ರಾಜಧಾನಿ ಬೆಂಗಳೂರು ಸೇರಿದಂತೆ ಇದೀಗ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾಗಿದೆ. ಫೆಬ್ರುವರಿಯಲ್ಲಿ ಮುಂದುವರೆಯಬೇಕಾದ ಚಳಿ ಮಾಯವಾಗಿದೆ. ಏಪ್ರಿಲ್‌ನಲ್ಲಿ ಅನುಭವವಾಗಬೇಕಿದ್ದ ಬಿಸಿಲಿನ ಬೇಗೆ ಫೆಬ್ರುವರಿಯಲ್ಲಿಯೇ ಅನುಭವವಾಗುತ್ತಿದೆ.
ಈ ವರ್ಷ ಸಾಮಾನ್ಯಕ್ಕಿಂತಲೂ ಹೆಚ್ಚಾಗಿ ತಾಪಮಾನ ಇರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಈ ವರ್ಷ ವಾಡಿಕೆಯಂತೆ ಮಳೆಯಾಗಿಲ್ಲ. ಎಲ್ಲೆಡೆ, ಬರಗಾಲದ ಛಾಯೆ ಮೂಡಿದೆ. ಜಲಾಶಯಗಳು ಭರ್ತಿಯಾಗಿಲ್ಲ. ಕೆರೆ ಕಟ್ಟೆಗಳು ಈಗಾಗಲೇ ಖಾಲಿಯಾಗಿವೆ. ಇಂತಹ ಸಮಯದಲ್ಲಿ ಬೇಸಿಗೆ ಕಳೆಯೋದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಮಾರ್ಚ್ ಮೊದಲ ವಾರದಿಂದಲೇ ಬಿಸಿಲಿನ ಧಗೆ ಹೆಚ್ಚಾಗಲಿದೆ.
“ಇತ್ತೀಚಿನ ದಿನಗಳಲ್ಲಿ ದಿನಪೂರ್ತಿ ತೇವಾಂಶದಿಂದ ಕೂಡಿದ್ದು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಎರಡು ಡಿಗ್ರಿಗಳಷ್ಟು ಹೆಚ್ಚುತ್ತಿದೆ. ಉತ್ತರ ಒಳಭಾಗ ಮತ್ತು ಕರಾವಳಿ ಕರ್ನಾಟಕದಲ್ಲಿ ಹವಾಮಾನದ ಮಾದರಿಯು ಒಂದೇ ಆಗಿರುತ್ತದೆ. ಅಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡು ಡಿಗ್ರಿ ಹೆಚ್ಚಾಗಿದೆ. ಇದು ಎಲ್ ನಿನೋ ಪರಿಣಾಮವಾಗಿದೆ. ಆಗಸ್ಟ್ ವೇಳೆಗೆ ಪರಿಣಾಮವು ತಟಸ್ಥವಾಗಲಿದೆ ಎಂದು ನಿರೀಕ್ಷಿಸಲಾಗಿದೆ” ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
“ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ತಾಪಮಾನ 33 ಡಿಗ್ರಿ ಆಸುಪಾಸಿನಲ್ಲಿದ್ದು, ಫೆಬ್ರವರಿಯಲ್ಲೇ ಬಿರುಬೇಸಿಗೆಯ ತಾಪ ಕಾಡತೊಡಗಿದೆ. ಫೆ.7ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಾಪಮಾನ ಹಗಲು ಹೊತ್ತು 32-33 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿತ್ತು. ಬೆಳಗಾವಿ, ಕಾರವಾರಗಳಲ್ಲೂ ತಾಪಮಾನ 32-34 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿತ್ತು. ಫೆ.8 ರಂದು ಕೂಡ ಈ ನಗರಗಳಲ್ಲಿ ತಾಪಮಾನ 32 ಡಿಗ್ರಿ ದಾಟಲಿದ್ದು, ಬಿಸಿಲ ಬೇಗೆ ಹೆಚ್ಚಾಗಲಿದೆ” ಎಂದು ಇಲಾಖೆ ವರದಿ ತಿಳಿಸಿದೆ.
“ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಬೆಳಗಾವಿ, ವಿಜಯಪುರ ಜಿಲ್ಲೆ ಸುತ್ತಮುತ್ತ ಹಲವೆಡೆ ನಸುಕಿನ ವೇಳೆ ಮೋಡ ಕವಿದಂತೆ ಕಾಣಬಹುದು. ಮುಂಜಾನೆ ಮಂಜು ಮುಸುಕಿದ ವಾತಾವರಣ ಇರುವಲ್ಲಿ ತೀವ್ರ ಚಳಿ ಕಾಡಬಹುದು. ಹಗಲು ತಾಪಮಾನ ಹೆಚ್ಚಳ ನಿರೀಕ್ಷಿಸಬಹುದು” ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
“ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ರಾತ್ರಿ ಮತ್ತು ಮುಂಜಾನೆ ಚಳಿ ಇದ್ದರೆ, ಹಗಲು ಒಣ ಹವೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಕೆಲವು ಕಡೆ ಮುಂದಿನ ಅವಧಿಯಲ್ಲಿ ಉಷ್ಣಾಂಶ 3 ಡಿಗ್ರಿ ಸೆಲ್ಶಿಯಸ್ ಏರಬಹುದು” ಎಂದು ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
“ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಫೆ.8 ರಂದು ಕೆಲವೆಡೆ ಮುಂಜಾನೆ ಮಂಜು ಇರಲಿದ್ದು, ಚಳಿ ಕೂಡ ಇರಲಿದೆ. ಬಹುತೇಕ ಕಡೆಗಳಲ್ಲಿ ಹಗಲು ನಿರ್ಮಲ ಆಕಾಶ ಕಾಣಬಹುದು. ಕೆಲವು ಕಡೆ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆ ಚಳಿ ಕಾಡಲಿದ್ದು, ಹಗಲಲ್ಲಿ ಒಣಹವೆ ಇರಲಿದೆ” ಎಂದು ವರದಿ ಹೇಳಿದೆ.
“ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಫೆ.8ರಂದು ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಅನುಭವಕ್ಕೆ ಬರಲಿದೆ. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಸದ್ಯ ಮಳೆಯ ಮುನ್ಸೂಚನೆ ಇಲ್ಲ” ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವೊಂದು ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಲಿದೆ. ಕೆಲ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ದಿನದಿಂದ ದಿನಕ್ಕೆ ಚಳಿ ಕಡಿಮೆಯಾಗುತ್ತಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದೆ.
“ಮುಂದಿನ ಕೆಲ ದಿನಗಳ ತನಕ ಅತಿ ಹೆಚ್ಚು ಉಷ್ಣಾಂಶ ದಾಖಲಾಗಲಿದೆ. ಈ ವರ್ಷ ವಾಡಿಕೆಗಿಂತ ಅತಿ ಹೆಚ್ಚು ತಾಪಮಾನ ದಾಖಲಾಗಲಿದೆ. ಮುಂದಿನ 1 ವಾರ ಶೇಕಡಾ 33 ಡಿಗ್ರಿ ತಾಪಮಾನ ಮುಂದುವರೆಯಲಿದೆ” ಎಂದು ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಪ್ರಾಪ್ತ ವಯಸ್ಸಿನ ಮಗನಿಂದ ಸ್ಕೂಟರ್ ಚಾಲನೆ : ತಾಯಿಗೆ ₹30 ಸಾವಿರ ದಂಡ
“ಫೆಬ್ರವರಿ ತಿಂಗಳ ಮೂರನೇ ವಾರದಿಂದಲೇ ಬೆಂಗಳೂರು ಮತ್ತು ಸುತ್ತಮುತ್ತ ಬಿಸಿಲಿನ ಹೆಚ್ಚಳದ ಪ್ರಭಾವ ಎದುರಿಸಬೇಕಾಗುತ್ತದೆ. ಫೆಬ್ರವರಿ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಸರಾಸರಿ ಮಳೆ 7 ಮಿಲಿ ಮೀಟರ್ ಮಳೆಯಾಗುತ್ತದೆ. ಈ ವರ್ಷ ಮಾತ್ರ ಸರಾಸರಿಗಿಂತ ಕಡಿಮೆ ಮಳೆ ದಾಖಲಾಗುವ ಸಾಧ್ಯತೆಯಿದೆ” ಎಂದು ಮಾಹಿತಿ ನೀಡಿದ್ದಾರೆ.
“ಪೂರ್ವ ಪೆಸಿಫಿಕ್ ಸಾಗರದಲ್ಲಿ ಮೇಲ್ಮೈ ನೀರಿನ ತಾಪಮಾನ ಏರಿಕೆಗೆ ಕಾರಣವಾಗುವ ಹವಾಮಾನ ಪರಿಸ್ಥಿತಿಯಾದ ಎಲ್ ನಿನೋ ಪರಿಣಾಮವು ಪ್ರಬಲವಾಗಿದೆ. ಫೆಬ್ರವರಿ ಚಳಿಗಾಲದ ತಿಂಗಳಾಗಿದ್ದರೂ, ಎಲ್ ನಿನೋ ಪರಿಣಾಮವು ತಾಪಮಾನವನ್ನು ಹೆಚ್ಚಿಸುತ್ತಿದೆ. ಮಾರ್ಚ್ ನಂತರ ಬಿಸಿಲು ಕಡಿಮೆಯಾಗಬಹುದು. ಈ ವರ್ಷದ ಬೇಸಿಗೆಯು ಕಳೆದ ವರ್ಷಕ್ಕಿಂತ ಕಠಿಣವಾಗಿರಬಹುದು” ಎಂದು ಹೇಳಿದ್ದಾರೆ.