“ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಾತ್ರ. ನಮ್ಮ ತತ್ವ–ಸಿದ್ಧಾಂತವೇ ಬೇರೆ; ಬಿಜೆಪಿಯದ್ದೇ ಬೇರೆ. ಕೇಸರಿ ಶಾಲು ಹಾಕಿದಾಕ್ಷಣ ನಮ್ಮ ಸಿದ್ಧಾಂತ ಬದಲಾಗುವುದಿಲ್ಲ” ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, “ನಮ್ಮ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಈಚೆಗೆ ನಡೆದ ಪ್ರತಿಭಟನೆ ವೇಳೆ ಹಾಕಿದ್ದುದು ಬಿಜೆಪಿಯವರ ಕೇಸರಿ ಶಾಲಲ್ಲ. ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ಭಕ್ತನೊಬ್ಬ ಹಾಕಿದ ಶಾಲದು. ಇದನ್ನೇ ಕಾಂಗ್ರೆಸ್‌ನವರು ದೊಡ್ಡದು ಮಾಡಿದ್ದಾರೆ” ಎಂದರು.
“ರಾಜಕೀಯ ಪಕ್ಷಗಳ ನಾಯಕರು ವಿವಿಧ ಕಾರ್ಯಕ್ರಮಕ್ಕೆ ಹೋದಾಗ ಸಂಘಟಕರು ಅವರವರ ಶಾಲನ್ನು ಹಾಕುತ್ತಾರೆ. ಬಿಎಸ್‌ಪಿ ಕಾರ್ಯಕ್ರಮದಲ್ಲಿ ಅವರದ್ದೇ ಶಾಲು ನೀಡುತ್ತಾರೆ. ಹಾಗೆಂದ ಮಾತ್ರಕ್ಕೆ ಪಕ್ಷದ ಸಿದ್ಧಾಂತ ಬದಲಾಗುತ್ತಾ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ದಿಲ್ಲಿ ಚಲೋ ಮತ್ತು ಬಿಜೆಪಿಯ ಭಂಡತನ
“ಮೈತ್ರಿ ಮಾಡಿಕೊಂಡ ಮಾತ್ರಕ್ಕೆ ಬದಲಾಗದು. ಜನತಾ ಪಕ್ಷ ಕಟ್ಟಿದ ಜಯಪ್ರಕಾಶ್ ನಾರಾಯಣ್, ಪಕ್ಷ ಉಳಿಸಿ ಬೆಳೆಸಿದ ಎಚ್ ಡಿ ದೇವೇಗೌಡರ ಹಾದಿಯಲ್ಲಿ ನಾವು ಸಾಗುತ್ತೇವೆ” ಎಂದು ಹೇಳಿದರು.
“ಕರ್ನಾಟಕಕ್ಕೆ ಕೊಡಬೇಕಾದ ಎಲ್ಲವನ್ನೂ ಕೊಟ್ಟಿದ್ದೇವೆ ಎಂದು ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಹೇಳುತ್ತಾರೆ. ಆದರೆ, ರಾಜ್ಯ ಸರ್ಕಾರದವರು ಅನುದಾನ ಕೊಟ್ಟಿಲ್ಲ ಎನ್ನುತ್ತಾರೆ. ಏನೇ ಇದ್ದರೂ ಸಭೆ ನಡೆಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ದೆಹಲಿ ಪ್ರತಿಭಟನೆ ಸರಿಯಲ್ಲ” ಎಂದರು.