ಸರ್ಕಾರಿ ಶಾಲೆಗಳ ನಿರ್ವಹಣೆಗೆ ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಹಣ ಸಹಾಯವನ್ನು ಪಡೆಯಲು ಸರ್ಕಾರ ಆದೇಶ ನೀಡಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ ಎಂದು ಎಐಡಿಎಸ್‌ಒ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶದ ಕುರಿತು ಪತ್ರಿಕೆ ಹೇಳಿಕೆ ನೀಡಿದ್ದು, “ಸರ್ಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ಸ್ಥಾಪಿಸಿ, ಶಾಲೆಯ ಪೀಠೋಪಕರಣ, ಶೌಚಾಲಯ ನಿರ್ಮಾಣ, ಪ್ರಯೋಗಾಲಯಗಳ ಅಭಿವೃದ್ಧಿ, ಗ್ರಂಥಾಲಯ ನಿರ್ಮಾಣ ಸೇರಿದಂತೆ ಶಾಲೆಗಳ ಮೂಲ ಸೌಕರ್ಯಗಳನ್ನು ನಿರ್ಮಿಸಲು ಹಾಗೂ ನಿರ್ವಹಿಸಲು ಹಳೆಯ ವಿದ್ಯಾರ್ಥಿಗಳ ಮೂಲಕ ದೇಣಿಗೆ ಪಡೆಯಲು ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರದ ಈ ಆದೇಶವು, ಸರ್ಕಾರಿ ಶಾಲೆಗಳ ನಿರ್ವಹಣೆಯಿಂದ ಸಂಪೂರ್ಣವಾಗಿ ನುಣುಚಿಕೊಳ್ಳುವ ಯತ್ನವಾಗಿದೆ” ಎಂದು ಹೇಳಿದರು.
“ತೀವ್ರ ಸೌಕರ್ಯಗಳ ಕೊರತೆಯಿಂದ ಈಗಾಗಲೇ ನಲುಗುತ್ತಿರುವ ರಾಜ್ಯದ ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಸರ್ಕಾರದ ಮೂಲ ಜವಾಬ್ದಾರಿಯಾಗಬೇಕಿತ್ತು. ಆದರೆ, ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಈ ನಿರ್ವಹಣೆಯ ಜವಾಬ್ದಾರಿಯನ್ನು ವರ್ಗಾಯಿಸಲು ಸರ್ಕಾರ ನಿರ್ಧರಿಸಿರುವುದು ಅತ್ಯಂತ ಖಂಡನೀಯ. ಹೀಗಾದಲ್ಲಿ, ಶಾಲೆಗಳಲ್ಲಿನ ಮೂಲ ಸೌಕರ್ಯಗಳ ಕೊರತೆಗೆ, ಸರ್ಕಾರದ ಹೊಣೆಗಾರಿಕೆ ಇರುವುದಿಲ್ಲ. ಜೊತೆಗೆ, ಶಾಲಾ ಮಕ್ಕಳಿಗೆ ರಾಗಿಗಂಜಿ ನೀಡಲು, ಕಾರ್ಪೊರೇಟ್ ಕಂಪನಿಗಳ ದೇಣಿಗೆ (ಸಿಎಸ್‌ಆರ್) ಹಣವನ್ನು ಬಳಸುವುದಾಗಿಯೂ ರಾಜ್ಯ ಸರ್ಕಾರ ಹೇಳಿದೆ. ಅಲ್ಲಿಗೆ, ಸಂಪೂರ್ಣವಾಗಿ ಸರ್ಕಾರಿ ಶಾಲೆಗಳ ನಿರ್ವಹಣೆಯ ನೈತಿಕ ಜವಾಬ್ದಾರಿಯಿಂದ ಸರ್ಕಾರ ಕೈ ತೆಗೆಯುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಾಂಗ್ರೆಸ್ ಕಚೇರಿಗೆ ನುಗ್ಗಿ ಬಿಜೆಪಿಗರ ದಾಂಧಲೆ
“ಕ್ರಮೇಣವಾಗಿ ಬಜೆಟ್‌ನಲ್ಲಿ ಹಣ ಬಿಡುಗಡೆ ಕಡಿತಗೊಳಿಸಿ, ಇದೀಗ ಅವಶ್ಯವಿರುವ ಮೊತ್ತವನ್ನು ಇತರೆ ಮೂಲಗಳಿಂದ ಪಡೆಯಲು ಆದೇಶ ನೀಡುತ್ತಿರುವುದು ಸರ್ಕಾರದ ಧೋರಣೆಯನ್ನು ತೋರುತ್ತಿದೆ. ಅದರಲ್ಲೂ ರಾಜ್ಯ ಬಜೆಟ್ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಆದೇಶಗಳು, ಬಜೆಟ್‌ನಲ್ಲಿ ಏನನ್ನು ಅಪೇಕ್ಷೆ ಮಾಡಬಾರದು ಎಂಬುದನ್ನು ತೋರಿಸುತ್ತಿದೆ. ಹಳೆಯ ವಿದ್ಯಾರ್ಥಿ ಸಂಘಗಳು ಯಾವುದೇ ದೇಣಿಗೆಯನ್ನು ಸ್ವಯಂ ಪ್ರೇರಣೆಯಿಂದ ನೀಡಿದಲ್ಲಿ, ಅವುಗಳ ಶಾಲೆಗಳ ಮತ್ತಷ್ಟು ಅಭಿವೃದ್ಧಿಗೆ ಬಳಕೆಯಾಗಬೇಕೇ ಹೊರತು, ಆ ಹಣವನ್ನೇ ಶಾಲೆಯ ನಿರ್ವಹಣಾ ವೆಚ್ಚದ ಮೂಲವನ್ನಾಗಿ ಪರಿಗಣಿಸುವ ವಿದ್ಯಾರ್ಥಿ ವಿರೋಧಿ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.