ಭಾಲ್ಕಿ ತಾಲೂಕಿನ ಮಳಚಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಕಲ್ಲು ತೂರಾಟ ನಡೆಸಿದ ಅದೇ ಗ್ರಾಮದ 11 ಜನರ ವಿರುದ್ಧ ಪ್ರಕರಣ ದಾಖಲಿಸಿ, ಇಬ್ಬರನ್ನು ಧನ್ನೂರಾ ಠಾಣೆ ಪೊಲೀಸರು ಶನಿವಾರ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
“ಸಮಾಜ ಕಲ್ಯಾಣ ಇಲಾಖೆಯಿಂದ ಮಾಳಚಾಪೂರ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಂವಿಧಾನ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಈ ವೇಳೆ ಆಗಮಿಸಿದ ಯುವಕರ ಗುಂಪು ‘ಬನಾಯೆಂಗೆ ಮಂದಿರ’ ಹಾಡು ಹಾಕಿ ಎಂದು ಆಯೋಜಕರನ್ನು ಬಲವಂತ ಮಾಡಿದ್ದಾರೆ. ಬಳಿಕ ಗ್ರಾಮ ಪಂಚಾಯತ್ ಮುಂದೆ ನಡೆದ ಸಂವಿಧಾನ ಜಾಥಾ ಕಾರ್ಯಕ್ರಮದಲ್ಲಿ ಮತ್ತೆ ಆಗಮಿಸಿದ ಗುಂಪು ಭಗವಾ ಧ್ವಜಗಳೊಂದಿಗೆ ಬಂದು, ಕುಣಿದು ದಾಂದಲೆ ನಡೆಸಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ” ಎಂದು ಪರಿಶಿಷ್ಟ ಜಾತಿಯ ಷಣ್ಮುಖ ಶರಣಪ್ಪ ಹೊಸದೊಡ್ಡಿ ಅವರು ಧನ್ನೂರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ಈ ಕುರಿತು ಧನ್ನೂರಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ” ಎಂದು ಧನ್ನೂರಾ ಪಿಎಸ್‌ಐ ಈದಿನ.ಕಾಮ್ ಜೊತೆಗೆ ಮಾತನಾಡಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಮಾದ; ಪ್ರಯಾಣಿಕರ ʼದಾರಿ ತಪ್ಪಿಸುವʼ ನಾಮಫಲಕ!
“ಸ್ಥಳಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ ಭೇಟಿ ನೀಡಿ ಸಂವಿಧಾನ ಪೀಠಿಕೆ ಓದಿ, ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ನೆರವೇರಿಸಿದರು. ಸದ್ಯ ಪರಿಸ್ಥಿತಿ ಶಾಂತವಾಗಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.