ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ.30ರಷ್ಟು ಅನುದಾನ ಕಲ್ಪಿಸಲು ಹಾಗೂ ರಾಣೆಬೆನ್ನೂರಿನ ಅಭಿವೃದ್ಧಿಗಾಗಿ ಆಗ್ರಹಿಸಿ ಎಸ್ಎಫ್ಐ ವಿದ್ಯಾರ್ಥಿಗಳ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಂಡಿದ್ದು, ಶಾಸಕ ಪ್ರಕಾಶ ಕೋಳಿವಾಡ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್, “ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಹಣ ಮೀಸಲಿಡದ ಪರಿಣಾಮವಾಗಿ ಶಿಕ್ಷಣದ ವ್ಯವಸ್ಥೆ ದಿನೆ ದಿನೇ ಕುಸಿಯುತ್ತಿದೆ. ಸರ್ಕಾರಿ ಶಾಲಾ-ಕಾಲೇಜ್-ಹಾಸ್ಟೆಲ್‌ಗಳು ಮೂಲ ಸೌಲಭ್ಯವಿಲ್ಲದೆ ನರಳುತ್ತಿವೆ. ಹಾಗಾಗಿ, ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಹಣ ಮೀಸಲಿಡಬೇಕು” ಎಂದರು.
“ಶೇ.46ರಷ್ಟು ಸರ್ಕಾರಿ ಶಾಲಾ-ಕಾಲೇಜುಗಳು ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ನರಳುತ್ತಿವೆ. ಶೇ.38ರಷ್ಟು ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಸರ್ಕಾರಿ ಶಾಲೆಗಳಲ್ಲಿ ಸುಮಾರು ಕೊಠಡಿಗಳಿಗೆ ದುರಸ್ತಿಯ ಅಗತ್ಯವಿದೆ. ಕಳೆದ ಎರಡು ಶೈಕ್ಷಣಿಕ ವರ್ಷದಲ್ಲಿ (ಕೋರಾನ ಸಾಂಕ್ರಾಮಿಕ) 2021-22ರ ಅವಧಿಯ ರಾಜ್ಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಶೇ.14.6ರಷ್ಟು ವಂಚಿತರಾಗಿದ್ದಾರೆ” ಎಂದು ತಿಳಿಸಿದರು.
“ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸುವುದಕ್ಕಾಗಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ) ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಪಾಲಕರಿಂದ ಮನಸೋ ಇಚ್ಛೆ ಹಣ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲು ಮುಂದಾಗಬೇಕಿದೆ. ಉನ್ನತ ಶಿಕ್ಷಣ ಓದುತ್ತಿದ್ದ 37 ಲಕ್ಷ ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ. ಶೇ. 46ರಷ್ಟು ಸರ್ಕಾರಿ ಪದವಿ ಕಾಲೇಜುಗಳು ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿವೆ. ಪರೀಕ್ಷೆ ವಿಧಾನ, ಅಂಕಪಟ್ಟಿ ದೋಷ, ಶುಲ್ಕ ಏರಿಕೆ ಸೆಮಿಸ್ಟರ್ ಪದ್ಧತಿಯ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಬಾಧಿಸುತ್ತಿವೆ” ಎಂದರು.
ಎಸ್ಎಫ್ಐ ತಾಲೂಕು ಅಧ್ಯಕ್ಷ ಶ್ರೀಧರ್.ಸಿ ಮಾತನಾಡಿ, “ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದಂತಹ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇವುಗಳನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ʼಲೈಂಗಿಕ ಕಿರುಕುಳ ತಡೆ ಸಮಿತಿʼ ರಚಿಸುವಂತೆ ಹಾಗೆಯೇ ವರ್ಮಾ ಸಮಿತಿ ಶಿಫಾರಸ್ಸುಗಳನ್ನು ಪ್ರತೀ ಶಾಲಾ ಕಾಲೇಜುಗಳಲ್ಲಿ, ಹೆಣ್ಣು ಮಕ್ಕಳು ದುಡಿಯುವಂತಹ ಸ್ಥಳಗಳಲ್ಲಿ ಸಿಸಿ ಕ್ಯಾಮರ ಅಳವಡಿಕೆ. ಮಹಿಳಾ ಸಲಹಾ ಪೆಟ್ಟಿಗೆಯನ್ನು ತೆರೆಯಲು ಹೇಳಿರುವುದನ್ನು ಪಾಲಿಸಲಾಗಿಲ್ಲ. ವಿದ್ಯಾರ್ಥಿ ಮುಖಂಡರು, ಪಾಲಕರು ಪೊಲೀಸರು ಮತ್ತು ಪ್ರಾಂಶುಪಾಲರನ್ನು ಒಳಗೊಂಡಂತೆ ಸಮಿತಿ ರಚಿಸಲು ಸರ್ಕಾರ ಕ್ರಮ ವಹಿಸಬೇಕಿದೆ” ಎಂದರು.
ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಭಾರತೀಯ ಪರಂಪರೆ ಎಂದು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವ ವೈದಿಕ ವ್ಯವಸ್ಥೆಯನ್ನು ವೈಭವೀಕರಿಸುವ, ಧಾರ್ಮಿಕ ದ್ವೇಷ ಭಾವನೆಗಳನ್ನು ಬಿತ್ತುವ ಸಂಘಪರಿವಾರದ ಅಜೆಂಡಾಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಿದೆ ಅವುಗಳನ್ನು ತೆಗೆದು ಹಾಕಿ ಸಂವಿಧಾನದ ಆಶಯದಂತೆ ವೈಜ್ಞಾನಿಕ, ಪ್ರಗತಿಪರ ಹಾಗೂ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಲು ರಾಜ್ಯ ಸರಕಾರ ಸರಕಾರ ಮುಂದಾಗುವಂತೆ ಒತ್ತಾಯಿಸುತ್ತದೆ. ಎಸ್.ಎಫ್.ಐ ಒತ್ತಾಯಿಸುತ್ತದೆ ಎಂದರು.
ಮನವಿ ಪತ್ರ ಸ್ವೀಕರಿಸಿದ ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, “ಇಡೀ ದೇಶದಲ್ಲಿ ಕೇರಳ ರಾಜ್ಯವು ಶಿಕ್ಷಣದ ಅಭಿವೃದ್ಧಿಯಲ್ಲಿ ಮುಂದುವರಿದ ರಾಜ್ಯವಾಗಿದೆ. ಇದರ ಮಾದರಿಯಲ್ಲಿ ರಾಣೆಬೆನ್ನೂರಿನ ಶಿಕ್ಷಣದ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯರಿಗೂ ಶಿಕ್ಷಣ ನೀಡುವ ಅಕ್ಷರಸ್ಥ ರಾಣೇಬೆನ್ನೂರ ಮಾಡುವ ಯೋಜನೆ ಆಯೋಜಿಸಲಾಗುವುದು” ಎಂದರು.
ಈಗಾಗಲೇ ಕೆಲ ಕಂಪನಿಯಗಳ ಜೊತೆಗೆ ಮಾತನಾಡಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲು ಸಾಕಷ್ಟು ಶ್ರಮ ವಹಿಸಲಾಗುತ್ತಿದೆ. ಶಾಸಕರ ಅನುದಾನ 200 ಕೋಟಿ ರೂಪಾಯಿಗಳನ್ನು ಸ್ಥಳೀಯ ಶಿಕ್ಷಣದ ಬಳಕೆಗೆ ಹೆಚ್ಚು ಒತ್ತು ನೀಡಲಾಗುವುದು. ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣವನ್ನು ವಿಭಿನ್ನ ರೀತಿಯ ಆಕರ್ಷಿತವಾಗಿ ಮಾಡಲಾಗುತ್ತದೆ. ವಸತಿ ನಿಲಯದ ವಾರ್ಡನ್ ಗಳನ್ನು ಶೀಘ್ರವಾಗಿ ನೇಮಕ ಮಾಡಲಾಗುವುದು ಸೇರಿದಂತೆ ಅನೇಕ ಸ್ಥಳೀಯ ಸಮಸ್ಯೆಗಳ ಕುರಿತು ವಿದ್ಯಾರ್ಥಿ ಮುಖಂಡರೊಂದಿಗೆ ಚರ್ಚಿಸಿದರು ಹಾಗೂ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಉಪಾಧ್ಯಕ್ಷೆ ವೀಣಾ ಘಂಟೆರ್, ಮುಖಂಡರಾದ ಲಕ್ಷ್ಮಣ ಕೆ ವೇದಿಕೆಯಲ್ಲಿದರು. ಉಪಾಧ್ಯಕ್ಷ ನೇಹಾಲ್ ಖಾನ್ ಗಂಗಾವತಿ, ಮುಖಂಡರಾದ ಸಾವಿತ್ರ ಲಮಾಣಿ, ದ್ರಾಕ್ಷಾಯಿಣಿ ಎನ್, ಅನಿಲ ಮುನವಳ್ಳಿ, ನಾಗರೆಡ್ಡಿ, ಕಿರಣ ಎಸ್, ದುರಗಪ್ಪ ನಪೂರಿ, ಪುನೀತ್, ವಿನಾಯಕ ತುಮ್ಮಿನಕಟ್ಟಿ, ಮಹಮ್ಮದ್ ಮೆಡ್ಲೇರಿ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬೇಡಿಕೆಗಳು
- ಸರ್ಕಾರಿ ಪಿಯು ಕಾಲೇಜುಗಳಿಗೆ ಹೆಚ್ಚುವರಿ ಕೊಠಡಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
- ಜಿಲ್ಲೆಯಾದ್ಯಂತ ಪ್ರತೀ ತಾಲೂಕಿಗೂ ಸರ್ಕಾರಿ ಡಿಪ್ಲೋಮಾ ಕಾಲೇಜು, ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಜಿಟಿಟಿಸಿ ಕಾಲೇಜುಗಳನ್ನು ಮಂಜೂರು ಮಾಡಬೇಕು.
- ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
- ಜಿಲ್ಲೆಯಾದ್ಯಂತ ಇರುವ ಸರಕಾರಿ ವಸತಿ ನಿಲಯಗಳನ್ನು ಬಲಪಡಿಸಬೇಕು. ಹಾಗೂ ಹೆಚ್ಚುವರಿ ಹಾಸ್ಟೆಲ್ ಮಂಜೂರು ಮಾಡಬೇಕು.
- ರಾಣೆಬೆನ್ನೂರು ಬಸ್ ನಿಲ್ದಾಣ ಹೈಟೆಕ್ ಮಾದರಿಯಲ್ಲಿ ಸ್ಥಳಾಂತರ ಮಾಡಬೇಕು ಮತ್ತು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು.
- ರಾಜ್ಯ ಸರಕಾರ ತನ್ನ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಶೇ.30ರಷ್ಟು ಹಣ ಮೀಸಲಿಡಬೇಕು.
- ಸರ್ಕಾರಿ ಶಾಲಾ-ಕಾಲೇಜು-ಹಾಸ್ಟೆಲ್‌ಗಳನ್ನು ಬಲಪಡಿಸಲು ಆಗ್ರಹ.
- ಎಸ್.ಸಿ / ಎಸ್ ಟಿ ಮತ್ತು ಓಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮುಂದುವರಿಸಬೇಕು.
- ಹಾಸ್ಟೆಲ್ ವಿದ್ಯಾರ್ಥಿಗಳಿಗೆ 4.500 ಮಾಸಿಕ ಆಹಾರ ಭತ್ಯೆ ನೀಡುವಂತೆ, ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಹಾಸ್ಟೇಲ್‌ಗಳ ಸ್ಥಾಪನೆಗಾಗಿ ಮತ್ತು ಗುಣ ಮಟ್ಟದ ಸೌಲಭ್ಯಗಳಿಗೆ ಆಗ್ರಹ.
- ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ವಿರೋಧಿಸಿ, ಸೂಕ್ತ ರಕ್ಷಣೆಗೆ ಒತ್ತಾಯಿಸಿ, “ಎಲ್ಲ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿ” ರಚಿಸಿ.
- ಸರ್ಕಾರಿ ವಿವಿಗಳನ್ನು ಬಲಪಡಿಸಲು ಹಾಗೂ ವಿವಿಗಳಲ್ಲಿನ ಭ್ರಷ್ಟಾಚಾರಗಳ ಸೂಕ್ತ ತನಿಖೆಗೆ ಒತ್ತಾಯಿಸಿ. ಶಿಕ್ಷಣದ ವ್ಯಾಪಾರೀಕರಣ ಮತ್ತು ಕೋಮುವಾದೀಕರಣ ಕೈಬಿಡಲು ಆಗ್ರಹ.
- ಖಾಸಗಿ-ವಿದೇಶಿ ವಿಶ್ವವಿದ್ಯಾಲಯ ಸ್ಥಾಪನೆ ಕೈ ಬಿಡುವಂತೆ ಒತ್ತಾಯ.
- ನ್ಯಾಯಮೂರ್ತಿ ಲಿಂಗ್ ಸಮಿತಿಯ ಶಿಫಾರಸ್ಸಿನಂತೆ ವಿದ್ಯಾರ್ಥಿ ಸಂಘದ ಚುನಾವಣೆಗಳಿಗೆ ಒತ್ತಾಯ.
- ಖಾಲಿ ಇರುವ ಶಿಕ್ಷಕ-ಉಪನ್ಯಾಸಕ ಮತ್ತು ಬೋಧಕೇತರ ಹುದ್ದೆಗ ಳನ್ನು ಭರ್ತಿಮಾಡಿ.
- ಆರ್.ಟಿ.ಇ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ. ಡೊನೇಷನ್ ಹಾವಳಿಯನ್ನು ನಿಯಂತ್ರಿಸುವಂತೆ ಒತ್ತಾಯ.
- ಐ.ಟಿ.ಐ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು.
- ರಾಜ್ಯದಲ್ಲಿ ಹೆಚ್ಚುತ್ತಿರುವ ಟ್ಯೂಶನ್ ಹಾವಳಿ ನಿಯಂತ್ರಿಸಲು ಒತ್ತಾಯ.