ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಗೆ ಆಗ್ರಹಿಸಿ ಬೀದರ ಸೇರಿದಂತೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸಿದ್ರಾಮ ಪಾಟೀಲ ತಿಳಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ಸಂಬಳದಲ್ಲಿ ಕಡಿತಗೊಳಿಸಿ ಅರ್ಧದಷ್ಟು ಮಾತ್ರ ಸಂಬಳ ನೀಡುತ್ತಾರೆ. ಹೀಗಾಗಿ ನೇರವಾಗಿ ನಮ್ಮ ಸಂಬಳ ನಮಗೆ ಪಾವತಿಯಾದರೆ ನಮ್ಮ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ನಮ್ಮ ಕೆಲಸ ಖಾಯಮಾತಿಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಈ ಬಾರಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವರೆಗೂ ಪ್ರತಿಭಟನಾ ಧರಣಿ ಮುಂದುವರೆಸುತ್ತೇವೆ” ಎಂದರು.
ಈ ಹಿಂದೆ ಸಚಿವ ಈಶ್ವರ ಖಂಡ್ರೆಯವರು ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಹಾಲಿ ಪೌರಾಡಳಿತ ಸಚಿವ ರಹಿಮ್ ಖಾನ್ ಕೂಡಾ ನಮ್ಮ ಜಿಲ್ಲೆಯವರೇ ಇದ್ದಾರೆ. ನಮ್ಮ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ಬರದೇ ಇರುವ ಕಾರಣ ಪ್ರತಿಭಟನೆ ಮಾಡುತ್ತಿದ್ದೇವೆ. ಕಸ ಗುಡಿಸುವುದು, ಸ್ವಚ್ಛಗೊಳಿಸುವುದು, ಕಸ ವಿಲೇವಾರಿ ಸೇರಿದಂತೆ ಎಲ್ಲಾ ಕೆಲಸಗಳು ಸ್ಥಗಿತಗೊಳಿಸಿ ಧರಣಿ ನಡೆಸುತ್ತೇವೆ” ಎಂದು ಎಚ್ಚರಿಸಿದರು.
ಈ ಬಾರಿ ಸರ್ಕಾರ ನಮ್ಮ ಸಮಸ್ಯೆ ಬಗೆಹರಿಯದಿದ್ದಲ್ಲಿ ಫೆ.15 ರಂದು ʼಬೆಂಗಳೂರು ಚಲೋʼ ಆಯೋಜಿಸಿ ʼಹೊರಗುತ್ತಿಗೆ ನೌಕರರ ನಡಿಗೆ, ಮುಖ್ಯಮಂತ್ರಿಗಳ ಮನೆ ಕಡೆಗೆʼ ಎಂಬ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಇಡೀ ರಾಜ್ಯದ ಎಲ್ಲ ಹೊರಗುತ್ತಿಗೆ ಪೌರ ಕಾರ್ಮಿಕರು ಅಲ್ಲಿ ಪಾಲ್ಗೊಳ್ಳುವರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಂವಿಧಾನ ಜಾಗೃತಿ ಜಾಥಾಕ್ಕೆ ಅಡ್ಡಿ: 11 ಜನರ ವಿರುದ್ಧ ಪ್ರಕರಣ ದಾಖಲು, ಇಬ್ಬರು ಬಂಧನ
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ ಪಾಸ್ವಾನ್, ಸೇರಿದಂತೆ ಪ್ರಮುಖರಾದ ರಾಜಕುಮಾರ, ಪವನ, ಯೇಸುದಾಸ, ಮಾರುತಿ ಕಂಟಿ ಇದ್ದರು.