ಪಶ್ಚಿಮ ಬಂಗಾಳದಲ್ಲಿ ಮಹಿಳಾ ಬಂಧೀಖಾನೆಗೆ ಪುರುಷ ಸಿಬ್ಬಂದಿ ನಿಷೇಧ, ಕೈದಿಗಳನ್ನು ಜೈಲುಗಳಿಗೆ ಕಳುಹಿಸುವ ಮೊದಲು ಗರ್ಭಧಾರಣಾ ಪರೀಕ್ಷೆಗಳನ್ನು ನಡೆಸಬೇಕು ಎಂದು ಅಮಿಕಸ್ ಕ್ಯೂರಿ ಸಲಹೆ ನೀಡಿದ್ದಾರೆ
ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಬಂಧಿಯಾಗಿರುವ ಮಹಿಳಾ ಕೈದಿಗಳು ಗರ್ಭಿಣಿಯರಾಗಿ ಜನಿಸಿದ ಮಕ್ಕಳು ಜೈಲಿನೊಳಗೇ ಬೆಳೆಯುತ್ತಿರುವ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಅಮಿಕಸ್ ಕ್ಯೂರಿ ಸಲ್ಲಿಸಿದ ವರದಿ ದೇಶದ ಜೈಲುಗಳಲ್ಲಿ ಮಹಿಳೆಯರ ಸ್ಥಿತಿಗತಿಯ ಕಳವಳಕಾರಿ ಚಿತ್ರಣ ಮುಂದಿಟ್ಟಿದೆ.
ಜೈಲುಗಳಲ್ಲಿ ಮಹಿಳೆಯರ ಶೋಚನೀಯ ಸ್ಥಿತಿ
ಜೈಲುಗಳಲ್ಲಿ ಬಂಧಿಯಾಗಿರುವ ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದ್ದು, ಸುಮಾರು 196 ಮಕ್ಕಳು ಹೊರಜಗತ್ತನ್ನು ಕಾಣದೆ ರಾಜ್ಯದ ವಿವಿಧ ಬಂದೀಖಾನೆಗಳಲ್ಲಿ ಬೆಳೆಯುತ್ತಿವೆ ಎಂದು ಅಮಿಕಸ್ ಕ್ಯೂರಿ (ನಿರ್ದಿಷ್ಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನಿಷ್ಪಕ್ಷಪಾತ ಸಲಹೆಗಾರ) ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ. ಈ ವರದಿ ಜೈಲುಗಳಲ್ಲಿ ಮಹಿಳಾ ಕೈದಿಗಳು ಲೈಂಗಿಕ ದೌರ್ಜನ್ಯ ಎದುರಿಸುವ ಬಗ್ಗೆ ಗಂಭೀರವಾದ ಆತಂಕವನ್ನು ಸೃಷ್ಟಿಸಿದೆ.
ಜೈಲುಗಳ ಮಿತಿಯನ್ನು ಮೀರಿ ಕೈದಿಗಳನ್ನು ಕೂಡಿ ಹಾಕಿರುವುದನ್ನು ಅಧ್ಯಯನ ಮಾಡಲು 2018ರಲ್ಲಿ ನ್ಯಾಯಾಲಯದಿಂದ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ವಕೀಲ ತಪಸ್ ಕುಮಾರ್ ಭಾಂಜಾ ಅವರು ಗುರುವಾರ ನ್ಯಾಯಮೂರ್ತಿ ಟಿಎಸ್ ಸಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ತಮ್ಮ ವರದಿಯನ್ನು ಸಲ್ಲಿಸಿದ್ದು, ಮಹಿಳಾ ಕೈದಿಗಳ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮುಂದಿನ ಸೋಮವಾರ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ನಡೆಸುವ ಪೀಠ, ವರದಿಯ ಬಗ್ಗೆ ವಿಚಾರಣೆ ನಡೆಸಲಿದೆ. ವಿಚಾರಣೆಯ ಸಂದರ್ಭ ಸರ್ಕಾರಿ ವಕೀಲರೂ ಹಾಜರಿರಲಿದ್ದಾರೆ.
“ಅಮಿಕಸ್ ಕ್ಯೂರಿ ನ್ಯಾಯಾಲಯದ ಮುಂದೆ ಜೈಲುಗಳ ಸ್ಥಿತಿಗತಿಯ ವರದಿ ಇಟ್ಟಿದ್ದಾರೆ. ಅವರು ಕೆಲವು ಗಂಭೀರ ವಿಚಾರಗಳತ್ತ ಗಮನಸೆಳೆದಿದ್ದಾರೆ. ಮಹಿಳೆಯರು ಗರ್ಭಿಣಿಯರಾಗಿ ಸುಮಾರು 196 ಹಸುಗೂಸುಗಳು ರಾಜ್ಯದ ವಿಭಿನ್ನ ಜೈಲುಗಳಲ್ಲಿ ಬೆಳೆಯುತ್ತಿರುವುದು ಗಮನಕ್ಕೆ ಬಂದಿದೆ” ಎಂದು ಹೈಕೋರ್ಟ್ ತಿಳಿಸಿದೆ.
“ಅಲಿಪೋರ್ ಮಹಿಳಾ ಬಂಧೀಖಾನೆಗೆ ಭೇಟಿಯಾದಾಗ ಮಹಿಳಾ ಕೈದಿಯೊಬ್ಬರು ಗರ್ಭಿಣಿಯಾಗಿರುವುದು ಮತ್ತು 15 ಮಕ್ಕಳು ಜೈಲಿನಲ್ಲೇ ಜನಿಸಿರುವ ವಿವರ ದೊರೆತಿತ್ತು. ಹೀಗಾಗಿ ಮಹಿಳಾ ಬಂಧೀಖಾನೆಗಳಿಗೆ ಪುರುಷ ಸಿಬ್ಬಂದಿಗಳ ಪ್ರವೇಶ ನಿಷೇಧಿಸಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದೇನೆ” ಎಂದು ಈ ಬಗ್ಗೆ ಭಾಂಜಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಮಿಕಸ್ ಕ್ಯೂರಿ ಸೂಚಿಸಿದ ಸುಧಾರಣೆಗಳೇನು?
ಅಮಿಕಸ್ ಕ್ಯೂರಿ ವರದಿಯಲ್ಲಿ ಸಲಹೆ ನೀಡಿರುವ ಕೆಲವು ಮುಂಜಾಗರೂಕತಾ ಕ್ರಮಗಳ ಬಗ್ಗೆಯೂ ಕೋಲ್ಕತ್ತಾ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಟಿಎಸ್ ಸಿವಜ್ಞಾನಂ ವಿವರ ನೀಡಿದ್ದಾರೆ. “ಮಹಿಳೆಯರನ್ನು ಬಂಧಿಸಿಡಲಾಗಿರುವ ಬಂಧೀಖಾನೆಗಳಿಗೆ ಪುರುಷ ಸಿಬ್ಬಂದಿಗಳಿಗೆ ಪ್ರವೇಶ ನೀಡದಿರುವಂತಹ ಕೆಲವು ಸಲಹೆಗಳನ್ನು ವರದಿಯಲ್ಲಿ ನೀಡಲಾಗಿದ್ದು, ಅದನ್ನು ಪರಿಗಣಿಸಲಾಗಿದೆ. ಈ ಪ್ರತಿಯನ್ನು ಈಗಾಗಲೇ ಅಡ್ವೋಕೇಟ್ ಜನರಲ್ (ಕಿಶೋರ್ ದತ್ತಾ) ಕಚೇರಿಗೆ ಕಳುಹಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ. ಆದರೆ ಜೈಲುಗಳೊಳಗೆ ಮಹಿಳಾ ಕೈದಿಗಳು ಗರ್ಭಿಣಿಯಾಗಿರುವುದನ್ನು ಪರಿಗಣಿಸಲೇಬೇಕು. ಅಲ್ಲದೆ, ಬಂಧೀಖಾನೆಗಳಲ್ಲಿ ಮಕ್ಕಳು ಜನಿಸಿವೆ. ಈಗ 196 ಮಕ್ಕಳು ಪಶ್ಚಿಮ ಬಂಗಳಾದ ವಿಭಿನ್ನ ಜೈಲುಗಳಲ್ಲಿ ಬೆಳೆಯುತ್ತಿದ್ದಾರೆ. ಮಹಿಳಾ ಕೈದಿಗಳನ್ನು ಜೈಲಿಗೆ ಕಳುಹಿಸುವ ಮೊದಲೇ ಗರ್ಭಧಾರಣಾ ಪರೀಕ್ಷೆಯನ್ನು ನಡೆಸಬೇಕು ಎಂದೂ ವರದಿಯಲ್ಲಿ ಸಲಹೆ ನೀಡಲಾಗಿದೆ.
ಜಿಲ್ಲಾ ನ್ಯಾಯಾಧೀಶರು (ಅವರು ಸಂದರ್ಶಕರ ಮಂಡಳಿ ಅಧ್ಯಕ್ಷರು) ತಮ್ಮ ವ್ಯಾಪ್ತಿಯಲ್ಲಿರುವ ಜೈಲುಗಳಿಗೆ ಭೇಟಿ ನೀಡಿ ಎಷ್ಟು ಮಹಿಳಾ ಕೈದಿಗಳು ಜೈಲಿನೊಳಗೆ ಬಂಧಿಯಾಗಿರುವಾಗ ಗರ್ಭಿಣಿಯಾಗಿದ್ದಾರೆ ಎಂದು ತನಿಖೆ ನಡೆಸಲು ಸಲಹೆ ನೀಡಲಾಗಿದೆ.
ಜೊತೆಗೆ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೆ ಮಹಿಳಾ ಕೈದಿಗಳನ್ನು ಜೈಲುಗಳಿಗೆ ಕಳುಹಿಸುವ ಮೊದಲು ಗರ್ಭಧಾರಣಾ ಪರೀಕ್ಷೆಯನ್ನು ನಡೆಸುವಂತೆ ಅಗತ್ಯ ನಿರ್ದೇಶನಗಳನ್ನು ನೀಡುವ ಸಾಧ್ಯತೆಯಿದೆ. ಈ ಗರ್ಭಧಾರಣಾ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿ ಸಂಬಂಧಿತ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಬರಬೇಕು. ನ್ಯಾಯಾಲಯ ಈ ಬಗ್ಗೆ ಅಗತ್ಯ ಆದೇಶ/ ನಿರ್ದೇಶನ ಕೊಡಬಹುದು.