ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇದಿನೆ ಹಿಟ್ ಆ್ಯಂಡ್ ರನ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇದೀಗ ಮಹಿಳೆಯೊಬ್ಬರು ಬಲಿಯಾದ ಘಟನೆ ನಗರದ ಮಹಾಲಕ್ಷ್ಮೀ ಲೇಔಟ್‌ನ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.
ಆಶಾರಾಣಿ (62) ಮೃತ ದುರ್ದೈವಿ. ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತ ಆಶಾ ಅವರು ಶ್ರೀರಂಗಪಟ್ಟಣಕ್ಕೆ ತೆರಳಲು ಬೆಳಗಿನ ಜಾವ 5:40ರ ಸುಮಾರಿಗೆ ಮನೆ ಬಿಟ್ಟಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಸುಮಾರು ಆರು ಗಂಟೆಗೆ ಅಪಘಾತ ಸಂಭವಿಸಿದೆ. ನಸುಕಿನ ವೇಳೆ ಬೆಳಕು ಕಡಿಮೆ ಇದ್ದ ಕಾರಣ ಯಾವ ವಾಹನ ಡಿಕ್ಕಿ ಹೊಡೆದಿದೆ ಎಂಬ ಬಗ್ಗೆ ಪತ್ತೆಯಾಗಿಲ್ಲ.
ಇದೀಗ, ಪೊಲೀಸರು ಆ ಭಾಗದಲ್ಲಿ ಆ ಹೊತ್ತಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಹಿಟ್ ಆ್ಯಂಡ್ ರನ್ ಮಾಡಿ ಹೋದ ವಾಹನವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 50,000ಕ್ಕೂ ಅಧಿಕ ದಂಡ ಬಾಕಿ ಇದ್ದರೆ, ಮನೆ ಬಾಗಿಲಿಗೆ ಬರ್ತಾರೆ ಸಂಚಾರ ಪೊಲೀಸರು!
ಬೆಂಗಳೂರಿನಲ್ಲಿ ಕಳೆದ ಕೆಲವು ದಿನದಿಂದ ಹಿಟ್ ಆ್ಯಂಡ್ ರನ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಅದರಲ್ಲೂ ರಾತ್ರಿಯ ಸಮಯ ಮತ್ತು ಮುಂಜಾನೆ ಸಮಯ ವಾಹನಗಳು ಅತಿವೇಗವಾಗಿ ಮತ್ತು ವಿವೇಚನೆ ಇಲ್ಲದೆ ಸಾಗಿ ಜನರ ಜೀವವನ್ನು ಬಲಿ ಪಡೆಯುತ್ತಿವೆ.