ಸುಳ್ಳು ಪ್ರಕರಣವೆಂದು ಮರೆ ಮಾಚಲು ಯತ್ನಿಸಿದ್ದ ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ತಡವಾಗಿ ನ್ಯಾಯ ದೊರಕಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ ಎಸ್ ಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನಾಲ್ಕು ವರ್ಷದ ಬಾಲಕಿಗೆ ವ್ಯಕ್ತಿಯೊಬ್ಬ ಬಿಸ್ಕೇಟ್ ಆಸೆ ತೋರಿಸಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಕಳೆದ ಸಂಕ್ರಾಂತಿ ಹಬ್ಬದ ಹಿಂದಿನ ದಿನ ಕಡಬ ಹೋಬಳಿ ಕೆ.ಅರಿವೇಸಂದ್ರ ಗ್ರಾಮದಲ್ಲಿ ನಡೆದಿತ್ತು. ಈ ಬಗ್ಗೆ ಸಿ ಎಸ್ ಪುರ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿಯಿಂದ ದೂರು ಪಡೆಯುವಲ್ಲಿ ಪೊಲೀಸರು ತಡ ಮಾಡಿದ್ದರು. ಆರೋಪಿಯನ್ನು ಕರೆ ತಂದು ದೂರು ದಾಖಲು ಮಾಡದೆ ಕೈ ಚೆಲ್ಲಿದ್ದರು.
ಗ್ರಾಮದ ಕೆಲ ಬಲಾಢ್ಯರು ಆರೋಪಿಯ ಪರ ನಿಂತು ಸಂತ್ರಸ್ತ ಕುಟುಂಬದ ಜತೆಗೆ ಮೂರ್ನಾಲ್ಕು ಗಂಟೆ ಚರ್ಚಿಸಿ ರಾಜಿ ಸಂಧಾನ ನಡೆಸಿದ್ದರು. ಈ ಭಯದ ವಾತಾವರಣಕ್ಕೆ ಮಂಕಾದ ಕುಟುಂಬ ದೂರು ನೀಡಲು ಹಿಂದೆ ಸರಿದಿತ್ತು. ಇಡೀ ಪ್ರಕರಣ ಮುಚ್ಚಿ ಹಾಕುವಲ್ಲಿ ಈ ತಂಡ ಯಶಸ್ವಿಯಾಯಿತು.
ದೂರು ನೀಡದಂತೆ ತಾಕೀತು ಮಾಡಿದ ಮಾಹಿತಿ ತಿಳಿದ ಬಳಿಕ ಹೋರಾಟಗಾರ, ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಅವರು ಮಕ್ಕಳ ಹಕ್ಕು ಆಯೋಗ, ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ನೀಡುವಂತೆ ಕೋರಿದ್ದರು.
ಲೈಂಗಿಕ ಪ್ರಕರಣ ಮರೆ ಮಾಚಲು ಯತ್ನಿಸಿದ್ದ ದೊಡ್ಡ ತಂಡ, “ಯಾರೋ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದಾರೆ” ಎಂದು ಪ್ರಕರಣ ಮುಚ್ಚಿ ಹಾಕಿದ ಬಲಾಢ್ಯರಿಗೆ ತಕ್ಕ ಉತ್ತರ ನೀಡಿದ ಪ್ರಕರಣ ಇಪ್ಪತ್ತು ದಿನಗಳ ಬಳಿಕ ಹೊಸ ತಿರುವು ಪಡೆಯಿತು.
ಹೋರಾಟಗಾರ ಸಿದ್ದಲಿಂಗೇಗೌಡ ಅವರ ಪತ್ರವನ್ನು ಗಣನೆಗೆ ತೆಗೆದುಕೊಂಡ ಮಕ್ಕಳ ಹಕ್ಕು ಆಯೋಗ ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿಗಳು ಗೌಪ್ಯವಾಗಿ ಸಂತ್ರಸ್ತ ಬಾಲಕಿ ಕೊಟ್ಟ ಹೇಳಿಕೆಯಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಪ್ರಕರಣಕ್ಕೆ ಮರು ಜೀವ ಬಂದಿತು. ಯಾವ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ನಡೆದಿತ್ತು, ಅದೇ ಸಿ ಎಸ್ ಪುರ ಠಾಣೆಯಲ್ಲಿ ದೂರು ದಾಖಲಾಗಿ ಆರೋಪಿ ದೊರೆಸ್ವಾಮಿ ಜೈಲು ಪಾಲಾಗಿದ್ದು, ಇಡೀ ಪ್ರಕರಣ ಮುಚ್ಚುವ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಕ್ಕೆ ತಕ್ಕ ಉತ್ತರ ಸಿಕ್ಕಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಕ್ಕಿದಂತಾಗಿದೆ.
ಸಾಮಾಜಿಕ ಹೋರಾಟಗಾರ ಜಿ ಎಸ್ ಮಂಜುನಾಥ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಗಂಭೀರತೆ ತಿಳಿಯದೆ ಕೆಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ಪ್ರಕರಣ ತಿರುಚುವಲ್ಲಿ ಸಹಕರಿಸಿದ್ದು ವಿಷಾದನೀಯ. ನಿಷ್ಪಕ್ಷವಾಗಿ ವರ್ತಿಸಬೇಕಿದ್ದ ಕೆಲ ಮಾಧ್ಯಮಗಳು ಆಮಿಷಕ್ಕೆ ಬಲಿಯಾಗಿದ್ದು ದುರಂತವೇ ಸರಿ” ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ನಿವೇಶನ ಹಕ್ಕು ಪತ್ರಕ್ಕಾಗಿ ದಲಿತ ಕುಟುಂಬಗಳ ಧರಣಿ
ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಘಟನೆ ನಾಗರಿಕ ಸಮಾಜಕ್ಕೆ ನಾಚಿಕೆ ತರುವಂತದ್ದು. ನಡೆದ ಪ್ರಕರಣವನ್ನು ಮರೆ ಮಾಚುವ ಕೆಲಸ ತಿಳಿದೂ ಕೈ ಚೆಲ್ಲಿದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಗ್ರಾಮದ ಬಲಾಢ್ಯರು ಪೋಲೀಸರ ಜೊತೆ ಸೇರಿ ಅತ್ಯಾಚಾರಗೈದವರಿಂದ ಹಣಪೀಕುವ ಯೋಜನೆ ಹಾಕಿರುತ್ತಾರೆ. ನಂತರ ಆರೋಪಿಗಳು ದಕ್ಷಿಣೆ ಕೊಡಲು ನಿರ್ಲಕ್ಷಿಸಿರುತ್ತಾರೆ ಹಾಗಾಗಿ ತಡವಾಗಿ ಪ್ರಕರಣಕ್ಕೆ ಬೆಳಕಿಗೆ ತರುತ್ತಿದ್ದಾರೆ. ಇಲ್ಲಿ ಅತ್ಯಾಚಾರಕ್ಕೆ ಒಳಗಾದವರು ಮತ್ತು ಓದುವ ನಾವುಗಳು ಮೂರ್ಖರು.