ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅಲ್ಲದೇ, ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿ ಮಾಡಿದೇ ತಪ್ಪಿಸಿಕೊಂಡು ಓಡಾಡುವವರಿಗೆ ಬಿಸಿ ಮುಟ್ಟಿಸಲು ಸಂಚಾರ ಪೊಲೀಸ್ ಇಲಾಖೆ ಮುಂದಾಗಿದೆ.
ಹೌದು, ಸಂಚಾರ ನಿಯಮ ಉಲ್ಲಂಘನೆ ಮಾಡಿ 50 ಸಾವಿರಕ್ಕೂ ಅಧಿಕ ದಂಡ ಬಾಕಿ ಉಳಿಸಿಕೊಂಡಿದ್ದರೇ, ಅಂತಹವರ ಮನೆಗೆ ಸಂಚಾರ ಪೊಲೀಸರು ತೆರಳಿ ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ.
2,300ಕ್ಕೂ ಅಧಿಕ ವಾಹನಗಳು 50 ಸಾವಿರಕ್ಕೂ ಅಧಿಕ ದಂಡ ಬಾಕಿ ಉಳಿಸಿಕೊಂಡಿವೆ. ಈಗಾಗಲೇ ಬೆಂಗಳೂರು ಸಂಚಾರ ಪೊಲೀಸರು ಹಲವು ವಾಹನ ಮಾಲೀಕರಿಂದ ದಂಡ ಸಂಗ್ರಹ ಮಾಡಲಾಗಿದೆ. ನಿಯಮ ಉಲ್ಲಂಘನೆ ದಂಡ ಕಟ್ಟದಿದ್ದರೆ ಅಂತಹ ವಾಹನ ಸವಾರರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲಿದ್ದು, ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಲಿದೆ.
ಕಳೆದ ಹತ್ತು ದಿನಗಳಿಂದ ನಗರಾದ್ಯಂತ ಫುಟ್‌ಪಾತ್ ರೈಡಿಂಗ್, ಅಪ್ರಾಪ್ತರ ವಾಹನ ಚಾಲನೆ, ನೀರಿನ ಟ್ಯಾಂಕರ್, ನಂಬರ್ ಪ್ಲೇಟ್ ಮರೆ ಮಾಚುತ್ತಿರುವ ವಾಹನ ಸವಾರರನ್ನು ಪತ್ತೆ ಹಚ್ಚಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿದ ಸವಾರರ ಬಳಿ ಸ್ಥಳದಲ್ಲಿಯೇ ದಂಡ ವಸೂಲಿ ಮಾಡುತ್ತಿದ್ದಾರೆ.
ಪದೇಪದೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡುವಂತೆ ಕಳೆದ ತಿಂಗಳು ಬೆಂಗಳೂರು ಸಂಚಾರ ಇಲಾಖೆ ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಕೆಐಎ | 3 ಪ್ರತ್ಯೇಕ ಪ್ರಕರಣಗಳಲ್ಲಿ ₹6.8 ಕೋಟಿ ಮೌಲ್ಯದ 9.3 ಕೆಜಿ ಚಿನ್ನ ವಶ; 6 ಮಂದಿ ಬಂಧನ
ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ, ಅನೇಕರು ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವು ಜನ ಗಾಯಗೊಂಡಿದ್ದಾರೆ. ಹಾಗಾಗಿ, ಜನರು ಟ್ರಾಫಿಕ್ ನಿಯಮ ಪಾಲಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪೊಲೀಸರು ಮಾತ್ರವಲ್ಲದೆ, ಕೆಲವು ಕಾಲೇಜು ವಿದ್ಯಾರ್ಥಿಗಳು ಬೆಂಗಳೂರಿನ ಸಿಗ್ನಲ್ಗಳಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
“ವಾಹನಗಳ ಮಾಲೀಕರು ಅನೇಕ ಸಂದರ್ಭಗಳಲ್ಲಿ ದಂಡ ಪಾವತಿ ಮಾಡದೇ, ವಾಹನವನ್ನು ಮಾರಾಟ ಮಾಡಿದ್ದಾರೆ. ಹೀಗೆ ಮಾಡಬಾರದು. ಮುಂದಿನ ದಿನಗಳಲ್ಲಿ ದಂಡ ಪಾವತಿಸದೇ ಇದ್ದರೆ ಕಾನೂನಾತ್ಮಕವಾಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಲಾಗುತ್ತದೆ. ಇದೀಗ ವಾಹನ ಮಾರಾಟ ಮಾಡಿದವರಿಗೆ ದಂಡ ಪಾವತಿ ಮಾಡಲು ಕಾಲಾವಕಾಶ ನೀಡಲಾಗಿದೆ” ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.