ಬೇಸಿಗೆ ಕಾಲ ಇನ್ನೂ ಆರಂಭವಾಗಿಲ್ಲ. ಆದರೂ, ಈಗಾಗಲೇ ಬೇಸಿಗೆಯ ರೀತಿಯಲ್ಲಿ ಬಿಸಿಲು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ತಾಪಮಾನ 2 ಡಿಗ್ರಿಗಳಷ್ಟು (33.3°) ಹೆಚ್ಚಾಗಿದೆ. ಉತ್ತರ ಒಳಭಾಗ ಮತ್ತು ಕರಾವಳಿ ಕರ್ನಾಟಕದಲ್ಲಿ ಹವಾಮಾನ ಒಂದೇ ರೀತಿಯಿದೆ. ಈ ಭಾಗಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 2° ಹೆಚ್ಚಾಗಿದೆ ಎಂದು ವರದಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳುವಂತೆ, ‘ಎಲ್ ನಿನೋ’ ಪರಿಣಾಮದಿಂದಾಗಿ ತಾಪಮಾನ ಹೆಚ್ಚಾಗಿದೆ. ಆಗಸ್ಟ್ ವೇಳೆಗೆ ಎಲ್ ನಿನೋ ತಟಸ್ಥವಾಗುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಆರ್ದ್ರ ವಾತಾವರಣವಿದೆ. ನಗರದಲ್ಲಿ ಗರಿಷ್ಠ ತಾಪಮಾನ 33.1° ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 18.1° ಸೆಲ್ಸಿಯಸ್ ಇದೆ. ಇದು, ಈ ಸಮಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 30.9° ಸೆಲ್ಸಿಯಸ್ ಮತ್ತು ಕನಿಷ್ಠ 17.6° ಸೆಲ್ಸಿಯಸ್ ಆಗಿರಬೇಕಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 33.1° (ಗರಿಷ್ಠ) ಮತ್ತು 15.9° (ಕನಿಷ್ಠ) ಸೆಲ್ಸಿಯಸ್ ಮತ್ತು ಹಳೆಯ ವಿಮಾನ ನಿಲ್ದಾಣದಲ್ಲಿ 32.9° (ಗರಿಷ್ಠ) ಮತ್ತು 15° (ಕನಿಷ್ಠ) ಸೆಲ್ಸಿಯಸ್ ದಾಖಲಾಗಿದೆ ಎಂದು ಇಲಾಖೆ ಹೇಳಿದೆ.
”ದಕ್ಷಿಣ ಒಳನಾಡು ಭಾಗಗಳ ಕೆಲವು ಪ್ರದೇಶಗಳು, ಕರಾವಳಿ ಕರ್ನಾಟಕದ ಉಡುಪಿ, ಕಾರವಾರ ಹಾಗೂ ಉತ್ತರ ಒಳನಾಡಿನ ಕಲಬುರಗಿ, ರಾಯಚೂರು, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಗರಿಷ್ಠ ತಾಪಮಾನ ಕನಿಷ್ಠ 2° ಸೆಲ್ಸಿಯಸ್ ಹೆಚ್ಚಾಗಿದೆ” ಎಂದು ಇಲಾಖೆ ತಿಳಿಸಿದೆ.
ಗಮನಾರ್ಹ ವಿಚಾರವೆಂದರೆ, ಮಾರ್ಚ್ 1ಅನ್ನು ಅಧಿಕೃತವಾಗಿ ಬೇಸಿಗೆಯ ಆರಂಭವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಫೆಬ್ರವರಿ ಮೂರನೇ ವಾರದ ನಂತರ ಬೇಸಿಗೆಯ ಪರಿಸ್ಥಿತಿ ಕಂಡುಬರುತ್ತದೆ. ಆದರೆ, ಈ ವರ್ಷ ಈಗಾಗಲೇ ಬೇಸಿಗೆಯ ಅನುಭವವಾಗುತ್ತಿದೆ. ಇದಕ್ಕೆ ಎಲ್ ನೀನೋ ಕಾರಣವೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.