ಗ್ರಂಥಾಲಯಗಳ ಉಳಿವಿಗಾಗಿ ಚಳವಳಿ, ಹೋರಾಟ, ಸಂಘಟನೆ, ಸಮಾವೇಶಗಳು ಅತಿಮುಖ್ಯ

Date:

Advertisements
ಬಾರುಗಳು ಹೆಚ್ಚಾಗುತ್ತಾ, ಅದರ ಅಲಂಕಾರ ವೈಭವೋಪೇತವಾಗುತ್ತಿರುವ ಸಂದರ್ಭದಲ್ಲಿ; ಗ್ರಂಥಾಲಯಗಳು ಭೂತಬಂಗಲೆಗಳ ರೀತಿಯಲ್ಲಿ ಅದೃಶ್ಯವಾಗುತ್ತಿರುವ ಸಮಯದಲ್ಲಿ; ಗ್ರಂಥಾಲಯಗಳ ಉಳಿವಿಗಾಗಿ ಚಳವಳಿ, ಹೋರಾಟ, ಸಂಘಟನೆ, ಸಮಾವೇಶಗಳು ಅತಿಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ಪ್ರಗತಿಪರ ಮತ್ತು ಸಮಾಜಮುಖಿ ಸಂಘಟನೆಗಳು ಒಟ್ಟಾಗಿ ಬೆಂಗಳೂರಿನಲ್ಲಿ ಸಮಾವೇಶ ಏರ್ಪಡಿಸಿವೆ. ಬಿಡುವಿದ್ದವರು ಭಾಗವಹಿಸಬಹುದು…

“ಭಾರತ ದೇಶದ ಜನರು ದೇವಾಲಯಗಳಿಗಿಂತ ಗ್ರಂಥಾಲಯಗಳ ಮಹತ್ವ ಅರಿತು ಅದರ ಪ್ರವೇಶ ಪಡೆದಾಗ ಮಾತ್ರ ಜಾಗೃತಿ ಹೊಂದಿದ ಪ್ರಬುದ್ಧ ಸಮಾಜ ನಿರ್ಮಾಣವಾಗಲು ಸಾಧ್ಯ” ಎಂಬರ್ಥದ ಮಾತುಗಳನ್ನು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಏಕೆಂದರೆ ಅವರ ಅತ್ಯದ್ಭುತ ಜ್ಞಾನದ ಒಡಲಿನಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸಿವೆ.

ಜಗತ್ತಿನ ಕಾರ್ಮಿಕ ಶೋಷಣೆಯ ವಿರುದ್ಧ ಧ್ವನಿಯಾಗಿ ಸೈದ್ಧಾಂತಿಕ ಬದ್ಧತೆಯನ್ನು ವಿವರಿಸಿದ ಕಾರ್ಲ್ ಮಾರ್ಕ್ಸ್ ಅವರ ಚಿಂತನೆಗಳು ಟಿಸಿಲೊಡೆದು ಹೆಮ್ಮರವಾಗಿದ್ದು ಗ್ರಂಥಾಲಯಗಳಲ್ಲಿ. ಅಷ್ಟೇ ಏಕೆ ಭಾರತದ ಎಲ್ಲಾ ಕ್ಷೇತ್ರಗಳ ಬಹುತೇಕ ಜ್ಞಾನ ವಿಜ್ಞಾನದ ಅತ್ಯುನ್ನತ ಸಾಧಕರು ಬೆಳೆದು ಬರಲು ಆಗಿನ ಕಾಲದ ಗ್ರಂಥಾಲಯಗಳೇ ಆಶ್ರಯ ತಾಣಗಳು.

ಗ್ರಂಥಾಲಯಗಳ‌ ಓದಿ‌ನಿಂದ ಮೂಡುವ ಅರಿವು ಆಳವಾದ, ದೀರ್ಘವಾದ ಮತ್ತು ಗಟ್ಟಿಯಾದ ಚಿಂತನೆಗಳನ್ನು ಒಳಗೊಂಡಿರುತ್ತದೆ. ಅದಕ್ಕೆ ಕೇವಲ ಪುಸ್ತಕಗಳು ಅಥವಾ ಓದು ಮಾತ್ರ ಕಾರಣವಲ್ಲ. ಗ್ರಂಥಾಲಯಗಳ ವಾತಾವರಣ, ಅಲ್ಲಿ ಒಟ್ಟಾಗಿ ಸಂಗ್ರಹವಾಗಿರುವ ಮಾಹಿತಿಯ ಕಣಜಗಳು ಮತ್ತು ಅದು ಸೃಷ್ಟಿಸುವ ಏಕಾಗ್ರತೆ ನಮ್ಮನ್ನು ಹೊಸ ಕ್ರಿಯಾತ್ಮಕ ಲೋಕಕ್ಕೆ ಕೊಂಡೊಯ್ಯುತ್ತದೆ.

Advertisements

ಬದುಕಿನ ಅನುಭವಗಳು ಮತ್ತು ಶೈಕ್ಷಣಿಕ ವಿದ್ಯಾರ್ಹತೆಗಳು ಜ್ಞಾನದ ಎರಡು ಧ್ರುವಗಳಾದರೆ ಗ್ರಂಥಾಲಯಗಳು ಅವುಗಳ ನಡುವಿನ ಸಮನ್ವಯದ ಕೊಂಡಿಯಂತೆ ಕೆಲಸ ಮಾಡುತ್ತದೆ. ಜೊತೆಗೆ ಸಾಮಾನ್ಯವಾಗಿ ಇಲ್ಲಿ ಯಾವುದೇ ಒತ್ತಡದ ಪರಿಸ್ಥಿತಿ ಇರುವುದಿಲ್ಲ. ಕೇವಲ ಆಸಕ್ತಿಯ ಸಹಜ ಕುತೂಹಲ ಮಾತ್ರ ಇರುತ್ತದೆ.

ಬದಲಾವಣೆ ಜಗದ ನಿಯಮ ನಿಜ, ಆದರೆ ಬದಲಾವಣೆಯ ದಿಕ್ಕು ಬಹಳ ಮುಖ್ಯವಾಗುತ್ತದೆ. ಅದು ಪ್ರಗತಿಪರವೇ ಅಥವಾ ವಿನಾಶವೇ ಎಂಬುದು ನಮ್ಮ ವರ್ತಮಾನ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ. ಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಗ್ರಂಥಾಲಯ ಸಂಸ್ಕೃತಿ ವಿದ್ಯಾವಂತ ವರ್ಗದ ಬದುಕಿನ ಭಾಗವಾಗಿತ್ತು. ಸರ್ಕಾರಿ ಸಾರ್ವಜನಿಕ ಗ್ರಂಥಾಲಯಗಳು ಮಾತ್ರವಲ್ಲದೆ ಖಾಸಗಿ ಗ್ರಂಥಾಲಯಗಳು ಸಹ ಅಸ್ತಿತ್ವದಲ್ಲಿದ್ದವು. ಪುಸ್ತಕಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಈಗ ನಮ್ಮ ಆಶಯದ ಬದಲಾವಣೆ ಅದೇ ಓದುವ ಸಂಸ್ಕೃತಿ ಡಿಜಿಟಲ್ ರೂಪದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರಬೇಕಿತ್ತು. ಆದರೆ ಇಂದು ಡಿಜಿಟಲ್ ಮಾದರಿಯ ಸಮೂಹ ಸಂಪರ್ಕ ಮಾಧ್ಯಮ ಬಹುತೇಕ ಯುವಜನತೆಯ ಮನರಂಜನಾ ಉದ್ಯಮವಾಗಿ, ಸಂಪರ್ಕ ಸಾಧನವಾಗಿ, ಮಾಹಿತಿಯ ಕಣಜವಾಗಿ ಮಾತ್ರ ಉಪಯೋಗಿಸಲ್ಪಡುತ್ತಿದೆ. ಈಗ ಮಾಹಿತಿಯೇ ಜ್ಞಾನ ಎಂಬಲ್ಲಿಗೆ ಜನರ ಭಾವನೆಗಳು ಸೀಮಿತವಾಗಿದೆ. ಅದಕ್ಕೆ ಕಾರಣ ಜಾಗತೀಕರಣದ ಪರಿಣಾಮ ಗ್ರಾಹಕ ಸಂಸ್ಕೃತಿ ಬೃಹತ್ತಾಗಿ ಬೆಳೆದು ಎಲ್ಲಾ ಮನುಷ್ಯರು ನಾಗರಿಕರು ಎಂಬುದನ್ನು ಮರೆತು ಕೊಳ್ಳುಬಾಕ ಸಂಸ್ಕೃತಿಯ ಬಲೆಯೊಳಗೆ ಕಾರ್ಪೊರೇಟ್ ಸಂಸ್ಥೆಗಳು ಬಂಧಿಸಿದ್ದಾರೆ.

ಗ್ರಂಥಾಲಯ2

ಗ್ರಂಥಾಲಯ ಸಂಸ್ಕೃತಿಯ ನಾಶದಲ್ಲಿ ಸರ್ಕಾರಗಳು ಸಹ ಬಹುಮುಖ್ಯ ಪಾತ್ರವನ್ನು ವಹಿಸುತ್ತಿವೆ. ಆರ್ಥಿಕ ಕೇಂದ್ರಿತ ಅಭಿವೃದ್ಧಿಯ ಮಾನದಂಡದಲ್ಲಿ ಗ್ರಂಥಾಲಯ ಇಲಾಖೆಯನ್ನು ಅನುತ್ಪಾದಕ ಕ್ಷೇತ್ರ ಎಂದೇ ತಪ್ಪಾಗಿ ಅರ್ಥೈಸಲಾಗಿದೆ. ಜೊತೆಗೆ ಅದರ ವಿರುದ್ಧವಾಗಿ ಬಾರು ಸಂಸ್ಕೃತಿಯನ್ನು ವ್ಯಾಪಕವಾಗಿ ಹರಡುತ್ತಿದೆ. ಇದು ಯಾವ ಹಂತ ತಲುಪಿದೆ ಎಂದರೆ ಜನಸಾಮಾನ್ಯರು ಸರ್ಕಾರ ನಡೆಯುವುದೇ ಮದ್ಯಪಾನದ ಮಾರಾಟ ತೆರಿಗೆಯಿಂದ ಎಂಬ ಭ್ರಮೆಗೆ ಒಳಗಾಗಿದ್ದಾರೆ.

ಆರ್ಥಿಕ ಕೇಂದ್ರಿತ ಅಭಿವೃದ್ಧಿಯ ಮಾನದಂಡಗಳನ್ನು ಅಳೆಯುವ ಮಾಪನಗಳೇ ಮದ್ಯದ ಅಮಲಿಗೆ ಒಳಗಾದರೆ ಮನುಷ್ಯ ಜನಾಂಗದ ವಿನಾಶದ ಬಾಗಿಲುಗಳು ತೆರೆಯುತ್ತಿವೆ ಎಂದೇ ಅರ್ಥ. ಈಗ ಸಾಗುತ್ತಿರುವುದು ಇದೇ ಹಾದಿಯಲ್ಲಿ. ಗಾಳಿ ನೀರು ಆಹಾರ ಸೇರಿ ಪರಿಸರ ಸಂಪೂರ್ಣ ಮಾಲಿನ್ಯವಾಗಿದೆ. ಅದರ ಪರಿಣಾಮ ಮಾನವೀಯ ಮೌಲ್ಯಗಳು ಸಹ ವ್ಯಾಪಾರೀಕರಣಗೊಂಡಿವೆ. ಅದರಿಂದಾಗಿ‌ ಗ್ರಂಥಾಲಯ ಸಂಸ್ಕೃತಿ ಹಿನ್ನೆಲೆಗೆ ಸರಿದು ಬಾರು ಸಂಸ್ಕೃತಿ, ಮಾಲು ಸಂಸ್ಕೃತಿ, ಡಾಬಾ ಸಂಸ್ಕೃತಿ, ಯೂಟ್ಯೂಬ್ ಸಂಸ್ಕೃತಿ ನಮ್ಮನ್ನು ಆವರಿಸಿದೆ.

ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಈಗಲೂ ‌ಸುಸಜ್ಜಿತ ಡಿಜಿಟಲ್ ಗ್ರಂಥಾಲಯಗಳು ವ್ಯಾಪಕವಾಗಿ ಹರಡಿವೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ತಮ್ಮ ಆಸಕ್ತಿಗೆ ಅನುಗುಣವಾಗಿ ಓದುತ್ತಾರೆ. ಆ ಓದು ಮನುಷ್ಯನನ್ನು ಒಂದಷ್ಟು ನಾಗರಿಕವಾಗಿರಲು ಪ್ರೇರೇಪಿಸುತ್ತದೆ.

ಆದರೆ ನಮ್ಮ ದೇಶದಲ್ಲಿ ಓದು ಕೇವಲ ಉದ್ಯೋಗಕ್ಕಾಗಿ ಅಥವಾ ಸಮಯ ಕೊಲ್ಲಲು ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಇದರಿಂದಾಗಿಯೇ ಬಹುತೇಕ ಸೀಡ್ ಲೆಸ್ ಯುವಜನಾಂಗ ಸೃಷ್ಟಿಯಾಗುತ್ತಿದೆ. ಪ್ರಶ್ನಿಸುವ ಮನೋಭಾವವೇ ಇಲ್ಲವಾಗಿದೆ. ಅದಕ್ಕೆ ಕಾರಣ ನಮ್ಮ ಯುವಜನತೆಯ ಅರಿವು ಕೇವಲ ಟಿವಿ ಸಿನಿಮಾ ಮುಂತಾದ ಮನರಂಜನಾ ಉದ್ಯಮದಿಂದ ಬೆಳೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.

ಈಗ ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಮನುಷ್ಯರ ದೇಹ ಮತ್ತು ಮನಸ್ಸುಗಳ ಬೆಳವಣಿಗೆ ಮತ್ತು ನಿಯಂತ್ರಣ ನಿಜವಾಗಿ ಸಾಧ್ಯವಾಗುವುದು ಅವರ ಅರಿವಿನ ಆಳದ ಮೇಲೆ. ಅದು ಸಾಧ್ಯವಾಗಲು ಗ್ರಂಥಾಲಯಗಳ ಪಾತ್ರ ಸಹ ಬಹುಮುಖ್ಯವಾದುದು.

ಸರ್ಕಾರಗಳು ಕನಿಷ್ಠ ಪ್ರತಿ ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಒಂದೊಂದು ಸುಸಜ್ಜಿತ ಗ್ರಂಥಾಲಯಗಳ ಸ್ಥಾಪಿಸುವುದು ಮಾತ್ರವಲ್ಲದೆ ಅದನ್ನು ನಿರ್ವಹಿಸಲು ಹೆಚ್ಚು ಜವಾಬ್ದಾರಿಯುತ ವ್ಯಕ್ತಿಗಳನ್ನು ನೇಮಿಸಬೇಕು ಮತ್ತು ಗ್ರಂಥಾಲಯಗಳ ಒಳಗಿನ ಪ್ರವೇಶಕ್ಕೆ ಉಚಿತ ಉಪಾಹಾರ ಮತ್ತು ಇತರ ಆಕರ್ಷಕ ಯೋಜನೆಗಳನ್ನು ರೂಪಿಸಬೇಕು. ಪ್ರಾರಂಭದಲ್ಲಿ ಇದು ಸ್ವಲ್ಪ ನಿರ್ಲಕ್ಷ್ಯಕ್ಕೆ ಒಳಗಾದರು ಬದಲಾಗುತ್ತಿರುವ ಒತ್ತಡದ ಬದುಕಿನಲ್ಲಿ ಮುಂದೊಮ್ಮೆ ಗ್ರಂಥಾಲಯಗಳು ಅನಿವಾರ್ಯ ಧ್ಯಾನ ಮತ್ತು ಜ್ಞಾನ ಕೇಂದ್ರಗಳಾಗುವ ಎಲ್ಲಾ ಸಾಧ್ಯತೆಗಳಿವೆ.

ಇದನ್ನು ಓದಿದ್ದೀರಾ?: ಉನ್ನತ ಶಿಕ್ಷಣದಲ್ಲಿ ಸಾಂಸ್ಥಿಕ ಹತ್ಯೆಗಳಿಗೆ ಕೊನೆ ಎಂದು?

ಆದ್ದರಿಂದ ಬಾರುಗಳು ಹೆಚ್ಚಾಗುತ್ತಾ, ಅದರ ಅಲಂಕಾರ ವೈಭವೋಪೇತವಾಗುತ್ತಿರುವ ಸಂದರ್ಭದಲ್ಲಿ; ಗ್ರಂಥಾಲಯಗಳು ಭೂತಬಂಗಲೆಗಳ ರೀತಿಯಲ್ಲಿ ಅದೃಶ್ಯವಾಗುತ್ತಿರುವ ಸಮಯದಲ್ಲಿ; ಗ್ರಂಥಾಲಯಗಳ ಉಳಿವಿಗಾಗಿ ಚಳವಳಿ, ಹೋರಾಟ, ಸಂಘಟನೆ, ಸಮಾವೇಶಗಳು ಅತಿಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ಪ್ರಗತಿಪರ ಮತ್ತು ಸಮಾಜಮುಖಿ ಸಂಘಟನೆಗಳು ಒಟ್ಟಾಗಿ ಬೆಂಗಳೂರಿನಲ್ಲಿ ಸಮಾವೇಶ ಏರ್ಪಡಿಸಿವೆ.

ಯುವ ಜನತೆ ಹಾದಿ ತಪ್ಪುತ್ತಿರುವ ಮೂಲ ಬೇರುಗಳು ಗ್ರಂಥಾಲಯಗಳ ನಾಶದಲ್ಲಿ ಅಡಗಿದೆ. ಅದನ್ನು ಸರಿ ದಾರಿಗೆ ತರಲು ದೇಶದ ಪ್ರತಿ ಗ್ರಾಮಗಳ ಮಟ್ಟದಲ್ಲಿ ಸುಸಜ್ಜಿತ ಗ್ರಂಥಾಲಯಗಳ ಸ್ಥಾಪನೆ ಆಡಳಿತದ ಅತ್ಯಂತ ಮಹತ್ವದ ನಿರ್ಧಾರವಾಗಬೇಕು.

ಈ ನಿಟ್ಟಿನಲ್ಲಿ ಎರಡನೇ ಭಾರತೀಯ ಗ್ರಂಥಾಲಯ ಅಧಿವೇಶನ ದಿನಾಂಕ 10/02/2024 ಮತ್ತು 11/02/2024 ಶನಿವಾರ ಮತ್ತು ಭಾನುವಾರ ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ ಬೆಂಗಳೂರು, ಇಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಇಡೀ ದಿನದ ಕಾರ್ಯಕ್ರಮಗಳಿದ್ದು, ಎರಡು ದಿನಗಳ ಅತ್ಯುತ್ತಮ ವಿಚಾರ ಸಂಕಿರಣಗಳನ್ನು ವ್ಯವಸ್ಥೆ ಮಾಡಲಾಗಿದೆ. ಆಸಕ್ತಿ ಇದ್ದವರು ಮತ್ತು ಸಮಯವಿದ್ದವರು ದಯವಿಟ್ಟು ಭಾಗವಹಿಸಿ.

ವಿವೇಕಾನಂದ ಎಚ್.ಕೆ.
ವಿವೇಕಾನಂದ ಎಚ್.ಕೆ.
+ posts

ಲೇಖಕರು, ಸಾಮಾಜಿಕ ಹೋರಾಟಗಾರರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿವೇಕಾನಂದ ಎಚ್.ಕೆ.
ವಿವೇಕಾನಂದ ಎಚ್.ಕೆ.
ಲೇಖಕರು, ಸಾಮಾಜಿಕ ಹೋರಾಟಗಾರರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X