2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಕಪ್ಪು ಹಣವನ್ನು ಹೊರಗೆಳೆಯುವುದಾಗಿ, ಅದನ್ನು ದೇಶದ ಜನತೆಯ ಖಾತೆಗೆ ವರ್ಗಾಯಿಸುವುದಾಗಿ ಭಾರೀ ಪ್ರಚಾರ ಪಡೆದಿತ್ತು. ಕೇವಲ ಹತ್ತು ವರ್ಷಗಳ ಅಂತರದಲ್ಲಿ ಈಗ ಅದೇ ಕಪ್ಪು ಹಣ ಚುನಾವಣಾ ಬಾಂಡ್‌ಗಳ ರೂಪದಲ್ಲಿ; ಕಾರ್ಪೊರೇಟ್ ಕುಳಗಳು ನೀಡುವ ದೇಣಿಗೆಯ ನೆಪದಲ್ಲಿ ಬಿಜೆಪಿಯ ಖಜಾನೆ ತುಂಬುತ್ತಿದೆ. ಅದೇ ಹಣ ಚುನಾವಣೆಗಳನ್ನು ಗೆಲ್ಲಲು ಬಳಕೆಯಾಗುತ್ತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಕಲುಷಿತಗೊಳಿಸುತ್ತಿದೆ. ದೇಶದ ಪ್ರಜೆಗಳು ಇದನ್ನು ಪ್ರಶ್ನಿಸಬಾರದೇ?
ಭಾರತೀಯ ಜನತಾ ಪಕ್ಷವು ಮೊನ್ನೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕಪರಿಶೋಧನಾ ವರದಿಯಲ್ಲಿ, 2022-23ರ ಹಣಕಾಸು ವರ್ಷದಲ್ಲಿ ಚುನಾವಣಾ ಬಾಂಡ್‌ಗಳಿಂದ ಪಕ್ಷಕ್ಕೆ ₹2,360.84 ಕೋಟಿ ದೇಣಿಗೆ ಹರಿದು ಬಂದಿದೆ ಎಂದು ಹೇಳಿಕೊಂಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಚುನಾವಣಾ ಬಾಂಡ್‌ಗಳಿಂದ ಕಾಂಗ್ರೆಸ್ ಸಂಗ್ರಹಿಸಿದ ₹171.01 ಕೋಟಿಗೆ ಹೋಲಿಸಿದರೆ, ಬಿಜೆಪಿ ಸಂಗ್ರಹಿಸಿರುವುದು ₹1,294.14 ಕೋಟಿಗಳು ಎಂದು ಅಧಿಕೃತ ದಾಖಲೆ ಬಿಡುಗಡೆ ಮಾಡಿದೆ.
2024ರ ಜ. 2ರಿಂದ ಜ. 11ರವರೆಗೆ, ಕೇವಲ 9 ದಿನಗಳ ಅಂತರದಲ್ಲಿ, ಚುನಾವಣಾ ಬಾಂಡ್ ಮಾರಾಟದ 30ನೇ ಬ್ಯಾಚ್‌ನಲ್ಲಿ 570 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ. ಇದು, ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ, ಚುನಾವಣಾ ಬಾಂಡ್‌ಗಳು ಮುಖ್ಯವಾಗಿ ಆಡಳಿತ ಪಕ್ಷಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತವೆ ಎಂಬ ವಿರೋಧ ಪಕ್ಷಗಳ ದೂರಿಗೆ ಪುಷ್ಟಿ ನೀಡಿದಂತಾಗಿದೆ.
ರಾಜಕೀಯ ಪಕ್ಷಗಳಿಗೆ ಅಕ್ರಮ ಹಣ ಹರಿದು ಬರುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. 70ರ ದಶಕದಲ್ಲಿ ಲಿಕ್ಕರ್ ಲಾಬಿ ಪಕ್ಷಗಳನ್ನು ಹಿಡಿತದಲ್ಲಿಟ್ಟುಕೊಂಡು ಆಡಳಿತವನ್ನು ನಿಯಂತ್ರಿಸುತ್ತಿತ್ತು. ಆನಂತರ ಶಿಕ್ಷಣ ಲಾಬಿ, ರಿಯಲ್ ಎಸ್ಟೇಟ್ ಲಾಬಿಗಳು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದವು. ಈ ಲಾಬಿಗಳು ಸರ್ಕಾರಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಒಂದು ಹಂತದವರೆಗೆ ಮಾತ್ರ ಸಾಧ್ಯವಾಗಿತ್ತು. ಹಾಗೆಯೇ, ದೇಣಿಗೆ ಕೊಡುವ ಧಣಿಗಳು ಮತ್ತು ಬೇಡುವ ರಾಜಕೀಯ ಪಕ್ಷಗಳ ನಡುವಿನ ಅನೈತಿಕ ಸಂಬಂಧದಿಂದಾಗಿ, ದಿನದಿಂದ ದಿನಕ್ಕೆ ರಾಜಕಾರಣ ಕೂಡ ಕಳೆಗುಂದತೊಡಗಿತು.
ಇತ್ತೀಚಿನ ದಿನಗಳಲ್ಲಿ ಇದೆಲ್ಲವನ್ನು ಮೀರಿಸುವಂತೆ, ಕಂಡೂ ಕಾಣದಂತಹ ಕಾರ್ಪೊರೇಟ್ ಲಾಬಿ ಚಲಾವಣೆಗೆ ಬಂದಿದೆ. ದೇಶದ ಆರ್ಥಿಕ, ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಈ ಲಾಬಿಗೆ ಕೇಂದ್ರದ ಬಿಜೆಪಿ ಸರ್ಕಾರ ಸುಲಭದ ತುತ್ತಾಗಿದೆ. ಕೇವಲ ಐದು ವರ್ಷಗಳ ಅಂತರದಲ್ಲಿ, ಇದೇ ವಲಯದಿಂದ ಬಂದ 2,360 ಕೋಟಿ ರೂಪಾಯಿಗಳನ್ನು ದೇಣಿಗೆಯ ರೂಪದಲ್ಲಿ ಪಡೆದ ಬಿಜೆಪಿ ಕಪ್ಪು ಹಣವನ್ನು ಬಿಳಿ ಮಾಡಿದೆ; ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದೆ.
ಆದರೆ, ಪ್ರಧಾನಿ ಮೋದಿಯವರು ಭ್ರಷ್ಟರಲ್ಲ, ಅವರಿಗೆ ಹಣದ ಅಗತ್ಯವಿಲ್ಲ, ಅಧಿಕಾರದ ವ್ಯಾಮೋಹವಿಲ್ಲ ಎಂದು ಬಿಜೆಪಿ ಹೇಳುತ್ತಲೇ ಬಂದಿದೆ. ರಾಜಕೀಯ ಪಕ್ಷಗಳಿಗೆ ಅಕ್ರಮವಾಗಿ ಹರಿದು ಬರುವ ದೇಣಿಗೆಗೆ ಕಡಿವಾಣ ಹಾಕಲು, 2018ರಲ್ಲಿ ಕಾನೂನು ಬಾಹಿರವಾಗಿ ಹಣ ವರ್ಗಾಯಿಸುವ ಪ್ರಕ್ರಿಯೆಯನ್ನು ‘ಚುನಾವಣಾ ಬಾಂಡ್’ಗಳನ್ನಾಗಿ ಪರಿವರ್ತಿಸಲಾಗಿದೆ. ಆ ನಂತರ, ಅವರು ಅಂದುಕೊಂಡಂತೆ ಚುನಾವಣಾ ಬಾಂಡ್‌ಗಳಲ್ಲಿ ಶೇ. 70ಕ್ಕಿಂತಲೂ ಅಧಿಕ ದೇಣಿಗೆ ಭಾರತೀಯ ಜನತಾ ಪಕ್ಷಕ್ಕೆ ಹರಿದು ಬಂದಿದೆ.
‘ನಾವು ನೇರವಾಗಿ ಪಡೆಯುತ್ತಿದ್ದೆವು, ಇವರು ಹಿಂಬಾಗಿಲಿನಿಂದ ಪಡೆಯುತ್ತಿದ್ದಾರೆ’ ಎಂದು ವಿರೋಧ ಪಕ್ಷಗಳು ಬಾಂಡ್‌ನ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಅರ್ಜಿಯಲ್ಲಿ ಪ್ರಮುಖವಾಗಿ ಎರಡು ವಿಚಾರಗಳ ಬಗ್ಗೆ ಸುಪ್ರೀಂ ಕೋರ್ಟಿನ ಗಮನ ಸೆಳೆಯಲಾಗಿದೆ. ಒಂದು, ಅನಾಮಧೇಯವಾಗಿ ದೇಣಿಗೆ ನೀಡುವುದಕ್ಕೆ ಇರುವ ಅವಕಾಶ. ಎರಡು, ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯ ಬಗ್ಗೆ ಮಾಹಿತಿ ಪಡೆಯಲು ಪ್ರಜೆಗಳು ಹೊಂದಿರುವ ಹಕ್ಕಿನ ಉಲ್ಲಂಘನೆ.
ಕಳೆದ ನವೆಂಬರ್‌ನಲ್ಲಿ ಅರ್ಜಿ ಪರಿಶೀಲಿಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನಪೀಠ, ”ದೇಶದ ಚುನಾವಣಾ ಬಾಂಡ್ ಯೋಜನೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ. ಈ ಯೋಜನೆಯು ಕಾರ್ಪೊರೇಟ್ ಸಂಸ್ಥೆಗಳಿಗೆ ದೊಡ್ಡ ಮೊತ್ತದ ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಅನುಮತಿಸುತ್ತದೆ ಮತ್ತು ದಾನಿಗಳ ಗುರುತನ್ನು ಗೌಪ್ಯವಾಗಿಡುತ್ತದೆ. ಇದು ವ್ಯವಸ್ಥೆಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ” ಎಂದು ಕಳವಳ ವ್ಯಕ್ತಪಡಿಸಿದೆ.
ವಿರೋಧ ಪಕ್ಷಗಳಿಗೆ ಯಾರು ಹಣ ನೀಡಿದ್ದಾರೆ ಎಂದು ತಿಳಿಯುವ ಅವಕಾಶ ಮತ್ತು ಅನುಕೂಲ ಆಡಳಿತ ಪಕ್ಷಕ್ಕಿದೆ. ಆದರೆ ಆಡಳಿತ ಪಕ್ಷಕ್ಕೆ ಯಾರು ದೇಣಿಗೆ ನೀಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ವಿರೋಧ ಪಕ್ಷಗಳಿಗೆ ಯಾವುದೇ ಮಾರ್ಗವಿಲ್ಲ. ಆಡಳಿತ ಪಕ್ಷ ತನಗಿರುವ ಅನುಕೂಲವನ್ನು ಬಳಸಿಕೊಂಡು ವಿರೋಧ ಪಕ್ಷಗಳಿಗೆ ದೇಣಿಗೆ ಸಿಗದಂತೆ ಮಾಡಬಹುದು. ಈ ಎಲ್ಲ ಕಾರಣಗಳಿಂದಾಗಿ ಚುನಾವಣಾ ಬಾಂಡ್ ವ್ಯವಸ್ಥೆಯು ರಾಜಕೀಯ ಪಕ್ಷಗಳ ನಡುವೆ ಅಸಮತೋಲನ ಸೃಷ್ಟಿಸುತ್ತದೆ. ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುತ್ತದೆ.
ಚುನಾವಣಾ ಬಾಂಡ್‌ಗಳ ಬಗೆಗಿನ ಸುಪ್ರೀಂ ಕೋರ್ಟ್ ನಿಲುವಿಗೆ ಹಾಗೂ ವಿರೋಧ ಪಕ್ಷಗಳ ಅನುಮಾನಕ್ಕೆ ಪುಷ್ಟಿ ನೀಡುವಂತೆ, ಮೊನ್ನೆ ಭಾರತೀಯ ಜನತಾ ಪಕ್ಷ ಚುನಾವಣಾ ಆಯೋಗಕ್ಕೆ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸಿದೆ. ಅದು ಬಿಜೆಪಿಯ ಬಂಡವಾಳವನ್ನು ಬಯಲು ಮಾಡುತ್ತಿದೆ.
2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಕಪ್ಪು ಹಣವನ್ನು ಹೊರಗೆಳೆಯುವುದಾಗಿ, ಅದನ್ನು ದೇಶದ ಜನತೆಯ ಖಾತೆಗೆ ವರ್ಗಾಯಿಸುವುದಾಗಿ ಭಾರೀ ಪ್ರಚಾರ ಪಡೆದಿತ್ತು. ಕೇವಲ ಹತ್ತು ವರ್ಷಗಳ ಅಂತರದಲ್ಲಿ ಈಗ ಅದೇ ಕಪ್ಪು ಹಣ ಚುನಾವಣಾ ಬಾಂಡ್‌ಗಳ ರೂಪದಲ್ಲಿ; ಕಾರ್ಪೊರೇಟ್ ಕುಳಗಳು ನೀಡುವ ದೇಣಿಗೆಯ ನೆಪದಲ್ಲಿ ಬಿಜೆಪಿಯ ಖಜಾನೆ ತುಂಬುತ್ತಿದೆ. ಅದೇ ಹಣ ಚುನಾವಣೆಗಳನ್ನು ಗೆಲ್ಲಲು ಬಳಕೆಯಾಗುತ್ತಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಕಲುಷಿತಗೊಳಿಸುತ್ತಿದೆ. ದೇಶದ ಪ್ರಜೆಗಳು ಇದನ್ನು ಪ್ರಶ್ನಿಸಬಾರದೇ?