ಈ ಹಿಂದೆ ಶಾಸಕರೇ ನೇರವಾಗಿ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದರು. ಈಗ ಅಧಿಕಾರಿಗಳು ಬೇರೆಯವರ ಹೆಸರಿನಲ್ಲಿ ಹಣ ಕೇಳುತ್ತಿದ್ದಾರೆ. ರಾಜ್ಯದಲ್ಲಿ 40 ಪರ್ಸೆಂಟ್ ಪರಿಸ್ಥಿತಿ ಮತ್ತೆ ಮುಂದುವರೆದಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಿತಿಮೀರಿದ ಭ್ರಷ್ಟಾಚಾರಿ ಅಧಿಕಾರಿಗಳಿದ್ದಾರೆ. ಈ ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಬೇರೂರಿದೆ. ಬಿಬಿಎಂಪಿ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳಿದ್ದಾರೆ. ಬಿಬಿಎಂಪಿಯಲ್ಲಿ 15 ಮಂದಿ ಭ್ರಷ್ಟ ಅಧಿಕಾರಿಗಳಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿ ಮತ್ತು ಡಿಸಿಎಂ ಅವರ ಗಮನಕ್ಕೆ ತರುತ್ತೇವೆ” ಎಂದರು.
“ಮಾರ್ಚ್ 4ರಂದು ಅರಮನೆ ಮೈದಾನದಲ್ಲಿ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಸಮ್ಮೇಳನ ನಡೆಸಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರನ್ನು ಆಹ್ವಾನಿಸಲಾಗುವುದು. ಅಧಿಕಾರಿಗಳ ಭ್ರಷ್ಟಾಚಾರ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ವಿವರಿಸಲಾಗುವುದು” ಎಂದರು.