ಇವ ನಮ್ಮವ: ಶಮಾರ್ ಜೋಸೆಫ್- ಹರೀಶ್ ಗಂಗಾಧರ್ ಬರೆಹ

Date:

ಶಮಾರ್ ಜೋಸೆಫ್ ವೆಸ್ಟ್ ಇಂಡೀಸ್ ಕ್ರಿಕೆಟಿನ ದಿಕ್ಕನ್ನು ಬದಲಾಯಿಸುವನೇ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ  ಹೇಳುವುದು ಕಷ್ಟ. ಆದರೆ ಜೋಸೆಫ್ ವೆಸ್ಟ್ ಇಂಡೀಸ್ ಜನತೆಯನ್ನು ಒಗ್ಗೂಡಿಸಿದ್ದಂತೂ ನಿಜ. ‘ದೇಶಕ್ಕಾಗಿ ಟೆಸ್ಟ್ ಆಡುವುದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಅದುವೇ ನನ್ನ ಮೊದಲ ಆದ್ಯತೆ’ ಎಂದು ಹೇಳಿಕೆ ನೀಡಿದ್ದಾನೆ ಜೋಸೆಫ್. ಇತ್ತೀಚಿನ ಕ್ರಿಕೆಟ್ ಕ್ರೀಡೆಗಳ ಬೆಳವಣಿಗೆಯಲ್ಲಿ ಶಮಾರ್ ಜೋಸೆಫ್ ಯಶೋಗಾಥೆಗಿಂತ ರೋಚಕವಾದುದು ಮತ್ತೇನೂ ಇರಲಾರದು.

ಬರಕಾರ ಎಂಬುದೊಂದು ಅತಿ ಪುಟ್ಟ ಹಳ್ಳಿ. ಕನ್ಯೆ (Canje) ನದಿಯ ದಂಡೆಯ ಮೇಲಿದೆ. ಈ ಹಳ್ಳಿಯಲ್ಲಿ ಬೀದಿಗಳಿಲ್ಲ. ಇಲ್ಲಿ ಎಲ್ಲವು ಜಲಮಯ. ದೋಣಿ ಮತ್ತು ತೆಪ್ಪಗಳು ನಾಡಿಯಲ್ಲಿ ಹರಿಯುವ ನೆತ್ತರಿನಂತೆ ಈ ಹಳ್ಳಿಯಲ್ಲಿ ಹರಿದಾಡುತ್ತವೆ. ಅಲ್ಲಲ್ಲೇ ಇರುವ ನಡುಗಡ್ಡೆಗಳಲ್ಲಿ ಪುಟಾಣಿಗಳ ಆಟ. ಕೃಷಿ ಇಲ್ಲಿ ಲಾಭದ ಮಾರ್ಗವಲ್ಲ ಬದಲಾಗಿ ಅದು ಇಲ್ಲಿನ ಜನರ ಜೀವನಾಧಾರ. ಮನೆಗೆ ಬೇಕಾದಷ್ಟು ಗೆಡ್ಡೆ, ಗೆಣಸು, ಸೀಬೆ, ನಿಂಬೆ ಬೆಳೆದುಕೊಳ್ಳುವ ಇಲ್ಲಿನ ಜನರ ಮುಖ್ಯ ಆಹಾರ ಮೀನು. ಈ ಹಳ್ಳಿಗೆ ಹತ್ತಿರವಾದ ನಗರ ನ್ಯೂ ಆಮ್ಸಟರ್ಡ್ಯಾಮ್ ಎಂಬ ಗಯಾನ ದೇಶದ ಬಂದರು ಪಟ್ಟಣ ತಲುಪಲು ದೋಣಿಯಲ್ಲಿ 225 ಕಿಲೋ ಮೀಟರ್ ಸಾಗಬೇಕು. ಪರ್ಯಾಯ ಮಾರ್ಗಗಳಿಲ್ಲ.

ಆಗಾಗ ನದಿಯಲ್ಲಿ ದಂಡಿಯಿಂದ ದಂಡೆಗೆ ಜಂಡು ಸೊಂಪಾಗಿ ಬೆಳೆದು, ಪಾಚಿ ತುಂಬಿ ನೌಕಾಯಾನ ಕಠಿಣವಾಗುತ್ತದೆ. ನದಿಯ ದಂಡೆಯ ಜನರು ನದಿಯಲ್ಲಿ ದೋಣಿ ಸಾಗುವ ಪಥ ಸೃಷ್ಟಿಸಲು ತಿಂಗಳುಗಳೇ ಹಿಡಿದುಬಿಡುತ್ತವೆ. ಪಟ್ಟಣದ ಮಾರುಕಟ್ಟೆಗೆ ಹಣ್ಣು, ಹಂಪಲು, ಕಟ್ಟಿಗೆ, ಮರದ ದಿಮ್ಮಿ ಸಾಗಿಸುವ ಕೆಲಸ ಒಂದು ಸಾಹಸವೇ ಸರಿ.

ಬರಕಾರ ಹಳ್ಳಿಯಲ್ಲಿ ನೆಲೆಸಿರುವ ನಿವಾಸಿಗಳ ಮೂಲ ಆಫ್ರಿಕಾ! ಅವರನ್ನು ಮರೂನ್ ಎಂದು ಕರೆಯಲಾಗುತ್ತದೆ. ಮರೂನ್ ಎಂಬ ಪದ ಸ್ಪ್ಯಾನಿಷ್ ಭಾಷೆಯ ಚಿಮರಾನ್ ಪದದಿಂದ ಹುಟ್ಟು ಪಡೆದಿದೆ. ಚಿಮರಾನ್ ಎಂದರೆ ದಂಗೆ ಎದ್ದ ಗುಲಾಮ, ವ್ಯಾಘ್ರ, ಅಶಿಸ್ತಿನ ಆಳು ಎಂಬ ಅರ್ಥವಿದೆ! ಇಂದಿನ ಬರಕಾರ ಹಳ್ಳಿಯ ಸುಮಾರು 350 ನಿವಾಸಿಗಳ ಪೂರ್ವಜರು, ಬಿಳಿಯ ಜಮೀನ್ದಾರರ ವಿರುದ್ಧ ದಂಗೆಯೆದ್ದು ಸೆಣೆಸಿ ವಿಮುಕ್ತರಾದ ವೀರರು. ಮೂಲ ನಿವಾಸಿಗಳ ಕಣ್ತಪ್ಪಿಸಿ ಬಲು ದೂರ ಕನ್ಯೆ ನದಿಯಲ್ಲಿ ಸಾಗುತ್ತಾ ಬರಕಾರದಲ್ಲಿ ನೆಲೆಸಿದವರು!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

(ಬ್ರಿಟಿಷರು, ಡಚ್ಚರು ತಮ್ಮ ವಸಾಹತುಗಳ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಅಟ್ಲಾಂಟಿಕ್ ಸಾಗರದಾಚೆಗೆ ಈ ಕಪ್ಪು ವರ್ಣದವರನ್ನು ಹೊತ್ತು ತಂದರು. ಹದಿನೇಳನೇ ಶತಮಾನದಲ್ಲಿ ಟ್ರಾನ್ಸ್ ಅಟ್ಲಾಂಟಿಕ್ ಗುಲಾಮರ ವ್ಯಾಪಾರಕ್ಕಿಂತ ಲಾಭದಾಯಕವಾದ ವ್ಯಾಪಾರ ಬೇರೊಂದಿರಲಿಲ್ಲ. ಪಶುಗಳಂತೆ ಕಪ್ಪುವರ್ಣದವರನ್ನು ಅಮೇರಿಕಾ, ವೆಸ್ಟ್ ಇಂಡೀಸ್, ಗಯಾನಾ ಮುಂತಾದ ದೇಶಗಳಿಗೆ ಸಾಗಿಸಲಾಯಿತು. ತೆರದ ಮಾರುಕಟ್ಟೆಗಳಲ್ಲಿ ದನಗಳಂತೆ ಅವರನ್ನು ಮಾರಲಾಗುತ್ತಿತ್ತು. ಕೂಳು, ಕಾಸಿಲ್ಲದೆ ಜೀತದಾಳಾಗಿ ಜೀವ ತೇಯುವ ಯಾತನಾಮಯ ಬದುಕು ಅವರದು. ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಿ ಬದುಕುಳಿದ ಜೀತದಾಳುಗಳು ಹತ್ತಿ ಹೆಕ್ಕುತ್ತಾ ಕ್ಷಯ ರೋಗಕ್ಕೆ ಬಲಿಯಾಗುತ್ತಿದ್ದರು. ಇಂತಹ ನರಕದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆಳುಗಳನ್ನು ಕೇಳರಿಯದ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು. ಹಾಗೂ ಬುದ್ಧಿ ಕಲಿಯದೇ ಕೆರಳುತ್ತಿದ್ದ ಆಳುಗಳನ್ನು ಜೀವಂತ ಸುಡಲಾಗುತ್ತಿತ್ತು, ಚರ್ಮ ಸುಲಿಯಲಾಗುತ್ತಿತ್ತು, ಇರಿದು ಕೊಲ್ಲಲಾಗುತ್ತಿತ್ತು.)

ಶಮಾರ್ ಜೋಸೆಫ್
ಶಮಾರ್ ಜೋಸೆಫ್

ಅಂದಿನಿಂದ ಇಂದಿನವರೆಗೆ ಬರಕಾರ ಆಧುನಿಕತೆಯ ಸೋಂಕು ಹತ್ತಿಸಿಕೊಳ್ಳದೆ ಹಾಗೆ ಉಳಿದುಬಿಟ್ಟಿದೆ. ಬೀದಿಗಳಿಲ್ಲ, ನಗರ ಸಂಪರ್ಕವಿಲ್ಲ, ಪ್ರೌಢಶಾಲೆಯಿಲ್ಲ, 2018ರ ವರೆಗೆ ಟೆಲಿಫೋನ್ ಹಾಗೂ ಅಂತರ್ಜಾಲದ ಘಮಲು ಇರಲೇ ಇಲ್ಲ! ಹೀಗೆ ದಟ್ಟಡವಿಯಲ್ಲಿ ಅವಿತಿರುವ, ಸುರಳಿ ಸುತ್ತುವ ನದಿಯಲ್ಲಿ ಆವೃತ್ತವಾಗಿ ಇಪ್ಪತ್ತೊಂದನೇ ಶತಮಾನದಲ್ಲೂ ಆಧುನಿಕತೆಯಿಂದ ಕಡಿದು ಹೋಗಿರುವ ಬರಕಾರ ಹಳ್ಳಿ ಕಳೆದವಾರ ಇಡಿಯ ಜಗತ್ತಿನ ಗಮನ ಸೆಳೆಯಿತು. ಶಮಾರ್ ಜೋಸೆಫ್ ಎಂಬ ಕ್ರಿಕೆಟಿಗ ಎರಡೇ ಪಂದ್ಯಗಳಲ್ಲಿ ಎಲ್ಲರ ಗಮನ ಸೆಳೆದು ತಾರೆಯಾದ.

ಬರಕಾರದ ಈ ಹಳ್ಳಿ ಹೈದ ಆಶ್ಚರ್ಯಕರ ರೀತಿಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ತನ್ನ ಮಾರಕ ಬೌಲಿಂಗ್‌ನಿಂದ ಆಸ್ಸಿಗಳಲ್ಲಿ ನಡುಕ ಹುಟ್ಟಿಸಿದ. ಇಪ್ಪತೇಳು ವರುಷಗಳ ಬಳಿಕ ವೆಸ್ಟ್ ಇಂಡೀಸ್, ವಿಶ್ವ ಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಅದರ ಮಣ್ಣಲ್ಲೇ ಮಣಿಸಿ ಸರಣಿಯ ಗೌರವವನ್ನು ಹಂಚಿಕೊಂಡಿದ್ದರ ಪರಿ ಹಾಗು ಶಮಾರ್ ಜೋಸೆಫ್ ಸಾಧನೆಯ ಮಹತ್ವ ಅರ್ಥಮಾಡಿಕೊಳ್ಳಬೇಕಾದರೆ ವೆಸ್ಟ್ ಇಂಡೀಸ್ ಕ್ರಿಕೆಟಿನ ಪತನದ ಹಾದಿಯನ್ನೊಮ್ಮೆ ಹಿಂತಿರುಗಿ ನೋಡುವುದು ಒಳಿತು.

ಇದನ್ನು ಓದಿದ್ದೀರಾ:? ಭಾರತಕ್ಕೆ ಇಪ್ಪತ್ತೊಂದನೆಯ ಶತಮಾನದ ಒಪ್ಪುಕೂಟ ವ್ಯವಸ್ಥೆ

ವೆಸ್ಟ್ ಇಂಡೀಸ್ ಕ್ರಿಕೆಟಿನ ಸುವರ್ಣ ಯುಗ ಅಂತ್ಯಗೊಂಡು ದಶಕಗಳೇ ಉರುಳಿವೆ. ದಿಗ್ಗಜರಾದ ಕಾಳೀಚರಣ್, ಕ್ಲೈವ್ ಲಾಯ್ಡ್, ಸರ್ ಗಾರ್ ಫೀಲ್ಡ್ ಸೋಬರ್ಸ್ ನಿವೃತ್ತಿ ಘೋಷಿಸಿ; ಮೈಕೆಲ್ ಹೋಲ್ಡಿಂಗ್, ಮಾಲ್ಕಮ್ ಮಾರ್ಷಲ್, ವೀವ್ ರಿಚರ್ಡ್ಸ್ ಬೇರೆಲ್ಲಾ ತಂಡಗಳಿಗೆ ಸಿಂಹ ಸ್ವಪ್ನವಾಗಿದ್ದ ದಿನಗಳು ಕೂಡ ಅಂತ್ಯಗೊಂಡಿದೆ. ಆದರೂ ವೆಸ್ಟ್ ಇಂಡೀಸ್ ತಂಡವೆಂದರೆ ವಿಶೇಷವಾದ ಸೆಳೆತ. ಅವರ ಆಟದ ಖದರ್, ಯಾರನ್ನು ಲೆಕ್ಕಿಸದೆ ಮೈದಾನದಲ್ಲಿ ಆಡುತ್ತಿದ್ದ ರೀತಿ, ಕ್ರಿಕೆಟ್ ಕ್ರೀಡೆಯ ತಾಂತ್ರಿಕತೆ, ಪಠ್ಯಗಳು ಪುಸ್ತಕದಲ್ಲೇ ಇರಲಿ ನಾವು ನಮ್ಮಿಷ್ಟದಂತೆ ಆಡುತ್ತೇವೆ ಎಂಬ ಭಂಡ ಧೈರ್ಯದ, ಆಕ್ರಮಣಕಾರಿ ಆಟವನ್ನು ಕ್ರಿಕೆಟ್ ಪ್ರೇಮಿಗಳು ಇಂದಿಗೂ ಮೆಲಕು ಹಾಕುತ್ತಲೇ ಇರುತ್ತಾರೆ.

ರಿಚೀ ರಿಚರ್ಡಸನ್, ವಾಲ್ಶ್, ಆಂಬ್ರೋಸ್, ಹೂಪರ್, ಬ್ರಿಯಾನ್ ಲಾರಾ, ಶಿವನಾರಾಯಣ್ ಚಂದ್ರಪಾಲ್, ರಾಮ್ ನರೇಶ್ ಶರ್ವಾನ್, ಜಿಮ್ಮಿ ಆಡಮ್ಸ್, ಇತ್ತೀಚಿನ ದಿನಗಳಲ್ಲಿ ಕ್ರಿಸ್ ಗೈಲ್ ಪ್ರದರ್ಶಿಸಿದ ಆಟವನ್ನು ಬೇರಾರು ಪ್ರದರ್ಶಿಸಲಾರರು ಅವರ ಶೈಲಿ, ಗೆಲುವನ್ನು ಆಚರಿಸುತ್ತಿದ್ದ ರೀತಿ, ಕ್ಷಿಪಣಿಗಳಂತೆ ಮುನ್ನುಗ್ಗಿ ಬರುತ್ತಿದ್ದ ಬೌನ್ಸರ್ ಎಲ್ಲವೂ ಮತ್ತೆಂದು ಮರುಕಳಿಸಲಾರವು ಎನ್ನುವಂತಹ ಕರಾಳ ದಿನಗಳು ವೆಸ್ಟ್ ಇಂಡೀಸ್ ತಂಡಕ್ಕೆ ಬಂದೆರಗಿದೆ.

ಕಳೆದ ವರುಷ ಭಾರತದಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ಪಿನಲ್ಲಿ ಆಡುವ ಅರ್ಹತೆ ಕೂಡ ಪಡೆಯದಷ್ಟು ಶೋಚನೀಯ ಸ್ಥಿತಿಗೆ ವೆಸ್ಟ್ ಇಂಡೀಸ್ ತಂಡದ ತಲುಪಿದಕ್ಕೆ ಅಲ್ಲಿನ ಕ್ರಿಕೆಟ್ ಮಂಡಳಿಯ ಬೇಜವಾಬ್ದಾರಿ ಮತ್ತು ಆಜಾನುಬಾಹು, ಪ್ರತಿಭಾನ್ವಿತ ವೆಸ್ಟ್ ಇಂಡೀಸ್ ಆಟಗಾರರಿಗೆ ಭಾರತ ಕ್ರಿಕೆಟ್ ಮಂಡಳಿ ಐಪಿಎಲ್ ವೊಡ್ಡಿದ ಆಮಿಷ ಕಾರಣವೆಂದು ಹಲವು ಕ್ರಿಕೆಟ್ ತಜ್ಞರು ದೂರುತ್ತಾರೆ. ಅಲ್ಲಿನ ಆಟಗಾರರು ದೇಶಕ್ಕಾಗಿ ಆಡುವ ಬದಲಾಗಿ ಐಪಿಎಲ್ ನಲ್ಲಿ ಆಡಲು ನಿರ್ಧರಿಸಿದರು ಎಂಬ ಆರೋಪವಿದ್ದರೂ ಕೆಟ್ಟ ನಿರ್ವಹಣೆಯಿಂದ ದಿವಾಳಿಯಾದ, ಸ್ವಜನಪಕ್ಷಪಾತ, ತರ್ಕರಹಿತ ಆಯ್ಕೆ ನೀತಿಗಳಿಗೆ ಹೆಸರಾಗಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯನ್ನು ನಂಬಿ ಕೂರಲು ಆಟಗಾರರು ಸಿದ್ದರಿರಲಿಲ್ಲ ಎಂಬುದು ಕಹಿಸತ್ಯ.

ತೀವ್ರ ನಿಗಾ ಘಟಕದಲ್ಲಿ ಉಸಿರೆಳೆಯುತ್ತಾ ಸಾವಿನ ಮಂಚದ ಮೇಲೆ ಮಲಗಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಚೇತೋಹಾರಿ ಲಸಿಕೆ ನೀಡಿದ್ದು ಶಮಾರ್ ಜೋಸೆಫ್. ಇಪ್ಪತೇಳು ವರುಷಗಳ ಸುದೀರ್ಘ ಬರದ ನಂತರ ವೆಸ್ಟ್ ಇಂಡೀಸ್ ತಂಡವನ್ನು ಪ್ರಬಲ ಆಸ್ಟ್ರೇಲಿಯಾ ನೆಲದಲ್ಲಿ ಗೆಲ್ಲಿಸಿದ ಶ್ರೇಯಸ್ಸು ಬರಕಾರ ಹಳ್ಳಿಯ ಶಮಾರ್ ಜೋಸೆಫ್ ನಿಗೆ ಸಲ್ಲಬೇಕು.

ವಾಲ್ಶ್ ಮತ್ತು ಆಂಬ್ರೋಸ್ ಅವರ ಆಟದ ವೈಖರಿಯನ್ನು ಜೋಸೆಫ್ ಮನೆಯಲ್ಲಿರುವ ಕಪ್ಪು ಬಿಳುಪಿನ ಟಿವಿಯಲ್ಲಿ ನೋಡುತ್ತಿದ್ದನಂತೆ. ನೀರಿನಿಂದ ಆವೃತ್ತವಾದ ಹಳ್ಳಿಯಲ್ಲಿ ಬೆಳೆಯುತ್ತಿದ್ದ ಸೀಬೆ, ನಿಂಬೆ ಹಣ್ಣುಗಳನ್ನು ಚೆಂಡಿನಂತೆ ಬಳಸಿಕೊಳ್ಳುತ್ತಿದ್ದನಂತೆ. ಮರದ ಕೊಂಬೆಯಿಂದ ಬ್ಯಾಟ್ ಮಾಡಿ ಎಲ್ಲೆಡೆ ಬ್ಯಾಟ್ ಬೀಸುತ್ತಿದ್ದನಂತೆ. ಹಲವು ದಿನಗಳು ನಗರದ ಗಗನಚುಂಬಿ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದ್ದ ಜೋಸೆಫನಿಗೆ ಎತ್ತರದ ಕಟ್ಟಡಗಳಲ್ಲಿ ಕೆಲಸ ಮಾಡುವಾಗ ತಲೆ ತಿರುಗುತ್ತಿತ್ತಂತೆ. ಕಟ್ಟಡ ನಿರ್ಮಾಣದ ಕೂಲಿ ಕೆಲಸ ಬಿಟ್ಟು ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿ ದಿನಕ್ಕೆ ಹನ್ನೆರಡು ಗಂಟೆ ದುಡಿಯುತ್ತಿದ್ದ ಜೀವನ ಹೊಸ ತಿರುವು ಪಡೆಯುವುದರಲ್ಲಿತ್ತು.

ಶಮಾರ್ ಜೋಸೆಫನಿಗೆ ವಂಟುಲ್ ಎಂಬ ಮಾಜಿ ಕ್ಲಬ್ ಆಟಗಾರ ಮತ್ತು ವ್ಯಾಪಾರಿಯ ಪರಿಚಯವಾಯ್ತು. ”ಜಾರ್ಜ್ ಟೌನ್ ನಗರಕ್ಕೆ ಕರೆದುಕೊಂಡು ಹೋಗು, ನಾನು ಕ್ರಿಕೆಟ್ ಕ್ಲಬ್ಬಿಗೆ ಸೇರಬೇಕು” ಎಂದು ದಂಬಾಲು ಬಿದ್ದ ಜೋಸೆಫ್. ಅದಾದ ಆರೇಳು ವರುಷಗಳ ನಂತರ ಜೋಸೆಫನಿಗೆ ನಗರಕ್ಕೆ ಬಂದು ಕ್ರಿಕೆಟ್ ಆಡುವ ಅವಕಾಶ ಸಿಕ್ಕಿತು. ಮೊದಲ ಕ್ರಿಕೆಟ್ ಕಿಟ್ ಅವನ ಕೈ ಸೇರಿದಾಗ ಆತನಿಗೆ 21 ವರ್ಷವಾಗಿತ್ತು.

ಶಮಾರ್ ಜೋಸೆಫ್ ಮೊಬೈಲ್ ಫೋನ್ ನೋಡಿದ್ದು 2018ರಲ್ಲಿ. ಜನ ಹೇಗೆ ಅದರಲ್ಲಿ ಮುಳುಗಿ ಹೋಗಿದ್ದಾರೆ, ಪದೇ ಪದೇ ಅದನ್ನೇಕೆ ನೋಡುತ್ತಾರೆ, ಮುಟ್ಟುತ್ತಾರೆ ಎಂಬ ಅಚ್ಚರಿ ಅವನಿಗೆ. ಮೊಬೈಲ್ ಫೋನಿನ ಸಹಾಯದಿಂದ ಅವನಿದ್ದ ಬೀದಿಯಲ್ಲಿಯೇ ಗುಯಾನಾದ ಆಟಗಾರ ರೋಮರಿಯೋ ಶೆಫರ್ಡ್ ಇರುವುದು ತಿಳಿಯಿತು. ಕಠಿಣ ತರಬೇತಿ, ಬದ್ಧತೆಯಿಂದ ಎಲ್ಲರನ್ನು ದಂಗುಬಡಿಸಿದ. ಆತನ ವೇಗ ಎಲ್ಲರನ್ನು ಚಕಿತಗೊಳಿಸಿತು. ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಎಷ್ಟು ದಿವಾಳಿಯಾಗಿದೆ ಎಂದರೆ ಬಹಳಷ್ಟು ಪ್ರತಿಭಾನ್ವಿತ ಆಟಗಾರರು ಪರದೇಶದಲ್ಲಿ ಟಿ-20 ಕ್ರಿಕೆಟ್ ಲೀಗ್ ಆಡಿಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ. ಜೋಸೆಫ್ ಕೂಡ ಹಾಗೆ ಮಾಡತೊಡಗಿದ. ರಾಷ್ಟ್ರ ತಂಡಕ್ಕೆ ಬುಲಾವ್ ಬರುವ ಹೊತ್ತಿಗೆ ಆತನಿಗೆ 24 ವರುಷವಾಗಿತ್ತು.

ಇದನ್ನು ಓದಿದ್ದೀರಾ:? ʼಗೋದಿ ಮೀಡಿಯಾʼ ಅಂದ್ರೇನು? ಇಲ್ಲಿದೆ ನೋಡಿ

ಕಳೆದ ತಿಂಗಳು ಆತುರಾತುರವಾಗಿ ಆಯೋಜಿತವಾದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋಲನುಭವಿಸಿತು. ಶಮಾರ್ ಐದು ವಿಕೆಟ್ ಕಬಳಿಸಿ ಎಲ್ಲರ ಗಮನ ಸೆಳೆದ. ಎರಡನೇ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ಆಸ್ಟ್ರೇಲಿಯಾಕ್ಕೆ ಸುಲಭ ತುತ್ತಾಗುತ್ತದೆ ಎಂಬುದು ಕ್ರಿಕೆಟ್ ಪಂಡಿತರ ಅನಿಸಿಕೆಯಾಗಿತ್ತು. ಕೊನೆಯ ಇನ್ನಿಂಗ್ಸ್ ನಲ್ಲಿ ಗೆಲ್ಲಲು ಕೇವಲ 216 ರನ್ನುಗಳ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಕಾದಿತ್ತು. ಎರಡನೇ ಇನ್ನಿಂಗ್ಸಿನಲ್ಲಿ ಸ್ಟ್ರಾಕ್ ವೇಗದ ಎಸೆತವೊಂದು ಶಮಾರ್ ಹೆಬ್ಬೆರಳನ್ನು ಜಜ್ಜಿತ್ತು. ಅತಿಯಾದ ನೋವಿನ ನಡುವೆಯೂ ಶಮಾರ್ ಬೌಲಿಂಗ್ ಮಾಡಿ ಏಳು ವಿಕೆಟ್ ಕಬಳಿಸಿ ಇಪ್ಪತೇಳು ವರುಷಗಳ ಬಳಿಕ ಜಯ ತಂದುಕೊಟ್ಟಿದ್ದ. ಎಡಗೈ ಮುರಿದಿದ್ದರೂ ಕೇವಲ ಬಲಗೈಯಲ್ಲಿ ಬ್ಯಾಟ್ ಮಾಡಿದ ಮಾಲ್ಕಮ್ ಮಾರ್ಷಲ್, ದವಡೆ ಬಿರುಕುಬಿಟ್ಟರು ಬೌಲ್ ಮಾಡಿದ ಅನಿಲ್ ಕುಂಬ್ಳೆ ಅಂದು ಕ್ರಿಕೆಟ್ ಪ್ರೇಮಿಗಳಿಗೆ ನೆನಪಾಗಿರಬೇಕು.

ಆ ಕ್ಷಣ ವೀಕ್ಷಕ ವಿವರಣೆ ನೀಡುತ್ತಿದ್ದ ಬ್ರಿಯಾನ್ ಲಾರಾ ಅಳತೊಡಗಿದ್ದ. ಪಕ್ಕದಲ್ಲಿದ್ದ ಆಸ್ಟ್ರೇಲಿಯಾದ ಗಿಲ್ ಕ್ರಿಸ್ಟ್ ಕೂಡ ಲಾರಾನನ್ನು ತಬ್ಬಿದ ಸಂತೋಷದಲ್ಲಿ. ಗಡಿ, ವರ್ಣ, ಧರ್ಮ, ದೇಶವನ್ನು ಮೀರಿ ಕ್ರೀಡೆ ಎಲ್ಲರನ್ನು ಒಂದಾಗಿಸುವ ಪರಿಯಿದು. ಗಿಲ್ ಕ್ರಿಸ್ಟ್ ನನ್ನು ಆಸ್ಟ್ರೇಲಿಯಾದ ಜನರು ದೇಶದ್ರೋಹಿಯೆಂದು ಟ್ರೋಲ್ ಮಾಡಲಿಲ್ಲ. ಆತನ ಕ್ರೀಡಾ ಪ್ರೇಮವನ್ನು ಆಸ್ಟ್ರೇಲಿಯಾ ಪ್ರಶಂಸಿಸಿತು.

ಶಮಾರ್ ಜೋಸೆಫ್
ಶಮಾರ್ ಜೋಸೆಫ್

ಶಮಾರ್ ಜೋಸೆಫ್ ವೆಸ್ಟ್ ಇಂಡೀಸ್ ಕ್ರಿಕೆಟಿನ ದಿಕ್ಕನ್ನು ಬದಲಾಯಿಸುವನೇ? ಮರಣದ ಮಂಚದಲ್ಲಿರುವ ಕ್ರಿಕೆಟಿಗೆ ಮರುಹುಟ್ಟು ನೀಡುವನೇ? ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡಿನ ಅಧಿಪತ್ಯದಿಂದ ನೈಪಥ್ಯಕ್ಕೆ ಸರಿದಿರುವ ಬೇರೆಲ್ಲಾ ಕ್ರಿಕೆಟ್ ದೇಶಗಳಿಗೆ ಜೋಸೆಫ್ ಆಶಾಕಿರಣವೇ? ನಿಖರವಾಗಿ ಹೇಳುವುದು ಕಷ್ಟ. ಆದರೆ ಜೋಸೆಫ್ ವೆಸ್ಟ್ ಇಂಡೀಸ್ ಜನತೆಯನ್ನು ಒಗ್ಗೂಡಿಸಿದ್ದಂತೂ ನಿಜ. “ದೇಶಕ್ಕಾಗಿ ಟೆಸ್ಟ್ ಆಡುವುದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಅದುವೇ ನನ್ನ ಮೊದಲ ಆದ್ಯತೆ” ಎಂದು ಹೇಳಿಕೆ ನೀಡಿದ್ದಾನೆ ಜೋಸೆಫ್. ಎಲ್ಲಾ ದೇಶಗಳ ಕ್ರಿಕೆಟ್ ಲೀಗ್ ಫ್ರಾಂಚೈಸೀಗಳು ಜೋಸೆಫನನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತೀಚಿನ ಕ್ರಿಕೆಟ್ ಕ್ರೀಡೆಗಳ ಬೆಳವಣಿಗೆಯಲ್ಲಿ ಶಮಾರ್ ಜೋಸೆಫ್ ಯಶೋಗಾಥೆಗಿಂತ ರೋಚಕವಾದುದು ಮತ್ತೇನೂ ಇರಲಾರದು.

ನನಗಂತೂ ಗಡಿ, ಧರ್ಮ, ವರ್ಣ, ರಾಷ್ಟ್ರೀಯತೆಗಳನ್ನೂ ಮೀರಿ ಒಮ್ಮೆ ಕಣ್ಣಾಡಿಸಿದಾಗ, ತುಳಿತಕ್ಕೆ ಒಳಪಟ್ಟವರ, ಸಮಾಜದ ಅಂಚಿಗೆ ದೂಡಲ್ಪಟ್ಟವರ ಕತೆಗಳಲ್ಲಿ ಸ್ಪೂರ್ತಿ, ನನ್ನ ಅನುಭವವು ಇಂತಹದ್ದೇ ಎನ್ನುವಂತಹ ಸಾಮ್ಯತೆ ಮತ್ತು ಇವ ನಮ್ಮವ ಎನ್ನುವ ಆಪ್ತತೆ ಮೂಡುತ್ತದೆ.

‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣದ ಬಿಆರ್​ಎಸ್ ಪಕ್ಷದ ಶಾಸಕಿ ಲಾಸ್ಯ ನಂದಿತಾ ಕಾರು ಅಪಘಾತ; ದಾರುಣ ಸಾವು

ತೆಲಂಗಾಣದ ಬಿಆರ್​ಎಸ್ (ಭಾರತ್ ರಾಷ್ಟ್ರ ಸಮಿತಿ)​ ಪಕ್ಷದ ಶಾಸಕಿ ಲಾಸ್ಯ ನಂದಿತಾ...

ರೈತ ಹೋರಾಟ | ರೈತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ ಮಾಡಿದ ಹರಿಯಾಣ ಪೊಲೀಸರು

ಎಂಎಸ್‌ಪಿ, ರೈತರ ಸಾಲ ಮನ್ನಾಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಹರಿಯಾಣ...

ಮೂರ್ನಾಲ್ಕು ದಿನಗಳಲ್ಲಿ ಕೇಜ್ರಿವಾಲ್ ಬಂಧನ ಸಾಧ್ಯತೆ: ದೆಹಲಿ ಸಚಿವೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ...

ಬಿಜೆಪಿಗೆ ದೇಣಿಗೆ: ಐಟಿ, ಇಡಿ ಮುಂತಾದ ಸಂಸ್ಥೆಗಳ ದಾಳಿಗೆ ತುತ್ತಾದ 30 ಸಂಸ್ಥೆಗಳ ಪಟ್ಟಿ ಇಲ್ಲಿದೆ

ಮಾಧ್ಯಮ ಸಂಸ್ಥೆಗಳಾದ ದಿ ನ್ಯೂಸ್ ಮಿನಿಟ್ ಹಾಗೂ ನ್ಯೂಸ್‌ ಲಾಂಡ್ರಿ ಬಿಜೆಪಿಗೆ...