ರಾಯಚೂರಿನಲ್ಲಿ ವೈಟಿಪಿಎಸ್ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಭೂಸಂತ್ರಸ್ತ ರೈತ ಕುಟುಂಬಗಳಿಗೆ, ಆಡಳಿತ ಮಂಡಳಿ ಉದ್ಯೋಗ ನೀಡದೇ ಷರತ್ತುಗಳನ್ನು ವಿಧಿಸಿ ಅಲೆದಾಡಿಸುತ್ತಿದ್ದು, ಸರ್ಕಾರ ಒಂದು ವಾರದಲ್ಲಿ ಈ ಬಗ್ಗೆ ಸ್ಪಂದಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಸತ್ಯನಾರಾಯಣರಾವ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಯಚೂರು ಕೈಗಾರಿಕ ಪ್ರದೇಶ ಭೂ ಸಂತ್ರಸ್ಥರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸತ್ಯನಾರಾಯಣರಾವ್, ವೈಟಿಪಿಎಸ್ ನಿರ್ಮಾಣಕ್ಕಾಗಿ ಸುತ್ತಮುತ್ತಲಿರುವ ಏಗನೂರು, ಚಿಕ್ಕಸೂಗೂರು, ಕುಕನೂರು, ಹೆಗ್ಗಸನಹಳ್ಳಿ ಹಾಗೂ ದೇವಸೂಗೂರು ಗ್ರಾಮದ ಜಮೀನುಗಳು ಒಟ್ಟು 1,125 ಎಕರೆ ಜಮೀನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಆಡಳಿತ ಮಂಡಳಿಯ ಭೂ ಸ್ವಾಧೀನ ಪಡೆದುಕೊಂಡು ಕುಟುಂಬಕ್ಕೆ ಉದ್ಯೋಗ ನೀಡುವ ಭರವಸೆ ನೀಡಿತ್ತು.
ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಉದ್ಯೋಗ ನೇಮಕಾತಿ ಮತ್ತು ಪುನರ್‌ವಸತಿ ಕಲ್ಪಿಸಿಕೊಡುವುದಾಗಿ ತಿಳಿಸಿತ್ತು. ಅನೇಕ ಆಮಿಷಗಳನ್ನು ನೀಡಿ, ರೈತರಿಗೆ ಯಾವುದೇ ಷರತ್ತುಗಳನ್ನು ನೀತಿ ನಿಯಮಗಳನ್ನು ತಿಳಿಸದೇ ರೈತರಿಂದ ಜಮೀನನ್ನು ಸ್ವಾಧೀನ ಪಡಿಸಿಕೊಂಡುರು. ಆದರೆ, ಈಗ ಉದ್ಯೋಗ ನೀಡಲು ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಅನೇಕ ಷರತ್ತುಗಳನ್ನು ವಿಧಿಸಿ ಉದ್ಯೋಗದಿಂದ ವಂಚಿತರನ್ನಾಗಿ ಮಾಡಿದ್ದಾರೆ ಎಂದು ದೂರಿದರು.
ಮೂರು ವರ್ಷದ ಭೂ ಒಡೆತನ, ಜಂಟಿ ಕುಟುಂಬಗಳನ್ನು ಪ್ರತ್ಯೇಕ ಕುಟುಂಬಗಳೆಂದು ಪರಿಗಣಿ ಸದೇ ಒಂದೇ ಕುಟುಂಬ ಎಂದು ಪರಿಗಣಿಸುವುದು ಸೇರಿ ಹಲವು ಷರತ್ತು ವಿಧಿಸಿದೆ. ಜೊತೆಗೆ ವಿವಾಹಿತ ಮಹಿಳೆಗೆ ಉದ್ಯೋಗ ನೀಡಲು ಬರುವುದಿಲ್ಲ ಎಂದು ಹೇಳಿದ್ದು ಉದ್ಯೋಗದಿಂದ ವಂಚಿಸಿದೆ ಎಂದು ಆರೋಪಿಸಿದ್ದಾರೆ.
ವಿಧಿಸಿದ ಷರತ್ತುಗಳನ್ನು ಸಡಿಲಿಕೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಸಿಂಎ ಆಗಿದ್ದ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದು, ಕುಟುಂಬಗಳಿಗೆ ಉದ್ಯೋಗ, ನೀಡುತ್ತೇವೆಂದರು. ಇದೀಗ ಕಾಂಗ್ರೆಸ್ ಸರ್ಕಾರವಿದ್ದು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದು, ಕುಟುಂಬಗಳಿಗೆ ಉದ್ಯೋಗ ನೀಡಬೇಕು, ಭೂ ಒಡೆತನದ ಷರತ್ತು ಸಡಿಲಿಕೆ ಮಾಡಬೇಕು. ಸರ್ಕಾರಕ್ಕೆ ಒಂದುವಾರ ಗಡುವು ನೀಡಿ ಈಡೇರಿಸದಿದ್ದಲ್ಲಿ ವೈಟಿಪಿಎಸ್ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಚೆನ್ನಾರೆಡ್ಡಿ, ರಾಮನಗೌಡ ಏಗನೂರು, ತಿಮ್ಮಪ್ಪ, ಎಸ್.ಜಿ. ಪ್ರಭು ಮಡಿವಾಳ ಸೇರಿದಂತೆ ಅನೇಕರು ಹಾಜರಿದ್ದರು.