ಜಮೀನಿನಲ್ಲಿ ಬಾಳೆಗೊನೆ ತರಲು ಹೋಗಿದ್ದ ಯುವಕನ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಜೀಗೇರಿ ಗ್ರಾಮದಲ್ಲಿ ನಡೆದಿದೆ.
ಜೀಗೇರಿ ಗ್ರಾಮದ ಉದಯಕುಮಾರ್ ಶರಣಪ್ಪ ನಿಡಶೇಸಿ (18) ಚಿರತೆ ದಾಳಿಯಿಂದ ಗಾಯಗೊಂಡ ಯುವಕ. ಉದಯಕುಮಾರ್ ಜಮೀನಿನಲ್ಲಿ ಬಾಳೆಗೊನೆ ಕತ್ತರಿಸುವ ವೇಳೆ ಚಿರತೆ ಯುವಕನ ಮೇಲೆ ಒಮ್ಮೆಲೆ ದಾಳಿ ಮಾಡಿದೆ. ದಾಳಿಯಲ್ಲಿ ಯುವಕನ ಎದೆಗೆ ಬಾಯಿ ಹಾಕಿ, ಮೈ ಹಾಗೂ ಬೆನ್ನಿನ ಮೇಲೆ ಚಿರತೆ ಉಗುರಿನಿಂದ ಗಾಯಗಳಾಗಿವೆ.
ಚಿರತೆಯ ದಾಳಿಯಿಂದ ಅಕ್ಕಪಕ್ಕದಲ್ಲಿದ್ದ ಕಾರ್ಮಿಕರು ಕೂಗಾಡಿ ಕಲ್ಲು ಎಸೆದಿದ್ದಾರೆ. ಇದರಿಂದ ಚಿರತೆ ಭೀತಿಯಿಂದ ಓಡಿಹೋಗಿದೆ. ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಯುವಕನನ್ನು ಗಜೇಂದ್ರಗಡ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಸಾಸಿವಹಳ್ಳಿ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದ್ದಾರೆ.
ಇನ್ನು ಈ ಪ್ರದೇಶದ ಸುತ್ತಮುತ್ತ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮನೆಮಾಡಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಈಗಾಗಲೇ ದೂರು ನೀಡಿದ್ದು, ಅರಣ್ಯ ಇಲಾಖೆ ಇನ್ನೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.