404 ಸಹಾಯಕ ಎಂಜಿನಿಯರ್ಗಳ (ಎಇ) ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇಮಕಾತಿ ನಡೆಸಲು ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ (ಕೆಪಿಟಿಸಿಎಲ್) ಹೈಕೋರ್ಟ್ ನಿರ್ದೇಶಿಸಿ, ಮಧ್ಯಂತರ ಆದೇಶ ಹೊರಡಿಸಿಎ. ಈ ನೇಮಕಾತಿಯ ನ್ಯಾಯಾಲಯದ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆಂದು ನೇಮಕಾತಿಯಲ್ಲಿ ಉಲ್ಲೇಖಿಸಲು ಸೂಚನೆ ನೀಡಿದೆ.
2022ರ ಆಗಸ್ಟ್ 7ರಂದು ಕೆಪಿಟಿಸಿಎಲ್ನ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನಡೆದಿತ್ತು. ಆದರೆ, ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ನ ಖಾಸಗಿ ಕಾಲೇಜಿನಲ್ಲಿ ಅಭ್ಯರ್ಥಿಗಳು ಉತ್ತರ ನಕಲು ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಅಲ್ಲದೆ, ಅಕ್ರಮದಲ್ಲಿ ಭಾಗಿಯಾಗಿದ್ದ ಹಲವನ್ನು ಬಂಧಿಸಲಾಗಿತ್ತು.
ಇದೆಲ್ಲದರ ನಡುವೆ, 2023ರ ಫೆಬ್ರುವರಿ 4ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಪ್ರಕಟಿಸಿತು. ಆದರೆ, ಆ ಪಟ್ಟಿಯನ್ನು ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು. ರದ್ದತಿಯನ್ನು ಪ್ರಶ್ನಿಸಿ ಪಟ್ಟಿಯಲ್ಲಿ ಅರ್ಹತೆ ಪಡೆದಿದ್ದ ಅಭ್ಯರ್ಥಿಗಳು ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್, ಮತ್ತು ನ್ಯಾ. ಟಿ.ಜಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠವು. ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕ ನೇಮಕಾತಿ ಮಾಡಿಕೊಂಡು, ತಾತ್ಕಾಲಿಕ ನೇಮಕಾತಿ ಆದೇಶ ಪತ್ರ ನೀಡುವಂತೆ ಮಧ್ಯಂತರ ತೀರ್ಪು ನೀಡಿದೆ.
“ಈ ನೇಮಕಾತಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ದವಾಗಿರಬೇಕು. ಕೋರ್ಟ್ ತೀರ್ಪಿಗೆ ಅನುಗುಣವಾಗಿ ಸೇವಾ ಜೇಷ್ಠತೆ ಕಾಯ್ದುಕೊಳ್ಳಬೇಕು. ಒಂದು ವೇಳೆ, ಮೇಲ್ಮನವಿ ಪುರಸ್ಕೃತಗೊಂಡು ಅರ್ಜಿದಾರರು ಆಯ್ಕೆಗೊಂಡರೆ, ಅವರ ನೇಮಕಾತಿಯಲ್ಲಿ ಸೇವಾ ಹಿರಿತನ ಮತ್ತು ರೋಸ್ಟರ್ ಪಾಲಿಸಬೇಕು” ಎಂದು ಹೇಳಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿದೆ.
2023ರಲ್ಲಿ ಪ್ರಕಟವಾಗಿರುವ ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ – 313 ಮೂಲ ವೃಂದ, 91 ಕಲ್ಯಾಣ ಕರ್ನಾಟಕ ವೃಂದದ – ಒಟ್ಟು 202 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.