನ್ನು ಹ್ಯಾಂಡ್ ಓವರ್ ಮಾಡಬೇಕು. ಇವೆಲ್ಲವನ್ನು ಟೇಕ್ ಓವರ್ ಮಾಡಿಕೊಳ್ಳುವವರು ಸಂಪೂರ್ಣವಾಗಿ ಪರಿಶೀಲನೆ ಮಾಡಬೇಕು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾಜಿ ರೌಡಿಶೀಟರ್ ಜೇಡರಹಳ್ಳಿ ಕೃಷ್ಣಪ್ಪ ಬಂಧನ
ಇದೆಲ್ಲವನ್ನೂ ವರ್ಗಾಯಿಸಿದ ನಂತರ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಂದ ಎನ್‌ಒಸಿ ಮತ್ತು ಎಲ್‌ಪಿಸಿ ಪಡೆಯಬೇಕು ಎಂದು ಎಚ್ಚರಿಕೆ ನೀಡಲಾಗಿದೆ.