ಬಂಜಾರ ಸಮಾಜದ ಮೇಲೆ ಇತರ ಸಮುದಾಯದವರು ದಬ್ಬಾಳಿಕೆ ನಡೆಯುತ್ತಿದ್ದಾರೆ. ಒತ್ತಾಯ ಪೂರ್ವಕವಾಗಿ ಮತಾಂತರ ಮಾಡಲಾಗುತ್ತಿದೆ. ಇತ್ತೀಚೆಗೆ, ಮತ್ತೊಂದು ಧರ್ಮದ ಯುವಕ ಬಂಜಾರ ಸಮಾಜದ ಯುವತಿಯನ್ನು ಪ್ರೀತಿಸಿ ವಿವಾಹವಾಗಿರುವ ಪ್ರಕರಣ ನಡೆದಿದೆ. ಈ ವಿವಾಹವನ್ನು ರದ್ದುಗೊಳಿಸಿ, ಯುವತಿಯರನ್ನು ರಕ್ಷಿಸಬೇಕೆಂದು ಬಂಜಾರ ಸಮಾಜದ ಶ್ರೀಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ಜನವರಿ 12ರಂದು ಡಿ.ಎಚ್.ಎಂ ಚರ್ಚ್ ನಲ್ಲಿ ಪಾದ್ರಿಯಾಗಿರುವ ಬಿ.ರಾಜಶೇಖರ್ ಎಂಬುವವರು ಮತಾಂತರ ಮಾಡುವ ಉದ್ದೇಶದಿಂದ ಬಂಜಾರ ಸಮುದಾಯದ ಯುವತಿ ಜ್ಯೋತಿಬಾಯಿ ಅವರನ್ನು ವಿವಾಹವಾಗಿದ್ದಾರೆ. ಮದುವೆ ನೊಂದಣಿಗೆ ಸಲ್ಲಿಸಿರುವ ಎಫ್ (F) ನಮೂನೆಯಲ್ಲಿ ಬಿ.ರಾಜಶೇಖರ್ ಕುಟುಂಬದವರ ಸಹಿ ಇಲ್ಲ ಹಾಗೂ ಅವರ ಒಪ್ಪಿಗೆಯೂ ಇಲ್ಲ. ಈ ವಿವಾಹದ ಮುಖ್ಯ ಉದ್ದೇಶ ಮತಾಂತರ ಮಾಡುವುದಾಗಿದೆ” ಎಂದು ಆರೋಪಿಸಿದರು.
ಬಂಜಾರ ಸಮುದಾಯದ ಯುವತಿ ಜ್ಯೋತಿಬಾಯಿ ಹಾಗೂ ಆಕೆಯ ಕುಟುಂಬದವರನ್ನು ಹೆದರಿಸಿ ಬೆದರಿಸಿ ವಿವಿಧ ಆಸೆ ಆಮೀಷಗಳನ್ನು ತೋರಿಸಿ ಸುಮಾರು ಐದು ವರ್ಷಗಳಿಂದ ಯುವತಿಯನ್ನು ಹಾಗೂ ಅವರ ಕುಟುಂಬದವರನ್ನು ಮತಾಂತರ ಮಾಡಿ ಮದುವೆಗೆ ಒಪ್ಪಿಸಲು ಪ್ರಯತ್ನ ಮಾಡಲಾಗಿದೆ. ಬಿ.ರಾಜಶೇಖರ್ ತಮ್ಮ ವೈಯಕ್ತಿಕ ದಾಖಲಾತಿಯನ್ನು ನೈಜವಾಗಿ ತೋರಿಸದೆ ಸಮಾಜದ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಆದ್ದರಿಂದ ಈ ವಿವಾಹದ ನೋಂದಣಿಯನ್ನು ರದ್ದುಪಡಿಸಬೇಕು ಹಾಗೂ ತಪ್ಪು ಮಾಹಿತಿ ನೀಡಿ ವಂಚಿಸಿದ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದ ಅವರು, ಒತ್ತಾಯವಾಗಿ ಮತಾಂತರ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರವೀಂದ್ರ ನಾಯ್ಕ್, ಎನ್.ಹನುಮಂತ ನಾಯ್ಕ್, ಲಿಂಗರಾಜನಾಯ್ಕ್, ಲಿಂಬ್ಯಾನಾಯ್ಕ್, ರಮೇಶ್ ರವಿನಾಯ್, ಮಂಜಾನಾಯ್ಕ್, ಸತೀಶ್ ಪೂಜಾರಿ, ಮುರುಗೇಶ್ ಹುಲಿಕಟ್ಟೆ ಹಾಗೂ ಇತರರು ಹಾಜರಿದ್ದರು.