ಶಾಲೆಯಲ್ಲಿಯೇ ಹಿರಿಯ ವಿದ್ಯಾರ್ಥಿಗಳು ಕಿರಯರ ಮೇಲೆ ರ್‍ಯಾಗಿಂಗ್ ಮಾಡಿದ್ದು, ಸುಮಾರು 15 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದ ಮೊರಾರ್ಜಿ ದೇಸಾತಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ನಡೆದಿದೆ.
ಸೋಮವಾರ ಕೆಲವು ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ ಬಳಿಕ, ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಮೂವರು ವಿದ್ಯಾರ್ಥಿಳಿಗೆ ಖಾಸಗಿ ಭಾಗಗಳಲ್ಲಿ ಗಾಯಗಳಾಗಿವೆ. ಅವರು ಆಘಾತಗೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುವ ಎಂಟು ಮಂದಿ ವಿದ್ಯಾರ್ಥಿಗಳು 8 ಮತ್ತು 9ನೇ ತರಗತಿ ವಿದ್ಯಾಥಿಗಳ ಮೇಲೆ 20 ದಿನಗಳಿಂದ ರ್‍ಯಾಗಿಂಗ್ ಮಾಡಿದ್ದಾರೆ. ಈ ವೇಳೆ, ಹಿಂಸಿ, ಥಳಿಸಿದ್ದಾರೆ. ತಮ್ಮ ಹೋಮ್‌ವರ್ಕ್, ಪ್ರಾಜೆಕ್ಟ್‌ಗಳನ್ನು ಮಾಡಿಕೊಂಡಿದ್ದಾರೆ. ನೆಲ ಸಾರಿಸುವಂತೆ ಒತ್ತಾಯಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳ ಕಿರುಕುಳ, ದೌರ್ಜನ್ಯದಿಂದ ಕಿರಿಯ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಪ್ಪಳ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹಾಸ್ಟೆಲ್‌ಗೆ ಧಾವಿಸಿ ವಿದ್ಯಾರ್ಥಿಗಳ ಹೇಳಿಕೆ ಪಡೆದಿದ್ದಾರೆ. ಕೆಲವು ಕಿರಿಯ ವಿದ್ಯಾರ್ಥಿಗಳು ಅನುಭವಿಸುತ್ತಿರುವ ದೌರ್ಜನ್ಯದ ಬಗ್ಗೆ ಹಾಸ್ಟೆಲ್ ವಾರ್ಡನ್‌ಗೆ ತಿಳಿಸಿದ್ದರೂ, ಅವರು ನಿರ್ಲಕ್ಷ್ಯಸಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಘಟನೆ ಬಗ್ಗೆ ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಜಿಲ್ಲಾಡಳಿತ ಸೂಚಿಸಿದೆ. ಇದುವರೆಗೆ ಯಾವುದೇ ಪೋಷಕರಿಂದ ದೂರು ದಾಖಲಾಗಿಲ್ಲ ಎಂದು ಕೊಪ್ಪಳ ಪೊಲೀಸರು ತಿಳಿಸಿದ್ದಾರೆ.
“ನಾವು ಸಂತ್ರಸ್ತ ಮಕ್ಕಳೊಂದಿಗೆ ಮಾತನಾಡಿದ್ದೇವೆ. ರ್‍ಯಾಗಿಂಗ್ ಮಾಡಿದ್ದಾರೆಂದು ಆರೋಪ ಹೊತ್ತಿರುವ ವಿದ್ಯಾರ್ಥಿಗಳ ಬಗ್ಗೆಯೂ ವಿಚಾರಿಸಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಕೆಲವು ಪೋಷಕರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಬಯಸಿದ್ದರು. ಆದರೆ, ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಯ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ವರದಿ ಕೇಳಿದ್ದು, ಶೀಘ್ರದಲ್ಲೇ ಸಲ್ಲಿಸಲಾಗುವುದು” ಎಂದು ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತರ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ನಂತರ ಕೆಲವು ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ.
“ಸಂತ್ರಸ್ತರು ತಮ್ಮ ಮೇಲೆ ರ್‍ಯಾಗಿಂಗ್ ಮಾಡಿದ ಎಲ್ಲ ಎಂಟು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಹೆಸರಿಸಿದ್ದಾರೆ. ರ್‍ಯಾಗಿಂಗ್ ಮಾಡುವುದು ಅಪರಾಧವೆಂದು ಗೊತ್ತಿದ್ದರೂ ವಿದ್ಯಾರ್ಥಿಗಳು ಮಾಡಿದ್ದಾರೆ. ಯಾವುದೇ ದೂರು ದಾಖಲಿಸಬೇಡಿ ಎಂದು ಆರೋಪಿ ವಿದ್ಯಾರ್ಥಿಗಳ ಪೋಷಕರು ಮನವಿ ಮಾಡಿದ್ದಾರೆ. ಆದರೆ ನಮ್ಮ ಮಕ್ಕಳು ನರಳುತ್ತಿರುವುದನ್ನು ನೋಡಿ ನಾವು ಸುಮ್ಮನಿರುವುದು ಹೇಗೆ?” ಎಂದು ಪೋಷಕರು ಹೇಳಿದ್ದಾರೆ.
“ಲೋಪ ಎಸಗಿರುವ ಹಾಸ್ಟೆಲ್ ಆಡಳಿತದ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದೇವೆ. ಕಿರಿಯ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ಮುಂದೆ, ರ್‍ಯಾಗಿಂಗ್ ಮಾಡುವುದಿಲ್ಲವೆಂದು ಆರೋಪಿ ವಿದ್ಯಾರ್ಥಿಗಳು ಲಿಖಿತವಾಗಿ ಹೇಳಿಕೆ ನೀಡಬೇಕು” ಎಂದು ಪೋಷಕರು ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 246 ವಿದ್ಯಾರ್ಥಿಗಳು ಈ ವಸತಿ ಶಾಲೆಯಲ್ಲಿ ಓದುತ್ತಿದ್ದಾರೆ.