ರಾಜ್ಯ ಭೀಕರ ಬರಗಾಲಕ್ಕೆ ತುತ್ತಾಗಿದೆ. ಕೆಂದ್ರ ಪರಿಹಾರ ಕೊಡುತ್ತಿಲ್ಲವೆಂದು ರಾಜ್ಯ ದೂಷಣೆಯಲ್ಲೇ ಕಾಲ ಕಳೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆ ಎದುರಾಗಿದೆ. ಆಡಳಿತ ಯಂತ್ರ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ. ಚುನಾವಣೆಯೂ ಮುಖ್ಯ, ಜನರ ಬದುಕು ಅದಕ್ಕಿಂತ ಮುಖ್ಯ. ಅದರಲ್ಲೂ ಜನರಿಗೆ ಜೀವಜಲ ಒದಗಿಸುವುದು ಇನ್ನೂ ಮುಖ್ಯ.
ಮಾರ್ಚ್ ಮೊದಲ ವಾರದಿಂದ ಅಧಿಕೃತವಾಗಿ ಆರಂಭವಾಗಬೇಕಿದ್ದ ಬೇಸಿಗೆ, ಫೆಬ್ರವರಿ ಎರಡನೇ ವಾರವೇ ಚುರುಕು ಮುಟ್ಟಿಸುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಇದ್ದ ತಾಪಮಾನಕ್ಕಿಂತ 2° ಸೆಲ್ಸಿಯಸ್ ಏರಿಕೆಯಾಗಿ ಬಿಸಿಲಿನ ತಾಪ ತಟ್ಟುತ್ತಿದೆ. ಇದು ಎಲ್ ನಿನೋ(ನೈಸರ್ಗಿಕ ವಿದ್ಯಮಾನ)ದ ಪರಿಣಾಮ ಎಂದಿದ್ದಾರೆ ಹವಾಮಾನ ತಜ್ಞರು.
ಎಲ್ ನಿನೋ ಪರಿಣಾಮದಿಂದಾಗಿ ರಾಜ್ಯದಲ್ಲಿ ಬೇಸಿಗೆಯ ಧಗೆ ಏರಿ, ಬಿಸಿಲಿನ ತಾಪಕ್ಕೆ ಜನ ಉರಿದು ಹೋಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಅಣೆಕಟ್ಟುಗಳಲ್ಲಿ ನೀರಿಲ್ಲ. ಜಲಮೂಲಗಳು ಬತ್ತಿಹೋಗಿವೆ. ಕುಡಿಯುವ ನೀರಿನ ಕೊರತೆಯಂತಹ ಗಂಭೀರ ಸಮಸ್ಯೆ ಎದುರಾಗಿದೆ. ಈಗಾಗಲೇ ಬಿಸಿಲಿಗೆ ಬಯಲುಸೀಮೆ, ಮಲೆನಾಡು, ಕರಾವಳಿ ಜನ ತತ್ತರಿಸಿಹೋಗಿದ್ದಾರೆ. ಧಾರವಾಡದ ಕೆಲವು ಹಳ್ಳಿಗಳಲ್ಲಿ ವಾರಕ್ಕೊಂದು ಸಲ ನಲ್ಲಿಯಲ್ಲಿ ನೀರು ಬರುವ ದುಃಸ್ಥಿತಿ ಎದುರಾಗಿದೆ.
ಇದಕ್ಕೆಲ್ಲ ಮೂಲವೆಂಬಂತೆ, ಈ ಬಾರಿಯ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ಜಲಾಶಯಗಳು ಬರಿದಾಗಿವೆ. ಬಿರುಕುಬಿಟ್ಟ ಚಿತ್ರಗಳು ಚಿತ್ತ ಕೆಡಿಸುತ್ತಿವೆ. ಮಳೆಯಾಶ್ರಿತ ಕೃಷಿ ಕೈ ಕೊಟ್ಟಿದೆ. ಕೃಷಿಯನ್ನು ಅವಲಂಬಿಸಿದ ರೈತಾಪಿ ಜನರ ಬದುಕು ಬೀದಿಗೆ ಬಂದಿದೆ. ಮನರೇಗಾ ಯೋಜನೆಯಡಿಯಲ್ಲಿ ಕೆಲಸ ಕೊಡಬೇಕಾದ ಸರ್ಕಾರಗಳು ಜಟಾಪಟಿಗೆ ಬಿದ್ದು, ಕೆಲಸ ಮತ್ತು ಕೂಲಿ, ಎರಡೂ ಇಲ್ಲದಂತಾಗಿದೆ. ಯಾದಗಿರಿ, ಕೊಪ್ಪಳ, ರಾಯಚೂರಿನ ಜನರಷ್ಟೇ ಅಲ್ಲ, ಸಂಪದ್ಭರಿತ ಜಿಲ್ಲೆಯ ಜನ ಕೂಡ ಗುಳೆ ಹೋಗುವುದು ಸಾಮಾನ್ಯವಾಗಿದೆ.
ಏತನ್ಮಧ್ಯೆ, ರಾಜ್ಯದ 223 ತಾಲೂಕುಗಳು ಬರಕ್ಕೆ ತುತ್ತಾಗಿವೆ ಎಂದು ಸರ್ಕಾರವೇ ಅಧಿಕೃತವಾಗಿ ಘೋಷಿಸಿದೆ. 14 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದೂ ಹೇಳಿದೆ. ಜನ-ಜಾನುವಾರುಗಳ ಸ್ಥಿತಿ ಶೋಚನೀಯವಾಗಿದೆ. ಒಂದು ಹೊತ್ತು ಊಟವಿಲ್ಲದೆ ಇದ್ದುಬಿಡುವ ರೈತರು, ಜಾನುವಾರುಗಳಿಗೆ ಹಿಡಿ ಹುಲ್ಲು ಹಾಕದೆ, ನೀರು ಕುಡಿಸದೆ ಇರಲಾರರು. ಆದರೆ, ಪರಿಸ್ಥಿತಿ ಕೈ ಮೀರಿಹೋಗಿದೆ. ತಮಗೂ ಕೆಲಸವಿಲ್ಲದೆ, ತಮ್ಮನ್ನು ನಂಬಿದ ಜಾನುವಾರುಗಳನ್ನೂ ಸಾಕಲಾಗದೆ, ಮಾರಲಾಗದೆ ಅವರ ಸ್ಥಿತಿ ಚಿಂತಾಜನಕವಾಗಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಸರ್ಕಾರ, ವಿಪತ್ತು ನಿರ್ವಹಣಾ ಕೋಶದಿಂದ ಮಾಹಿತಿ ಪಡೆದ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಬೇಕಾಗಿತ್ತು. ಎಲ್ಲೆಲ್ಲಿ ಅಗತ್ಯವೋ ಅಲ್ಲಲ್ಲಿ ಗೋಶಾಲೆ ತೆರೆದು, ಜಾನುವಾರುಗಳನ್ನು ರಕ್ಷಿಸುವ ಕೆಲಸವನ್ನು ಈಗಾಗಲೇ ಮಾಡಬೇಕಿತ್ತು. ದುರದೃಷ್ಟಕರ ಸಂಗತಿ ಎಂದರೆ, ಕೃಷಿ ಕುಟುಂಬದಿಂದ ಬಂದ ಕಂದಾಯ ಸಚಿವರು, ಅಧಿಕಾರಿಗಳಿಗೆ ಸಲಹೆ, ಸೂಚನೆ ಕೊಡುವ ಸಭೆಗಳಿಗಷ್ಟೇ ಸೀಮಿತರಾಗಿದ್ದಾರೆ. ಮಾಧ್ಯಮಗಳಲ್ಲಷ್ಟೇ ಸದ್ದು ಮಾಡುತ್ತಿದ್ದಾರೆ.
ಮಳೆ ಕೈಕೊಟ್ಟಿದೆ, ಬರಗಾಲ ಬಂದಿದೆ. ಗ್ಲೋಬಲ್ ವಾರ್ಮಿಂಗ್‌ನ ಪರಿಣಾಮದಿಂದಾಗಿ ಬೇಸಿಗೆಯೂ ಬೇಗ ಬಂದಿದೆ. ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿರುತ್ತದೆ. ಎಲ್ಲೆಲ್ಲಿ ನೀರಿನ ಕೊರತೆ ಇದೆಯೋ ಅಲ್ಲಲ್ಲಿ ಸಮರ್ಪಕವಾಗಿ ಪೂರೈಕೆ ಮಾಡಬೇಕಾದ ಜವಾಬ್ದಾರಿಯನ್ನು ಈ ಕಾರ್ಯಪಡೆಗಳು ಹೊತ್ತಿರುತ್ತವೆ. ಆದರೆ, ಪಡೆಗಳಿವೆ ಕೆಲಸವಾಗುತ್ತಿಲ್ಲ. ಇವತ್ತಿಗೂ ನೂರಾರು ಗ್ರಾಮಗಳಿಗೆ ಟ್ಯಾಂಕರ್ ಮೂಲಕವೇ ನೀರು ಪೂರೈಕೆಯಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಜನರೇ ತಮ್ಮ ಜೇಬನ್ನು ಬರಿದು ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ, ಗ್ರಾಮೀಣ ಭಾಗದ ಕುಡಿಯುವ ನೀರಿಗಾಗಿಯೇ ಎತ್ತಿಟ್ಟ ಕೋಟ್ಯಂತರ ರೂಪಾಯಿ ಎಲ್ಲಿ ಹೋಗುತ್ತಿದೆ?
ಇನ್ನು ಬೆಂಗಳೂರು ನಗರದ ಜನಸಂಖ್ಯೆ 1.30 ಕೋಟಿ ದಾಟಿ ಹೋಗುತ್ತಿದೆ. ನೀರಿನ ಪೂರೈಕೆಯ ಮಹತ್ವದ ಜವಾಬ್ದಾರಿ ಹೊತ್ತಿರುವ ಜಲಮಂಡಳಿ, ಇವತ್ತಿಗೂ ಕಾವೇರಿ ನೀರನ್ನೇ ಪ್ರಧಾನವಾಗಿ ಅವಲಂಬಿಸಿದೆ. ನೀರು ಪೂರೈಸುವ ಕೆಆರ್‍ಎಸ್ ಒಣಗುತ್ತಿದೆ. ಸದ್ಯಕ್ಕೆ ಬೆಂಗಳೂರು ದಕ್ಷಿಣಕ್ಕೆ ದಿನ ಬಿಟ್ಟು ದಿನ ನೀರು ಸಿಕ್ಕರೆ, ಬೆಂಗಳೂರು ಉತ್ತರ ಸಂಪೂರ್ಣವಾಗಿ ಖಾಸಗಿ ಟ್ಯಾಂಕರ್‍ಗಳ ಕಪಿಮುಷ್ಠಿಗೆ ಒಳಗಾಗಿದೆ. 2 ಸಾವಿರ ಲೀಟರ್ ನೀರಿನ ಟ್ಯಾಂಕರ್‍ಗೆ ಒಂದು ಸಾವಿರ ರೂಪಾಯಿ ಕೊಟ್ಟರೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೆರೆ-ಕುಂಟೆಗಳನ್ನು ಕರಗಿಸುತ್ತಾ, ಹಸಿರು ಮಾಯಮಾಡುತ್ತಾ, ಕಾಂಕ್ರೀಟ್ ಕಾಡಾಗುತ್ತಿರುವ ನಗರ; ನೀರನ್ನು ಮಿತವಾಗಿ ಬಳಸದಿದ್ದರೆ, ಮಳೆ ನೀರು ಕೊಯ್ಲನ್ನು ಅಳವಡಿಸಿಕೊಳ್ಳದಿದ್ದರೆ, ಅಂತರ್ಜಲ ಪಾತಾಳಕ್ಕೆ ಸೇರಲಿದೆ. ಬೆಂಗಳೂರು ನಗರ ಗಂಭೀರ ಸಮಸ್ಯೆಗೆ ಸಿಲುಕಲಿದೆ.
ರಾಜ್ಯ ಹಿಂದೆಂದೂ ಕಂಡಿರದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಕೆಂದ್ರ ಪರಿಹಾರ ಕೊಡುತ್ತಿಲ್ಲವೆಂದು ರಾಜ್ಯ ದೂಷಣೆಯಲ್ಲೇ ಕಾಲ ಕಳೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆ ಎದುರಾಗಿದೆ. ಆಡಳಿತ ಯಂತ್ರ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯ. ಚುನಾವಣೆಯೂ ಮುಖ್ಯ, ಜನರ ಬದುಕು ಅದಕ್ಕಿಂತ ಮುಖ್ಯ. ಅದರಲ್ಲೂ ಜನರಿಗೆ ಜೀವಜಲ ಒದಗಿಸುವುದು ಇನ್ನೂ ಮುಖ್ಯ. ಚುನಾವಣೆಯ ನೆಪದಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಜನರತ್ತ ನೋಡದಿದ್ದರೆ, ಯಾರಿಗಾಗಿ-ಏತಕ್ಕಾಗಿ ಮತ ಚಲಾಯಿಸಬೇಕು ಎಂಬ ಪ್ರಶ್ನೆ ಎದುರಾಗುತ್ತದೆ.
