ಅಪ್ರಾಪ್ತ ವಯಸ್ಸಿನ ಹುಡುಗನಿಗೆ ಸ್ಕೂಟರ್ ಚಾಲನೆ ಮಾಡಲು ಕೊಟ್ಟ ಆತನ ತಾಯಿಗೆ ಶಿವಮೊಗ್ಗದ 3ನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ ₹30 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅಪ್ರಾಪ್ತ ವಯಸ್ಸಿನ ಹುಡುಗನ ಬಳಿ ಚಾಲನಾ ಪರವಾನಗಿ (ಲೈಸೆನ್ಸ್) ಇಲ್ಲದಿದ್ದರೂ, ಮಗನಿಗೆ ಆತನ ತಾಯಿ ಚಾಲನೆ ಮಾಡಲು ಸ್ಕೂಟರ್ ಕೊಟ್ಟಿದ್ದರು.
ಶಿವಮೊಗ್ಗದ ಎಸ್ ಪಿಎಂ ರಸ್ತೆಯ ಕೋಟೆ ಆಂಜನೇಯನ ದೇವಾಲಯದ ಬಳಿ ಪೂರ್ವ ಸಂಚಾರ ಠಾಣೆಯ ಪಿಎಸ್ಐ ನವೀನ್ ಕುಮಾರ್ ಮಠಪತಿ ಅವರು ಜನವರಿ 30ರಂದು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಬಾಲಕನೊಬ್ಬ ವಾಹನ ಚಲಾಯಿಸುತ್ತಿದ್ದುದನ್ನು ಕಂಡ ಅವರು ತಡೆದು ತಪಾಸಣೆ ಮಾಡಿದ್ದಾರೆ.
ತಪಾಸಣೆ ವೇಳೆ ಬಾಲಕನ ಬಳಿ ವಾಹನ ಚಾಲನಾ ಪರವಾನಿಗೆ ಇಲ್ಲದಿರುವುದು ತಿಳಿದುಬಂದಿದೆ. ಬಳಿಕ ಆತ 17 ವರ್ಷದ ಬಾಲಕ ಎಂದು ಗೊತ್ತಾಗಿದೆ. ಬಾಲಕ ಹಾಗೂ ಆತನ ತಾಯಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆಸ್ತಿ ವಿಚಾರಕ್ಕೆ ಜೋಡಿ ಕೊಲೆ : ಆರೋಪಿ ವಶಕ್ಕೆ
ವಾಹನದ ಮಾಲೀಕರಾದ ಬಾಲಕನ ತಾಯಿಯ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಲಾಗಿತ್ತು.
ಸಂಚಾರ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದರು. ಆರೋಪ ಪಟ್ಟಿ ಪರಿಶೀಲಿಸಿದ ನ್ಯಾಯಾಧೀಶರು ಬಾಲಕನ ತಾಯಿಗೆ ₹30 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.