ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಶನಿವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದೆ. ಅವರನ್ನು ಚಿಕಿತ್ಸೆಗಾಗಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿಥುನ್ ಚಕ್ರವರ್ತಿ ಅವರಿಗೆ ಅಸ್ವಸ್ಥತೆ ಉಂಟಾಗಿದೆ. ಹಾಗಾಗಿ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಮಿಥುನ್ ಚಕ್ರವರ್ತಿ ಅವರ ಆರೋಗ್ಯದ ಬಗ್ಗೆ ಸೋಶೀಯಲ್ ಮೀಡಿಯಾದಲ್ಲಿ ಇದೀಗ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಚಕ್ರವರ್ತಿ ಕುಟುಂಬದವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಲ್ಲದೇ, ಆಸ್ಪತ್ರೆ ಕಡೆಯಿಂದಲೂ ಯಾವುದೇ ಸುತ್ತೋಲೆ ಬಂದಿಲ್ಲ.
ಮಿಥುನ್ ಚಕ್ರವರ್ತಿ ಹಿನ್ನೆಲೆ
ಮಿಥುನ್ ಚಕ್ರವರ್ತಿ ಅವರು 1950ರ ಜೂನ್ 16ರಂದು ಜನಿಸಿದರು. ಇವರು ನಟ, ನಿರ್ಮಾಪಕ ಮತ್ತು ರಾಜಕಾರಣಿ. ಇವರು ಪ್ರಧಾನವಾಗಿ ಹಿಂದಿ ಮತ್ತು ಬಂಗಾಳಿ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮಾಜಿ ರಾಜ್ಯಸಭಾ ಸಂಸದರು. ಅತ್ಯುತ್ತಮ ನಟನೆಗಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಿಥುನ್ ಚಕ್ರವರ್ತಿ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.
ಮಿಥುನ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರು 1976ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರದಲ್ಲೇ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದರು. ಅವರು ಹೀರೋ ಆಗಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನೂರಾರು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಿಟ್ ಆ್ಯಂಡ್ ರನ್ಗೆ 62 ವರ್ಷದ ವೃದ್ಧೆ ಬಲಿ
ಚಕ್ರವರ್ತಿ ಅವರು 1976ರಲ್ಲಿ ಮೃಣಾಲ್ ಸೇನ್ ಅವರ ಕಲಾತ್ಮಕ ಚಲನಚಿತ್ರ ಮೃಗಯಾದೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಸುರಕ್ಷ , ಹಮ್ ಪಾಂಚ್, ಸಾಹಸ್, ವಾರ್ದತ್, ಶೌಕೀನ್, ವಾಂಟೆಡ್, ಬಾಕ್ಸರ್, ಕಸಮ್ ಪೈಡಾ ಕರ್ನೆ ವಾಲೆ ಕಿ, ಪ್ಯಾರ್ ಜುಕ್ತಾ ನಹೀಂ, ಗುಲಾಮಿ, ಸ್ವರಾಗ್ ಸೆವಾಲಾ ಮುಂತಾದ ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.