ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣ, ಹೆಣ್ಣುಭ್ರೂಣ ಹತ್ಯೆ ದಂಧೆ, ಮರ್ಯಾದೆಗೇಡು ಹತ್ಯೆ, ಸಾಮೂಹಿಕ ಅತ್ಯಾಚಾರ, ಅಪಹರಣ, ಕೊಲೆಯಂತಹ ಪ್ರಕರಣಗಳು ನಡೆದಿವೆ. ಈ ಸಮಯದಲ್ಲಿ ಮಹಿಳಾ ಆಯೋಗದ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರ ಹಿಡಿದು ಭರ್ತಿ ಒಂಬತ್ತು ತಿಂಗಳಾದವು. ಈ ಮಧ್ಯೆ ಚುನಾವಣಾಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹಿಳೆಯರ ಸಶಕ್ತೀಕರಣ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಮಹಿಳಾ ಆಯೋಗದಂತಹ ಶಾಸನಬದ್ಧ ಹಾಗೂ ಅರೆ ನ್ಯಾಯಾಂಗ ಸಂಸ್ಥೆಗೆ ಸರ್ಕಾರ ಬಂದು ಒಂಬತ್ತು ತಿಂಗಳಾದರೂ ಅಧ್ಯಕ್ಷರ ನೇಮಕ ಮಾಡಿಲ್ಲ. ಸಾಮಾಜಿಕ ಕಾಳಜಿ, ಬದ್ಧತೆಯಿರುವ ಸುಶಿಕ್ಷಿತ ಮಹಿಳೆಯೊಬ್ಬರನ್ನು ಹುಡುಕಿ ನೇಮಕ ಮಾಡದಿರುವುದು ಅಕ್ಷಮ್ಯ. ಕನಿಷ್ಠ ಮಹಿಳಾ ಆಯೋಗದ ಅಗತ್ಯದ ಬಗ್ಗೆ ಸರ್ಕಾರದಲ್ಲಿರುವ ಯಾರಿಗೂ ಅರಿವಿಲ್ಲವೇ? ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತದಿರುವುದು ಜಡ್ಡುಗಟ್ಟಿದ ವ್ಯವಸ್ಥೆಯ ಪ್ರತಿಬಿಂಬ.
ಪ್ರತಿದಿನ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಕೌಟುಂಬಿಕ ದೌರ್ಜನ್ಯದಂತಹ ಪ್ರಕರಣಗಳು ಸುದ್ದಿಯಾಗುತ್ತಿವೆ. ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣ, ಹೆಣ್ಣುಭ್ರೂಣ ಹತ್ಯೆ ದಂಧೆ, ಮರ್ಯಾದೆಗೇಡು ಹತ್ಯೆ, ಸಾಮೂಹಿಕ ಅತ್ಯಾಚಾರ, ಅಪಹರಣ, ಕೊಲೆಯಂತಹ ಪ್ರಕರಣಗಳು ನಡೆದಿವೆ. ಈ ಸಮಯದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ಮಹಿಳಾ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರು ಇಲ್ಲದಿರುವ ಕಾರಣ ಮಹಿಳೆಯರು ತಮಗಾಗುತ್ತಿರುವ ಅನ್ಯಾಯವನ್ನು ಹೇಳಿಕೊಳ್ಳಲು, ಕಾನೂನು ಸಲಹೆ ಪಡೆಯಲು ಅಥವಾ ದೂರು ನೀಡಲು ಎಲ್ಲಿಗೆ ಹೋಗಬೇಕು? ನೇರವಾಗಿ ಪೊಲೀಸ್ ಠಾಣೆಗೆ ಹೋಗಬೇಕು ಅಥವಾ ಸಹಿಸಿಕೊಂಡು ಸುಮ್ಮನಿರಬೇಕು. ನಮ್ಮ ಪೊಲೀಸ್ ಠಾಣೆಗಳು ಎಷ್ಟು ಸ್ತ್ರೀಪರ ಅಥವಾ ನ್ಯಾಯದ ಪರ ಇವೆ ಎಂಬುದು ಬಿಡಿಸಿ ಹೇಳಬೇಕಿಲ್ಲ. ಪೊಲೀಸ್ ಇಲಾಖೆಯಲ್ಲಿ ಲಿಂಗಸೂಕ್ಷ್ಮತೆಯ ಅರಿವಿರುವವರ ಸಂಖ್ಯೆ ಕಡಿಮೆಯಿದೆ. ಮಹಿಳೆಯರು ಧೈರ್ಯದಿಂದ ಅಥವಾ ನಿರ್ಭಿಡೆಯಿಂದ ಪೊಲೀಸ್ ಠಾಣೆಗಳಿಗೆ ಹೋಗುವಂತಹ ವಾತಾವರಣ ಭಾರತದಲ್ಲಿ ಇಲ್ಲ. ಹೀಗಿರುವಾಗ ಮಹಿಳಾ ಆಯೋಗದಂತಹ ಕೆಲವು ಸಂಸ್ಥೆಗಳೇ ಮಹಿಳೆಯರ ಪಾಲಿನ ಆಶಾಕಿರಣ. ಇವುಗಳು ಸದಾ ಜೀವಂತವಾಗಿರಬೇಕು. ಇಂತಹ ವಿಷಯಗಳಲ್ಲಿ ಸ್ತ್ರೀಯರ ಸಬಲೀಕರಣದ ಕಾಳಜಿ ಇರುವ ಸರ್ಕಾರ ನಮ್ಮದು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಸರ್ಕಾರದ ನಡೆ ತೀರಾ ನಿರಾಶಾದಾಯಕ.
ಹಾಗಂತ ಮಹಿಳಾ ಆಯೋಗಕ್ಕೆ ಪರಮಾಧಿಕಾರವೇನೂ ಇಲ್ಲ. ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಆಯೋಗಕ್ಕಿಲ್ಲ. ಆದರೆ, ಪ್ರಕರಣವನ್ನು ಹಳ್ಳ ಹಿಡಿಸದಂತೆ ಅಥವಾ ಮುಚ್ಚಿ ಹಾಕದಂತೆ ತಡೆಯುವುದು ಆಯೋಗದಿಂದ ಸಾಧ್ಯ. ಪೊಲೀಸರು ಪ್ರಕರಣವನ್ನು ನಿರ್ಲಕ್ಷ್ಯ ಮಾಡದಂತೆ ನಿಗಾ ವಹಿಸುವುದು, ಠಾಣೆಯಿಂದ ಪ್ರಕರಣದ ತನಿಖೆಯ ವರದಿ ಪಡೆಯುವುದು, ದೂರು ದಾಖಲಿಸಿಕೊಳ್ಳದಿದ್ದರೆ ದಾಖಲಿಸುವಂತೆ ನಿರ್ದೇಶನ ನೀಡುವುದು, ಸಂತ್ರಸ್ತರಿಗೆ ಧೈರ್ಯ ತುಂಬುವುದು, ಕೌಟುಂಬಿಕ ಪ್ರಕರಣಗಳಲ್ಲಿ ಕೌನ್ಸೆಲಿಂಗ್ ನಡೆಸಿ ಸಣ್ಣಪುಟ್ಟ ವಿವಾದಗಳನ್ನು ಬಗೆಹರಿಸುವುದು, ಸಂತ್ರಸ್ತರ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವುದು ಹೀಗೆ ಆಯೋಗ ಮಾಡಬಹುದಾದ ಕೆಲಸಗಳು ಬಹಳಷ್ಟಿವೆ. ಮಹಿಳೆಯರು ಏಕಾಏಕಿ ಪೊಲೀಸ್ ಠಾಣೆಗಳಿಗೆ ಹೋಗಲು ಬಯಸುವುದಿಲ್ಲ. ಆದರೆ, ಮಹಿಳಾ ಆಯೋಗಕ್ಕೆ ಸುಲಭವಾಗಿ ಬಂದು ತಮ್ಮ ಅಳಲು ತೋಡಿಕೊಳ್ಳಬಹುದು. ಅಲ್ಲಿ ಸಿಗುವ ಸಾಂತ್ವನ, ಕಾನೂನು ಸಲಹೆ ಆಕೆಯ ಕಾನೂನು ಹೋರಾಟಕ್ಕೆ ನೆರವಾಗಬಲ್ಲುದು.
ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಂತಹ ಸಂಸ್ಥೆಗಳು ಒಂದು ದಿನವೂ ಅಧ್ಯಕ್ಷರಿಲ್ಲದೇ, ಅಧಿಕಾರಿಗಳಿಲ್ಲದೇ ಇರಕೂಡದು. ಅಷ್ಟು ಜವಾಬ್ದಾರಿಯುತ ಸಂಸ್ಥೆಗಳವು. ಪ್ರತಿಸಲವೂ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಗಮ, ಮಂಡಳಿ, ಆಯೋಗ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು ಬದಲಾಗುವುದೊಂದು ಕೆಟ್ಟ ಪರಂಪರೆ. ಅಷ್ಟೇ ಅಲ್ಲ ವರ್ಷದವರೆಗೂ ಆ ಜಾಗವನ್ನು ಖಾಲಿ ಬಿಡುವುದು ಬೇಜವಾಬ್ದಾರಿಯ ಪರಮಾವಧಿ. ಆಯೋಗಕ್ಕೆ ಅಧ್ಯಕ್ಷರು, ಸದಸ್ಯರು ಇಲ್ಲದಿರುವಾಗ ಅಲ್ಲಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕೆಲಸವಾದರೂ ಏನಿರುತ್ತದೆ? ನಮ್ಮ ತೆರಿಗೆ ಹಣ ಕೆಲಸವೇ ಇಲ್ಲದ ಸಂಸ್ಥೆಯೊಂದಕ್ಕೆ, ಕೆಲಸವನ್ನೇ ಮಾಡದ ಸಿಬ್ಬಂದಿಯ ಸಂಬಳ- ಭತ್ಯೆಗಳಿಗೆ ಪೋಲಾಗುತ್ತದೆ.
ಹತ್ತು ತಿಂಗಳಿನಿಂದ ಖಾಲಿ ಇದ್ದ ಮಾನವ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಕಳೆದ ನವೆಂಬರ್‌ನಲ್ಲಿ ಅಧ್ಯಕ್ಷ, ಸದಸ್ಯರ ನೇಮಕ ಮಾಡಲಾಗಿದೆ. ಮಹಿಳಾ ಆಯೋಗವೂ ಅಷ್ಟೇ ಮುಖ್ಯವಾದ ಸಂಸ್ಥೆ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಂಡು ಮಹಿಳಾ ಆಯೋಗಕ್ಕೆ ಅರ್ಹ ಮಹಿಳೆಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಾಗಿದೆ.
